ಬೆಳಗಾವಿ: ಬೆಳಗಾವಿಯ ಶಹಾಪುರದ ಚಿಂತಾಮಣರಾವ್ ಪದವಿಪೂರ್ವ ಸರ್ಕಾರಿ ಕಾಲೇಜಿನ ಕನ್ನಡ ಉಪನ್ಯಾಸಕಿ ಜ್ಯೋತಿ ಸಿ.ಎಂ. ಅವರಿಗೆ ಇಂದು ಸಿಎಂ ಸಿದ್ದರಾಮಯ್ಯ ಅವರು ರಾಜ್ಯ ಸರ್ಕಾರದ ಉತ್ತಮ ಉಪನ್ಯಾಸಕಿ ಪ್ರಶಸ್ತಿ ಪ್ರದಾನ ಮಾಡಿದರು.
ಶಾಲಾ ಶಿಕ್ಷಣ ಮತ್ತು ಸಾಕ್ಷಾರತಾ ಇಲಾಖೆ ಹಾಗೂ ಉನ್ನತ ಶಿಕ್ಷಣ ಇಲಾಖೆ ವತಿಯಿಂದ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಶುಕ್ರವಾರ ಆಯೋಜಿಸಿದ್ದ ಭಾರತ ರತ್ನ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನಾಚರಣೆ ನಿಮಿತ್ತ ರಾಜ್ಯಮಟ್ಟದ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ಮುಖ್ಯಮಂತ್ರಿಗಳು ಪ್ರಶಸ್ತಿ ಪ್ರದಾನ ಮಾಡಿದರು. ಈ ವೇಳೆ, ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಚಿವ ಮಧು ಬಂಗಾರಪ್ಪ ಸೇರಿ ಮತ್ತಿತರರು ಇದ್ದರು.

ಬೆಳಗಾವಿ ಉಪನ್ಯಾಸಕಿ ಜ್ಯೋತಿಗೆ ಒಲಿದು ಬಂದ ರಾಜ್ಯಮಟ್ಟದ ಅತ್ಯುತ್ತಮ ಉಪನ್ಯಾಸಕಿ ಪ್ರಶಸ್ತಿ
ಚಿಂತಾಮಣರಾವ್ ಕಾಲೇಜಿನ ಜ್ಯೋತಿ ಅವರು ವಿವಿಧ ಸಂಘ – ಸಂಸ್ಥೆಗಳು ನೀಡುವ 92ಕ್ಕಿಂತ ಹೆಚ್ಚು ಪ್ರಶಸ್ತಿಗಳನ್ನು ಪಡೆದಿರುತ್ತಾರೆ. ವಿದ್ಯಾರ್ಥಿಗಳ ಪ್ರಗತಿಗಾಗಿ ಸಾಕಷ್ಟು ಶ್ರಮಿಸಿದ್ದು, ಕನ್ನಡ ವಿಷಯದಲ್ಲಿ ಪ್ರತಿಶತ ನೂರರಷ್ಟು ಫಲಿತಾಂಶ ದಾಖಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜಕಿಯಾಗಿ, ಸಾಂಸ್ಕೃತಿಕ ಸ್ಪರ್ಧೆಗಳ ವಿಭಾಗದ ಸಂಚಾಲಕಿಯಾಗಿ ಉತ್ತಮ ಸೇವೆ ಸಲ್ಲಿಸಿದ್ದಾರೆ. ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಶ್ರಮಿಸುತ್ತಿರುವ ಅವರ ಸೇವೆ ಗುರುತಿಸಿ ಜ್ಯೋತಿ ಸಿ.ಎಂ. ಅವರಿಗೆ ಅತ್ಯುತ್ತಮ ಉಪನ್ಯಾಸಕಿ ಪ್ರಶಸ್ತಿ ಅರಸಿ ಬಂದಿದೆ.
