ಬೆಂಗಳೂರು: ಧರ್ಮಸ್ಥಳ ಪ್ರಕರಣದಲ್ಲಿ ಷಡ್ಯಂತ್ರ ಮಾಡಿದವರನ್ನು ಮುಟ್ಟದಂತೆ ಎಸ್ಐಟಿಗೆ ರಾಜಕೀಯ ಒತ್ತಡವಿದೆ. ನಿರೀಕ್ಷೆಗೆ ತಕ್ಕಂತೆ, ಪೊಲೀಸ್ ಪದ್ಧತಿ ಪ್ರಕಾರ ತನಿಖೆ ನಡೆಯುತ್ತಿಲ್ಲ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಅಸಮಾಧಾನ ವ್ಯಕ್ತಪಡಿಸಿದರು.
ಬೆಂಗಳೂರಿನಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಮಾಸ್ಕ್ ಮ್ಯಾನ್ನ ದೂರು ಹುಸಿಯಾದ ನಂತರ ಬೇರೆ ಬೇರೆ ದೂರುಗಳು ದಾಖಲಾಗುತ್ತಿವೆ. ಎಸ್ಐಟಿಗೆ ಉತ್ತರದಾಯಿತ್ವ ಇದೆ, ಜವಾಬ್ದಾರಿ ಇದೆ. ಎಸ್ಐಟಿಯವರು ಷಡ್ಯಂತ್ರ ಮಾಡಿದ ಮುಖ್ಯ ವ್ಯಕ್ತಿಗಳನ್ನೇ ಇನ್ನೂ ಮುಟ್ಟಿಲ್ಲ. ಎಸ್ಐಟಿಯವರು ನಮ್ಮನ್ನು ಮುಟ್ಟಲ್ಲ ಅಂತ ಅವರಿಗೂ ಖಾತ್ರಿ ಆಗಿದೆ. ಅದಕ್ಕಾಗಿಯೇ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಹೊಸ ಹೊಸ ದೂರುಗಳು ಬರುತ್ತಿವೆ. ಅವುಗಳನ್ನೂ ತನಿಖೆ ಮಾಡುತ್ತಿದ್ದಾರೆ. ಶೀಘ್ರದಲ್ಲೇ ಎಸ್ಐಟಿ ಇಲ್ಲಿವರೆಗೆ ಆಗಿರುವ ತನಿಖೆಯ ಬಗ್ಗೆ ವರದಿ ಕೊಡಲಿ” ಎಂದು ಆಗ್ರಹಿಸಿದರು.
ಜಾತಿ ಜನಗಣತಿ ಮೂಲಕ ಕ್ರೈಸ್ತ ಧರ್ಮಕ್ಕೆ ಮತಾಂತರ ಆರೋಪದ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ, “ಸಂವಿಧಾನದಲ್ಲಿ ಕೇವಲ ಆರು ಧರ್ಮಗಳಿವೆ. ಅಷ್ಟೇ ಧರ್ಮಗಳ ಹೆಸರು ಬರೆಯಬೇಕು. ರಾಜ್ಯದಲ್ಲಿ ಮತಾಂತರಗೊಂಡ ಕ್ರೈಸ್ತರು ಅನ್ನುವ ಹೊಸ ಕಾಲಂ ಮಾಡಿದ್ದಾರೆ. ಇದೊಂದು ಧರ್ಮದ ರೀತಿ ಕಾಲಂ ಮಾಡಿದ್ದಾರೆ. ಇದು ಕಾನೂನುಬಾಹಿರ, ಸಂವಿಧಾನಬಾಹಿರ, ರಾಜಕೀಯಪ್ರೇರಿತ. ಎರಡೂ ಕಡೆಯೂ ಮತಾಂತರ ಆಗಿರುತ್ತದೆ. ಆದರೆ, ಸಿಎಂ ಕ್ರೈಸ್ತ ಧರ್ಮದ ಮತಾಂತರಕ್ಕೆ ಮಾತ್ರ ಮನ್ನಣೆ ಕೊಟ್ಟಿರೋದೇಕೆ?” ಎಂದು ಪ್ರಶ್ನಿಸಿದರು.
