Breaking News

79ನೇ ಸ್ವಾತಂತ್ರ್ಯೋತ್ಸವ: ಮಾಣಿಕ್ ಶಾ ಪರೇಡ್​ಗೆ ಇದೇ ಮೊದಲ ಬಾರಿ ಸಾರ್ವಜನಿಕರಿಗೆ ಇ – ಪಾಸ್ ವ್ಯವಸ್ಥೆ

Spread the love

ಬೆಂಗಳೂರು: ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ಆಗಸ್ಟ್ 15ರಂದು ಬೆಂಗಳೂರಿನ ಫೀಲ್ಡ್ ಮಾರ್ಷಲ್ ಮಾಣಿಕ್ ಶಾ ಪರೇಡ್ ಮೈದಾನದಲ್ಲಿ ಧ್ವಜಾರೋಹಣ, ಕವಾಯತು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಬೆಳಗ್ಗೆ 9 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಧ್ವಜಾರೋಹಣ ನೆರವೇರಿಸಲಿದ್ದು, ಬಳಿಕ ತೆರೆದ ಜೀಪ್‌ನಲ್ಲಿ ನಿಂತು ಪರೇಡ್ ವೀಕ್ಷಿಸಿ, ಗೌರವರಕ್ಷೆ ಸ್ವೀಕರಿಸಲಿದ್ದಾರೆ.

ಕೆಎಸ್ಆರ್‌ಪಿ, ಸಿಆರ್‌ಪಿಎಫ್, ಬಿಎಸ್ಎಫ್, ಸಿಎಆರ್, ಗೋವಾ ಪೊಲೀಸ್, ಕೆಎಸ್ಐಎಸ್ಎಫ್, ಟ್ರಾಫಿಕ್ ಪೊಲೀಸ್, ಮಹಿಳಾ ಪೊಲೀಸ್, ಗೃಹರಕ್ಷಕ ದಳ, ಟ್ರಾಫಿಕ್ ವಾರ್ಡನ್, ಅಗ್ನಿಶಾಮಕದಳ, ಶ್ವಾನದಳ ಹಾಗೂ ಬ್ಯಾಂಡ್‌ನ ಒಟ್ಟು 35 ತುಕಡಿಗಳ 1150 ಮಂದಿ ಗೌರವರಕ್ಷೆಯಲ್ಲಿ ಭಾಗವಹಿಸಲಿದ್ದಾರೆ.

ಮೊದಲ ಬಾರಿ ಇ-ಪಾಸ್ ವ್ಯವಸ್ಥೆ: ಸಮಾರಂಭ ವೀಕ್ಷಿಸಲು ಬಯಸುವವರಿಗೆ ಇದೇ ಮೊದಲ ಬಾರಿ ಆನ್‍ಲೈನ್ ಮೂಲಕ ಇ – ಪಾಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಆಸಕ್ತರು ಸೇವಾಸಿಂಧು (www.sevasindhu.karnataka.gov.in) ವೆಬ್‌ಸೈಟ್‌ನಲ್ಲಿ ಆಧಾರ್ ಹಾಗೂ ಮೊಬೈಲ್ ನಂಬರ್ ನಮೂದಿಸಿ ಉಚಿತವಾಗಿ ಇ-ಪಾಸ್ ಪಡೆಯಬಹುದಾಗಿದೆ. 2 ಸಾವಿರ ಇ-ಪಾಸ್‌ಗಳಿದ್ದು ಆಸಕ್ತರು ಪಡೆಯಬಹುದು. ಆನ್‌ಲೈನ್ ಮೂಲಕ ನಿರೀಕ್ಷಿತ ಬುಕ್ಕಿಂಗ್ ಆಗದಿದ್ದರೆ ಉಳಿದವುಗಳನ್ನು ಆಫ್‌ಲೈನ್ ಮೂಲಕ ವಿತರಿಸಲಾಗುವುದು ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್.ಜಿ ತಿಳಿಸಿದರು.