ಬಡತನ ಹಿನ್ನೆಲೆ: ಮೂಲತಃ ಮಂಡ್ಯ ಜಿಲ್ಲೆಯ ಮದ್ದೂರ ತಾಲೂಕಿನ ಬೆಕ್ಕಳಲೆ ಗ್ರಾಮದ ಜ್ಯೋತಿ ಅವರು, 2009ರಲ್ಲಿ ಮಂಗಳೂರಿನ ಪುತ್ತೂರು ತಾಲೂಕಿನ ಕೇಯೂರು ಮಾಡವ ಪಿಯು ಕಾಲೇಜಿನ ಕನ್ನಡ ಉಪನ್ಯಾಸಕಿ ಆಗಿ ಸೇವೆ ಆರಂಭಿಸಿದರು. ಬಳಿಕ 2013ರಲ್ಲಿ ಹುಕ್ಕೇರಿ ಸರ್ಕಾರಿ ಪದವಿ ಪೂರ್ವ, 2017ರಿಂದ ಈವರೆಗೆ ಬೆಳಗಾವಿ ಚಿಂತಾಮಣರಾವ್ ಪದವಿಪೂರ್ವ ಸರ್ಕಾರಿ ಕಾಲೇಜಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕೃಷಿ ಕುಟುಂಬದ ಬಡತನ ಹಿನ್ನೆಲೆಯಿಂದ ಬಂದಿರುವ ಜ್ಯೋತಿ ಅವರ ತಂದೆ ಮುದ್ದಿರೇಗೌಡ, ತಾಯಿ ಶಿವಮ್ಮ. ಪತಿ ವಿಶಾಲರಾಜ್ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಇಲಾಖೆಯಲ್ಲಿ ಎ ದರ್ಜೆ ಅಧಿಕಾರಿ ಆಗಿ ಕೆಲಸ ಮಾಡುತ್ತಿದ್ದಾರೆ.
ಸಾಹಿತಿಯೂ ಆಗಿರುವ ಜ್ಯೋತಿ 80ಕ್ಕೂ ಹೆಚ್ಚು ಕವಿತೆ ಬರೆದಿದ್ದಾರೆ. ಅಂಧ ಮಕ್ಕಳ ಶಾಲೆಗೆ 3 ಸಾವಿರ ಕಾರ್ಡ್ ಶೀಟ್ ವಿತರಿಸಿದ್ದಾರೆ. ವೈಭವ ನಗರದಲ್ಲಿರುವ ಅನಾಥ ಆಶ್ರಮಕ್ಕೆ ಆರ್ಥಿಕ ನೆರವು ನೀಡಿದ್ದಾರೆ. ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ಕಳೆದ ಎರಡೂ ವರ್ಷವೂ 800 ಮೀಟರ್ ಓಟದಲ್ಲಿ ಪ್ರಥಮ ಸ್ಥಾನ ಬಂದಿದ್ದಾರೆ. ಹೀಗೆ ಎಲ್ಲಾ ಶೈಕ್ಷಣಿಕ, ಸಾಮಾಜಿಕ ಸೇವೆ ಸಲ್ಲಿಸಿರುವುದು ಶ್ಲಾಘನೀಯ.
“ಪ್ರಶಸ್ತಿ ಬಂದಿದ್ದಕ್ಕೆ ಜವಾಬ್ದಾರಿ ಹೆಚ್ಚಾಗಿದೆ. ತುಂಬಾ ಖುಷಿ ಆಗುತ್ತಿದೆ. ಮಕ್ಕಳನ್ನು ಇನ್ನೂ ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಶ್ರಮಿಸುತ್ತೇನೆ. ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿ ಉಸಿರಾಗಿಸಿಕೊಂಡು ಕೆಲಸ ಮುಂದುವರಿಸುತ್ತೇನೆ. ಮಕ್ಕಳ ಸರ್ವಾಂಗೀಣ ಬೆಳವಣಿಗೆಯೇ ನನ್ನ ಗುರಿ” ಎಂದು ‘ಈಟಿವಿ ಭಾರತ’ ಜೊತೆ ಜ್ಯೋತಿ ಸಿ.ಎಂ. ಸಂತಸ ಹಂಚಿಕೊಂಡಿದ್ದಾರೆ.
Laxmi News 24×7