ಬೆಂಗಳೂರು: ರಾಜಣ್ಣ ಅವರ ಮೇಲೆ ಆರೋಪ ಮಾಡುತ್ತಿದ್ದವರೇ ನಾಳೆ ಬೆಳಗ್ಗೆಯೆಂದರೆ ಬಿಜೆಪಿಗೆ ಹೋದರೂ ಆಶ್ಚರ್ಯ ಇಲ್ಲ ಎಂದು ವಿಧಾನಪರಿಷತ್ ಸದಸ್ಯ ಆರ್.ರಾಜೇಂದ್ರ ಅವರು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಗ್ಗೆ ಸೂಚ್ಯವಾಗಿ ಹೇಳಿದ್ದಾರೆ.
ಕೆ.ಎನ್.ರಾಜಣ್ಣ ಬಿಜೆಪಿಗೆ ಅರ್ಜಿ ಹಾಕಿದ್ದಾರೆ ಎಂಬ ಶಾಸಕ ಮಾಗಡಿ ಬಾಲಕೃಷ್ಣ ಹೇಳಿಕೆಗೆ ಶಾಸಕರ ಭವನದಲ್ಲಿ ಪ್ರತಿಕ್ರಿಯಿಸಿದ ಆರ್.ರಾಜೇಂದ್ರ, ಬಾಲಕೃಷ್ಣ ಬಿಜೆಪಿಯನ್ನೂ ಮುಗಿಸಿ ಬಂದಿದ್ದಾರೆ. ಜೆಡಿಎಸ್ ಪಕ್ಷವನ್ನೂ ಮುಗಿಸಿ ಬಂದಿದ್ದಾರೆ. ಕೆಲವರಿಗೆ ಮಾತನಾಡುವ ಹುಚ್ಚು. ಅದನ್ನು ತೀರಿಸಿಕೊಳ್ಳಲು ಹೀಗೆಲ್ಲ ಮಾತನಾಡುತ್ತಾರೆ. ರಾಜಣ್ಣ ಅಸೆಂಬ್ಲಿಯಲ್ಲಿ ಆರ್ಎಸ್ಎಸ್ ಹಾಡೇನೂ ಹಾಡಿಲ್ಲ. ರಾಜಣ್ಣ ಬಾಲ್ಯದಿಂದ ಆರ್ಎಸ್ಎಸ್ ಚಡ್ಡಿ ಹಾಕಿಲ್ಲ. ಚಡ್ಡಿ ಹಾಕಿಕೊಂಡು ಸಂಘದ ಶಾಖೆಗೆ ಹೋಗಿಲ್ವಲ್ಲ?. ಈ ಬಗ್ಗೆ ಈಗಾಗಲೇ ರಾಜಣ್ಣ ಸ್ಪಷ್ಟಪಡಿಸಿದ್ದಾರೆ ಎಂದರು.
ಸೆಪ್ಟೆಂಬರ್ ಬಳಿಕ ಕ್ರಾಂತಿ ಎಂದು ರಾಜಣ್ಣ ಅವರು ಹೇಳಿದ್ದರು. ಕ್ರಾಂತಿ ಎಂದರೆ, ಇವರೆಲ್ಲರೂ ಬಿಜೆಪಿಗೆ ಹೋಗಬಹುದು. ಸೆಪ್ಟೆಂಬರ್ ನಂತರ ಇವರೆಲ್ಲ ಬಿಜೆಪಿಗೆ ಹೋದರೂ ಆಶ್ಚರ್ಯ ಇಲ್ಲ. ಯತ್ನಾಳ್ ಆಗಲೇ ಇದನ್ನು ಬಹಿರಂಗ ಮಾಡಿದ್ದಾರೆ. ಬಾಲಕೃಷ್ಣ ಅವರೆಲ್ಲ ಬಿಜೆಪಿಗೆ ಹೋಗಬಹುದು. ನಾವು ಯಾವತ್ತೂ ಕಾಂಗ್ರೆಸ್ನಲ್ಲೇ ಇರುತ್ತೇವೆ. ಸೆಪ್ಟೆಂಬರ್ ಬಳಿಕ ಕ್ರಾಂತಿ ಎಂದರೆ ಇವರೆಲ್ಲಾ ಬಿಜೆಪಿ ಹೋಗುವುದು ಎಂದರು.
ಕೆಲವರಿಗೆ ಓಲೈಕೆಗಾಗಿ ಮಾತನಾಡುವ ಚಟ: ಸಿದ್ದರಾಮಯ್ಯ ಬೆಂಬಲದಿಂದಲೇ ವೋಟು ಬರುತ್ತದೆ. ಇನ್ಯಾರದ್ದೋ ಮುಖ ತೋರಿಸಿದರೆ ವೋಟು ಬರಲ್ಲ. ಅಧಿಕಾರ ಶಾಶ್ವತ ಅಲ್ಲ, ಜನರಿಗೆ ಬಿಟ್ಟಿದ್ದು. ನಾಲಿಗೆ ಮೇಲೆ ಹಿಡಿತ ಇಟ್ಟುಕೊಂಡು ಮಾತಾಡಲಿ. ಕೆಲವರಿಗೆ ಓಲೈಕೆಗಾಗಿ ಮಾತನಾಡುವ ಚಟ. ರಾಜಣ್ಣ ಬಗ್ಗೆ ಮಾತಾಡಿದರೆ ಬಾಲಕೃಷ್ಣಗೆ ಮೈಲೇಜು. ಷಡ್ಯಂತ್ರದಿಂದ ತಾನೇ ಸಚಿವ ಸ್ಥಾನ ತೆಗೆಸಿದ್ದು ಎಂದು ಡಿ.ಕೆ.ಶಿವಕುಮಾರ್ ವಿರುದ್ಧ ಆರ್.ರಾಜೇಂದ್ರ ಪರೋಕ್ಷ ವಾಗ್ದಾಳಿ ನಡೆಸಿದರು.
Laxmi News 24×7