ಮೈದಾನದ ಸುತ್ತ ಬಿಗಿ ಬಂದೋಬಸ್ತ್: ಮೈದಾನ ಹಾಗೂ ಸುತ್ತಮುತ್ತಲಿನ ಸ್ಥಳಗಳಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ 2 ಸಾವಿರಕ್ಕೂ ಅಧಿಕ ಪೊಲೀಸ್ ಸಿಬ್ಬಂದಿ ಭದ್ರತೆ ವಹಿಸಲಿದ್ದಾರೆ. ಪರೇಡ್ ಮೈದಾನದ ಸುತ್ತಮುತ್ತ ಈಗಾಗಲೇ ಸುಮಾರು 500 ಸಿಸಿಟಿವಿ ಕ್ಯಾಮರಾಗಳಿದ್ದು, ಸ್ವಾತಂತ್ರ್ಯೋತ್ಸವದ ನಿಮಿತ್ತ ಹೆಚ್ಚುವರಿಯಾಗಿ 100 ಸಿಸಿಟಿವಿ ಕ್ಯಾಮೆರಾ ಹಾಗೂ 2 ಬ್ಯಾಗೇಜ್ ಸ್ಕ್ಯಾನರ್‌ಗಳನ್ನು ಅಳವಡಿಸಲಾಗಿದೆ‌. ಇದರೊಂದಿಗೆ ಆ್ಯಂಬುಲೆನ್ಸ್ ಮತ್ತು ವೈದ್ಯಕೀಯ ಸಿಬ್ಬಂದಿ, ಅಗ್ನಿಶಾಮಕ ವಾಹನಗಳನ್ನು ನಿಯೋಜಿಸಲಾಗಿದೆ.

ಸಮಾರಂಭಕ್ಕೆ ಆಗಮಿಸುವವರು ಬೆಳಗ್ಗೆ 8.30ರ ಒಳಗಾಗಿ ತಮ್ಮ ತಮ್ಮ ಆಸನಗಳಲ್ಲಿ ಆಸೀನರಾಗಬೇಕು. ಇ-ಪಾಸ್ ಹೊಂದಿರುವವರು ಮಣಿಪಾಲ್ ಸೆಂಟರ್ ಕಡೆಯಿಂದ ಕಬ್ಬನ್ ರಸ್ತೆ ಮೂಲಕ ಗೇಟ್ ನಂಬರ್ 5 ರ ಮೂಲಕ ಆಗಮಿಸಬೇಕು. ಕಾರ್ಯಕ್ರಮಕ್ಕೆ ಆಗಮಿಸುವವರು ತಮ್ಮೊಂದಿಗೆ ಅನಗತ್ಯವಾದ ಲಗೇಜ್ ಹಾಗೂ ಇತರ ನಿಷೇಧಿತ ವಸ್ತುಗಳನ್ನು ತರುವಂತಿಲ್ಲ. ಸಿಗರೇಟ್, ಬೆಂಕಿ ಪೆಟ್ಟಿಗೆ, ಕರಪತ್ರಗಳು, ಬಣ್ಣದ ದ್ರಾವಣ, ವಿಡಿಯೋ ಮತ್ತು ಸ್ಟಿಲ್ ಕ್ಯಾಮರಾ, ನೀರಿನ ಬಾಟಲ್ ಅಥವಾ ಕ್ಯಾನ್‌ಗಳು, ಶಸ್ತ್ರಾಸ್ತ್ರಗಳು, ಹರಿತವಾದ ವಸ್ತು ಅಥವಾ ಚಾಕು ಚೂರಿ, ಕಪ್ಪು ಕರವಸ್ತ್ರಗಳು, ತಿಂಡಿ ತಿನಿಸು ಮದ್ಯದ ಬಾಟಲ್/ ಮಾದಕ ವಸ್ತುಗಳು, ಪಟಾಕಿ ಮತ್ತು ಸ್ಫೋಟಕ ವಸ್ತುಗಳು ಸಂಪೂರ್ಣವಾಗಿ ನಿಷಿದ್ಧ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