ಬೆಂಗಳೂರು: ರಾಜ್ಯದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗಳ ಸಮೀಕ್ಷೆಗೆ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶ ಪ್ರಶ್ನಿಸಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳಿಗೆ ಸಂಬಂಧಿಸಿದಂತೆ ಕೇಂದ್ರ, ರಾಜ್ಯ ಸರ್ಕಾರಗಳಿಗೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ಸಮೀಕ್ಷೆಗಾಗಿ 2025ರ ಆಗಸ್ಟ್ 13ರಂದು ಸರ್ಕಾರ ಹೊರಡಿಸಿರುವ ಆದೇಶ ಪ್ರಶ್ನಿಸಿ ರಾಜ್ಯ ಒಕ್ಕಲಿಗರ ಸಂಘ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ, ಮಾಜಿ ಶಾಸಕರೂ ಆದ ಹಿರಿಯ ವಕೀಲ ಕೆ ಎನ್ ಸುಬ್ಬಾರೆಡ್ಡಿ ಮತ್ತಿತರರು ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಈ ಅರ್ಜಿಗಳ ವಿಚಾರಣೆ ನಡೆಸಿದ ಅನು ಶಿವರಾಮನ್ ಮತ್ತು ನ್ಯಾಯಮೂರ್ತಿ ಕೆ ರಾಜೇಶ್ ರೈ ಅವರ ನೇತೃತ್ವದ ವಿಭಾಗೀಯ ಪೀಠ, ಮುಂದಿನ ವಿಚಾರಣೆಯನ್ನು 22ಕ್ಕೆ ನಿಗದಿ ಪಡಿಸಿತು.
ಅಲ್ಲದೆ, ರಾಜ್ಯ ಸರ್ಕಾರಗಳು, ರಾಜ್ಯ ಹಿಂದುಳಿದ ವರ್ಗಗಳ ಆಯೋಗ, ಕೇಂದ್ರ ಸರ್ಕಾರ ಜಾತಿ ಗಣತಿ ಪ್ರಾಧಿಕಾರ, ಗಣತಿ ರಿಜಿಸ್ಟ್ರಾರ್ ಸೇರಿದಂತೆ ಎಲ್ಲ ಸಂಬಂಧಿತ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿದೆ. ಸಮೀಕ್ಷೆಗೆ ತಡೆ ಕೋರಿರುವ ಮಧ್ಯಂತರ ಕೋರಿಕೆಯ ಸಂಬಂಧ ಸೋಮವಾರ ವಿಚಾರಣೆ ನಡೆಸುವುದಾಗಿ ತಿಳಿಸಿ, ವಿಚಾರಣೆ ಮುಂದೂಡಿತು.
ವಿಚಾರಣೆ ವೇಳೆ ಅರ್ಜಿದಾರರ ಪರವಾಗಿ ವಾದ ಮಂಡಿಸಿದ ವಕೀಲರು, ಸಮೀಕ್ಷೆಯನ್ನು ನಾವು ಈಗಾಗಲೇ ಆರಂಭಿಸಿದ್ದೇವೆ ಎಂಬ ಹೇಳಿಕೆಯನ್ನು ಆಯೋಗ ನೀಡಬಾರದು. ಏಕೆಂದರೆ ಅದನ್ನು ಹಿಂದಕ್ಕೆ ಸರಿಯುವಂತೆ ಮಾಡಲಾಗದು ಎಂದರು.
ಇದಕ್ಕೆ ಆಯೋಗದ ಪರ ವಕೀಲರು, ಈಗಾಗಲೇ ಎರಡು ಕೋಟಿ ಕುಟುಂಬಗಳಿಗೆ ಸಮೀಕ್ಷೆಯ ಪ್ರತಿಯನ್ನು ಪೂರೈಸಲಾಗಿದೆ. ಅರ್ಜಿದಾರರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಎಂದು ಪೀಠಕ್ಕೆ ತಿಳಿಸಿದರು.
ಈ ವೇಳೆ ಸುಬ್ಬಾರೆಡ್ಡಿ ಪರ ವಕೀಲರು, ಸೆಪ್ಟೆಂಬರ್ 22ಕ್ಕೆ ಸಮೀಕ್ಷೆ ಆರಂಭವಾಗುತ್ತದೆ ಎಂದು ಹೇಳಲಾಗಿದೆ. ವಿಭಾಗೀಯ ಪೀಠ ಅರ್ಜಿ ವಿಚಾರಣೆ ನಡೆಸುವವರೆಗೆ ಸಮೀಕ್ಷೆ ಮುಂದುವರಿಸದಂತೆ ಅವರು ಹಿಂದೆ ಸರಿಯಬೇಕು. ಸರ್ಕಾರ ನಡೆಸುತ್ತಿರುವ ವಿಧಾನಕ್ಕೆ ಆಕ್ಷೇಪಿಸಿದ್ದೇವೆ ಎಂದರು.
ಆಗ ಆಯೋಗದ ಪರ ವಕೀಲರು, ಚಿನ್ನಪ್ಪ ರೆಡ್ಡಿ ಆಯೋಗದ ಪ್ರಕಾರ ಮುಂದುವರಿದ ಜಾತಿಗಳು ಎನಿಸಿಕೊಂಡಿರುವವರು ಅರ್ಜಿದಾರರ ರೂಪದಲ್ಲಿ ಸಮೀಕ್ಷೆಯನ್ನು ತಡೆಯಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.
ಹಿರಿಯ ವಕೀಲ ಶ್ರೀರಂಗ, ಜಾತಿ ಸಮೀಕ್ಷೆಯಲ್ಲಿ ದತ್ತಾಂಶ ಸಂಗ್ರಹಿಸಲು ಇಂಧನ ಇಲಾಖೆಯಲ್ಲಿ ಮೀಟರ್ ರೀಡರ್‌ಗಳಾಗಿರುವವರ ಸೇವೆ ಪಡೆಯಲು ಮುಂದಾಗಲಾಗಿದೆ. ಖಾಸಗಿ ಕಂಪನಿಗಳು ಮೀಟರ್ ರೀಡಿಂಗ್ ಕೆಲಸ ಮಾಡುತ್ತಿವೆ. ದತ್ತಾಂಶವು ಖಾಸಗಿ ಸಂಸ್ಥೆಗಳ ಕೈವಶವಾಗಲಿದ್ದು, ಅದಕ್ಕೆ ಯಾವುದೇ ಭದ್ರತೆ ಇಲ್ಲವಾಗಲಿದೆ ಎಂದು ಪೀಠಕ್ಕೆ ವಿವರಿಸಿದರು.
Laxmi News 24×7