ಮೈಸೂರು: 80 ಮೀಟರ್ ಉದ್ದ 100 ಮೀಟರ್ ಅಗಲ (86,111 ಚದರ ಅಡಿ) ಅಳತೆಯಲ್ಲಿ ಭಾರತ ರತ್ನ ಸರ್. ಎಂ. ವಿಶ್ವೇಶ್ವರಯ್ಯ ಅವರ ಬೃಹತ್ ಭಾವಚಿತ್ರ ಬಿಡಿಸಿ, ನಗುನಹಳ್ಳಿಯಲ್ಲಿರುವ ಮೈಸೂರು ಮಹಾರಾಜ ತಾಂತ್ರಿಕ ಮಹಾವಿದ್ಯಾಲಯ (ಎಂಐಟಿ)ವು ದಾಖಲೆ ಮಾಡಿದೆ.
ಸೆ.15ರ ಇಂಜಿನಿಯರ್ ದಿನಾಚರಣೆ ನಿಮಿತ್ತ ಮೈಸೂರು ಮಹಾರಾಜ ತಾಂತ್ರಿಕ ಮಹಾವಿದ್ಯಾಲಯದ (ಎಂಐಟಿ) ಸಿವಿಲ್ ಎಂಜಿನಿಯರಿಂಗ್ ವಿಭಾಗವು ಬೆಂಗಳೂರಿನ ಸಾಯಿ ಕ್ಯಾಡ್ಡ್ ಸಂಸ್ಥೆಯ ಸಹಯೋಗದೊಂದಿಗೆ ಈ ದಾಖಲೆ ಮಾಡಿದೆ.
ದೇಶ ಕಂಡ ಶ್ರೇಷ್ಠ ಇಂಜಿನಿಯರ್, ಮೈಸೂರು ರಾಜ್ಯದ ದಿವಾನರಾದ ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯ ಅವರ 164ನೇ ಜಯಂತಿ ನಿಮಿತ್ತ ಮಹಾವಿದ್ಯಾಲಯದ ಕ್ರೀಡಾಂಗಣದಲ್ಲಿ 86,111 ಚದರ ಅಡಿ ಬೃಹತ್ ಭಾವಚಿತ್ರ ನಿರ್ಮಿಸಿ, ವರ್ಲ್ಡ್ ರೆಕಾರ್ಡ್‌ಗೆ ಅರ್ಜಿ ಹಾಕಿದ್ದಾರೆ.
ಈ ಬೃಹತ್ ಭಾವಚಿತ್ರವನ್ನು ಎಂ ಸ್ಯಾಂಡ್, 40 ಮಿಮೀ ಜಲ್ಲಿ, ನೈಲಾನ್ ದಾರ, ಹಾನಿಕಾರಕವಲ್ಲದ ಬಣ್ಣಗಳು ಮತ್ತು ಮಣ್ಣುಗಳ ಬಳಕೆಯಿಂದ ನಿರ್ಮಿಸಲಾಗಿದೆ. ಇದರಲ್ಲಿ ಸಿವಿಲ್ ಇಂಜಿನಿಯರಿಂಗ್ ಸೇರಿದಂತೆ 120ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು, 35ಕ್ಕೂ ಹೆಚ್ಚಿನ ಅಧ್ಯಾಪಕರು ಹಾಗೂ ಸಾಯಿ ಕ್ಯಾಡ್ಡ್ ಸಂಸ್ಥೆಯ ಸ್ವಯಂಸೇವಕರು ಪಾಲ್ಗೊಂಡಿದ್ದು, ಬೃಹತ್ ಭಾವಚಿತ್ರವನ್ನು ಪೂರ್ಣಗೊಳಿಸಿದ್ದಾರೆ.
ಮಹಾವಿದ್ಯಾಲಯದ ಅಧ್ಯಕ್ಷ ಡಾ. ಬಿ. ಜಿ. ನರೇಶ್‌ಕುಮಾರ್, ಪ್ರಾಂಶುಪಾಲ ಡಾ. ಎಸ್. ಮುರಳಿ, ಸಿವಿಲ್ ವಿಭಾಗದ ಮುಖ್ಯಸ್ಥ ಡಾ. ಸಿ. ರಾಮಕೃಷ್ಣೇಗೌಡ ಮತ್ತು ಸಾಯಿ ಕ್ಯಾಡ್ಡ್ ಸಂಸ್ಥೆಯ ಮಾಲೀಕ ಎಂ. ಮಂಜುನಾಥ ರೆಡ್ಡಿ ಇವರ ಮಾರ್ಗದರ್ಶನದಲ್ಲಿ ಸರ್ ಎಂ. ವಿಶ್ವೇಶ್ವರಯ್ಯ ಅವರ ಬೃಹತ್ ಭಾವಚಿತ್ರ ನಿರ್ಮಾಣವಾಗಿದೆ.
Laxmi News 24×7