ಬೀದರ್: ಜಿಲ್ಲೆಯ ಭಾಲ್ಕಿ ತಾಲೂಕಿನ ಮರೂರ ಕಾಲುವೆ ಬಳಿ ಮಂಗಳವಾರ ಹೃದಯವಿದ್ರಾವಕ ಘಟನೆಯೊಂದು ನಡೆದಿದೆ. ಮರೂರ ಹತ್ತಿರ ಹಾದುಹೋಗುವ ಕಾರಂಜಾ ಜಲಾಶಯದ ಕಾಲುವೆಯಲ್ಲಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿದ್ದು, ಇಬ್ಬರು ಬದುಕುಳಿದಿದ್ದಾರೆ.
ಬೀದರ್ ನಗರದ ಮೈಲೂರು ಬಡಾವಣೆಯ ಶಿವಮೂರ್ತಿ ಮಾರುತಿ (45), ಮತ್ತು ಅವರ 9 ವರ್ಷ, 7 ವರ್ಷ ಹಾಗೂ ಏಳು ತಿಂಗಳು ವಯಸ್ಸಿನ ಮಕ್ಕಳು ದುರಂತ ಅಂತ್ಯ ಕಂಡಿದ್ದಾರೆ. ಶಿವಮೂರ್ತಿ ಅವರ ಪತ್ನಿ ರಮಾಬಾಯಿ, ಮತ್ತು ಇನ್ನೋರ್ವ ಪುತ್ರ ಪ್ರಾಣಾಪಾಯದಿಂದ ಪರಾಗಿದ್ದಾರೆ.

ಈ ದುರಂತಕ್ಕೆ ಕೌಟುಂಬಿಕ ಕಲಹ ಹಾಗೂ ಸಹೋದರ ಆಸ್ತಿ ವ್ಯವಹಾರದ ಜಗಳದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಧನ್ನೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವ ಖಂಡ್ರೆ ಭೇಟಿ, ಸಾಂತ್ವನ: ಈ ದುರಂತ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬೀದರ್ ತಾಲೂಕಿನ ಮೈಲೂರು ನಿವಾಸಿಗಳಾದ ಒಂದೇ ಕುಟುಂಬದ ಆರು ಜನರು ಆತ್ಮಹತ್ಯೆಗೆ ಯತ್ನಿಸಿ, ತಂದೆ ಸೇರಿದಂತೆ ಮೂವರು ಅಪ್ರಾಪ್ತ ವಯಸ್ಸಿನ ಮಕ್ಕಳು ದುರ್ಮರಣ ಹೊಂದಿರುವುದು ಅತೀವ ದುಃಖಕರ ಘಟನೆ. ಅದೃಷ್ಟವಶಾತ್ ತಾಯಿ ಹಾಗೂ ಒಬ್ಬ ಮಗ ಬದುಕುಳಿದಿದ್ದಾರೆ ಎಂದು ತಿಳಿಸಿದರು.
ಇದೇ ವೇಳೆ ಸಚಿವರು ಮೃತರ ಕುಟುಂಬದವರನ್ನು ಭೇಟಿಯಾಗಿ ಸಾಂತ್ವನ ಹೇಳಿದರು. ಆತ್ಮಹತ್ಯೆಗೆ ಕಾರಣವಾದ ಹಿನ್ನೆಲೆ ಹಾಗೂ ಪ್ರಚೋದನೆ ಸೇರಿದಂತೆ ಎಲ್ಲಾ ವಿಷಯಗಳ ಕುರಿತು ಸಮಗ್ರವಾಗಿ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅಲ್ಲದೆ ಸರ್ಕಾರದ ವತಿಯಿಂದ ಸೂಕ್ತ ಪರಿಹಾರ ಒದಗಿಸಲಾಗುವುದು ಎಂದು ಭರವಸೆ ನೀಡಿದ ಸಚಿವರು, ಮೃತರ ಆತ್ಮಗಳಿಗೆ ಶಾಂತಿ ಸಿಗಲಿ ಹಾಗೂ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಪ್ರಾರ್ಥಿಸಿದರು.
ಇತ್ತೀಚಿನ ಘಟನೆ: ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿ ತಾಯಿಯೋರ್ವಳು ಒಂದೂವರೆ ವರ್ಷದ ಮಗುವನ್ನು ಕೊಂದು ಬಳಿಕ ತಾಯಿ ಆತ್ಮಹತ್ಯೆ ಮಾಡಿಕೊಂಡ ಹೃದಯವಿದ್ರಾವಕ ಘಟನೆ ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯ ಕುಂಜಾಲು ಹೇರಂಜೆ ಕ್ರಾಸ್ ಬಳಿ ಸೆಪ್ಟಂಬರ್ 2 ರಂದು ನಡೆದಿತ್ತು.
ಸ್ಥಳಕ್ಕೆ ಬ್ರಹ್ಮಾವರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಕೂಡ ತಮ್ಮ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಘಟನಾ ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿ ಹೆಚ್ಚುವರಿ ಮಾಹಿತಿ ಕಲೆ ಹಾಕಿದ್ದರು.
Laxmi News 24×7