ಚಂದನವನದ ಹಿರಿಯ ನಟಿಯರಾದ ಜಯಮಾಲಾ, ಶ್ರುತಿ ಮತ್ತು ಮಾಳವಿಕಾ ಅವಿನಾಶ್ ಅವರಿಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ದಿ.ನಟ ವಿಷ್ಣುವರ್ಧನ್ ಅವರಿಗೆ ಮರಣೋತ್ತರ ‘ಕರ್ನಾಟಕ ರತ್ನ’ ಪ್ರಶಸ್ತಿ ಘೋಷಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಮಂಗಳವಾರದಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಇದೇ ಮನವಿ ಸಲ್ಲಿಸಿದ್ದರು.
ಸದಾಶಿವನಗರದ ಡಿಸಿಎಂ ನಿವಾಸದಲ್ಲಿ ಭೇಟಿ: ಇತ್ತೀಚೆಗೆ ವಿಧಿವಶರಾದ ಬಿ.ಸರೋಜಾ ದೇವಿ ಅವರಿಗೂ ‘ಕರ್ನಾಟಕ ರತ್ನ’ ಪ್ರಶಸ್ತಿ ಘೋಷಿಸುವಂತೆ ಮತ್ತು ಮಲ್ಲೇಶ್ವರಂ ರಸ್ತೆಗೆ ಅವರ ಹೆಸರಿಡುವಂತೆ ಮನವಿ ಮಾಡಿದ್ದಾರೆ. ಡಿ.ಕೆ.ಶಿವಕುಮಾರ್ ಅವರ ಸದಾಶಿವನಗರದ ನಿವಾಸದಲ್ಲಿ ಈ ಭೇಟಿ ಸಂಭವಿಸಿದೆ.
ನಟಿ ಜಯಮಾಲಾ ಪ್ರತಿಕ್ರಿಯೆ: ಭೇಟಿ ಬಳಿಕ ಹಿರಿಯ ನಟಿ ಜಯಮಾಲಾ ಪ್ರತಿಕ್ರಿಯಿಸಿ, ”ಸೆಪ್ಟೆಂಬರ್ 18ಕ್ಕೆ ವಿಷ್ಣುವರ್ಧನ್ ಅವರ 75ನೇ ಜನ್ಮದಿನೋತ್ಸವವಿದೆ. ಅವರಿಗೆ ಮರಣೋತ್ತರ ಕರ್ನಾಟಕ ರತ್ನ ನೀಡಬೇಕು ಎಂದು ಉಪಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದ್ದೇವೆ. ಡಿಸಿಎಂ ಕೂಡಾ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ”.
”ಇತ್ತೀಚೆಗೆ ನಿಧನರಾದ ಸರೋಜಾ ದೇವಿ ಅವರಿಗೂ ಪ್ರಶಸ್ತಿ ನೀಡಬೇಕು ಎಂದು ಕೇಳಿಕೊಂಡಿದ್ದೇವೆ. ಹಾಗೇ, ಸರೋಜಾ ದೇವಿ ಮನೆಯ ರಸ್ತೆಗೆ (ಮಲ್ಲೇಶ್ವರಂ) ಅವರ ಹೆಸರಿಡಬೇಕು ಅಂತಾ ಮನವಿ ಮಾಡಿದ್ದೇವೆ. ಇದು ನಮ್ಮ ಕರ್ತವ್ಯ. ಚಿತ್ರೋದ್ಯಮದ ಪರವಾಗಿದ್ದೇವೆ ಎಂದು ಡಿಸಿಎಂ ತಿಳಿಸಿದ್ದಾರೆ. ಸಕಾರಾತ್ಮವಾಗಿ ಸ್ಪಂದಿಸಿದ್ದಾರೆ. ಅವರ ಅಭಿಮಾನಿಗಳಿಗೆ ಸಂತೋಷವಾಗುವಂತಹ ನಿರ್ಧಾರ ತೆಗೆದುಕೊಳ್ತೇವೆ ಎಂದಿದ್ದಾರೆ. ಇದರಿಂದ ನಮಗೂ ಸಂತೋಷವಾಗಿದೆ” ಎಂದು ತಿಳಿಸಿದ್ದಾರೆ.
ನಟಿ ಮಾಳವಿಕಾ ಅವಿನಾಶ್ ಪ್ರತಿಕ್ರಿಯೆ: ಇತ್ತೀಚೆಗೆ, ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿದ್ದೆವು. ವಿಷ್ಣುವರ್ಧನ್ ಹಾಗೂ ಸರೋಜಾ ದೇವಿ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಘೋಷಿಸುವಂತೆ ಮನವಿ ಮಾಡಿದ್ದೆವು. ಭರವಸೆ ಕೊಟ್ಟಿದ್ದಾರೆ. ಏನು ಮಾಡಬೇಕೋ ಅದನ್ನು ಮಾಡುತ್ತೇವೆಂದು ತಿಳಿಸಿದ್ದರು. ಇದೀಗ ಉಪಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ, ಮನವಿ ಸಲ್ಲಿಸಿದ್ದೇವೆ. ಇಬ್ಬರೂ ಮನವಿಗೆ ಸ್ಪಂದಿಸಿದ್ದಾರೆ.
ಭರವಸೆ ಈಡೇರಿಸುವ ಭರವಸೆ ಕೊಟ್ಟಿದ್ದಾರೆ ಎಂದು ತಿಳಿಸಿದರು.
ಡಿ.ಕೆ.ಶಿವಕುಮಾರ್ ಎಕ್ಸ್ ಪೋಸ್ಟ್: ಇಂದು ಭೇಟಿಯ ಫೋಟೋಗಳನ್ನು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಹಂಚಿಕೊಂಡ ಉಪಮುಖ್ಯಮಂತ್ರಿ, ”ಖ್ಯಾತ ನಟಿಯರಾದ ಜಯಮಾಲಾ, ಶ್ರುತಿ ಹಾಗೂ ಮಾಳವಿಕಾ ಅವಿನಾಶ್ ಅವರು ಇಂದು ನನ್ನನ್ನು ಗೃಹ ಕಚೇರಿಯಲ್ಲಿ ಭೇಟಿಯಾಗಿ, ಮೇರು ನಟ ವಿಷ್ಣುವರ್ಧನ್ ಅವರಿಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ನೀಡುವಂತೆ ಹಾಗೂ ಅವರ ಸ್ಮಾರಕ ನಿರ್ಮಾಣ ಸಂಬಂಧ ಮನವಿ ಸಲ್ಲಿಸಿದರು. ಇದೇ ವೇಳೆ, ಇತ್ತೀಚೆಗೆ ನಿಧನರಾದ ನಟಿ ಬಿ.ಸರೋಜಾ ದೇವಿ ಅವರ ಹೆಸರನ್ನು ಅವರು ವಾಸವಿದ್ದ ಮಲ್ಲೇಶ್ವರಂನ ರಸ್ತೆಗೆ ನಾಮಕರಣ ಮಾಡುವಂತೆಯೂ ಮನವಿ ಮಾಡಿದರು” ಎಂದು ಬರೆದುಕೊಂಡಿದ್ದಾರೆ.
Laxmi News 24×7