“ಸಿಎಂ ಅವರು ಒಂದು ಹೆಜ್ಜೆ ಮುಂದೆ ಹೋಗಿ ಮತಾಂತರ ಅವರ ಹಕ್ಕು ಅಂದಿದ್ದಾರೆ. ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಯಲ್ಲಿದೆ. ಹಿಂದೂ ಧರ್ಮದಲ್ಲಿ ಸಮಾನತೆ ಇಲ್ಲ ಅಂತ ಸಿಎಂ ಹೇಳಿದ್ದಾರೆ. ಇದು ಸಮಾನತೆಯ ಪ್ರಶ್ನೆ ಅಲ್ಲ, ಆಸೆ, ಆಮಿಷ ಒಡ್ಡಿ ಮತಾಂತರ ಆಗಿದ್ದಾರೆ. ಅವರ ಬಡತನ, ಶಿಕ್ಷಣ ಇಲ್ಲದಿರುವುದನ್ನು ದುರುಪಯೋಗಪಡಿಸಿಕೊಂಡು ಮತಾಂತರ ಮಾಡಲಾಗಿದೆ. ಹಲವರು ಕ್ರೈಸ್ತ ಧರ್ಮದಿಂದ ವಾಪಸ್ ಬಂದಿದ್ದಾರೆ. ಈ ಮತಾಂತರದ ಬಗ್ಗೆಯೇ ಹಲವು ಅನುಮಾನಗಳಿವೆ. ಇವರಿಗೆ ಜಾತಿ ಕಾಲಂನಲ್ಲಿ ಮತಾಂತರಗೊಂಡವರಿಗೆ ಹೊಸ ಕಾಲಂ ಮಾಡಲು ಯಾರು ಅಧಿಕಾರ ಕೊಟ್ಟರು? ಯಾವ ಕಾನೂನಿನಲ್ಲಿದೆ?” ಎಂದು ಟೀಕಿಸಿದರು.
“ತಮ್ಮ ಅಕ್ಕಪಕ್ಕ ಹಿಂದೆಮುಂದೆ ಇರುವವರ ಸಲಹೆ ಪಡೆದು ಅದನ್ನು ಸೇರಿಸಿದ್ದಾರೆ. ಇದು ಧರ್ಮಧರ್ಮಗಳ ನಡುವೆ, ವಿಷಬೀಜ ಬಿತ್ತುವ, ಗಲಭೆ ಮಾಡಿಸುವ ಕೆಲಸಕ್ಕೆ ಈಗಾಗಲೇ 350 ಕೋಟಿ ರೂ. ಪೋಲು ಮಾಡಿದ್ದಾರೆ. ಈಗ 420 ಕೋಟಿ ಮತ್ತೆ ಪೋಲು ಮಾಡಲು ಹೊರಟಿದ್ದಾರೆ. ಸಾಮಾಜಿಕ, ಆರ್ಥಿಕ ಸಮೀಕ್ಷೆಗೆ ಜಾತಿ ಏಕೆ ಬೇಕು? ಡಿಸೆಂಬರ್ನಲ್ಲಿ ಜಾತಿ ಜನಗಣತಿ ವರದಿ ಕೊಡಿ ಅಂತ ಆಯೋಗಕ್ಕೆ ಸಿಎಂ ಹೇಳಿದ್ದಾರೆ. ಈ ಕಡೆ ಡಿಸೆಂಬರ್ನಲ್ಲಿ ನಾಯಕತ್ವ ಬದಲಾವಣೆ ಆಗಬೇಕು ಅಂತ ಡಿ.ಕೆ.ಶಿವಕುಮಾರ್ ಬಣ ಹೇಳುತ್ತಿದೆ. ಡಿಕೆಶಿ ಸಿಎಂ ಆಗುತ್ತಾರೆ ಅಂತಿದ್ದಾರೆ. ಹೀಗಾಗಿ ತಮ್ಮ ಕುರ್ಚಿ ಗಟ್ಟಿ ಮಾಡಿಕೊಳ್ಳಲು ಸಿಎಂ ಜಾತಿ ಸಮೀಕ್ಷೆ ವರದಿಯನ್ನು ರಾಜಕೀಯವಾಗಿ ಬಳಸಲು ಮುಂದಾಗಿದ್ದಾರೆ” ಎಂದು ಆರೋಪಿಸಿದರು.
Laxmi News 24×7