Breaking News

ಸರ್ಕಾರಿ ನೌಕರಿ ನಕಲಿ ಆದೇಶ ಪತ್ರ, ರಾಜ್ಯಪಾಲರ ಸಹಿ: ಆರೋಪಿ ವಿರುದ್ಧ ಚಾರ್ಜ್​ಶೀಟ್​​ಗೆ ಬೆಳಗಾವಿ ಪೊಲೀಸರ ಸಿದ್ಧತೆ

Spread the love

ಬೆಳಗಾವಿ: ”ಸರ್ಕಾರಿ ನೌಕರಿ ಕೊಡಿಸುವುದಾಗಿ 14 ಜನರಿಗೆ 30 ಲಕ್ಷ ರೂ. ವಂಚಿಸಿದ್ದ ಪ್ರಕರಣದಲ್ಲಿ ಆರೋಪಿ ಬೇರೆ ಬೇರೆಯವರ ಹೆಸರು ಹೇಳಿಕೊಂಡು ಸರ್ಕಾರದ ಲೋಗೋ ಕಾಪಿ ಮಾಡಿ, ರಾಜ್ಯಪಾಲರ ಸಹಿಯನ್ನೂ ನಕಲು ಮಾಡಿ, ಸುಳ್ಳು ಸರ್ಕಾರಿ ನೌಕರಿಯ ಆದೇಶ ಪತ್ರ ಕೊಟ್ಟಿರುವುದು ತನಿಖೆಯಲ್ಲಿ ಸಾಬೀತಾಗಿದೆ. ಹಾಗಾಗಿ, ಆರೋಪಿ ವಿರುದ್ಧ ಚಾರ್ಜ್​ಶೀಟ್ ಸಿದ್ಧಪಡಿಸುತ್ತಿದ್ದೇವೆ” ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ತಿಳಿಸಿದರು.

ಈ ಕುರಿತು ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಎಸ್​ಪಿ, ”ಮಂಜುನಾಥ ಮೆಲಸರ್ಜ ಎಂಬಾತ ನಮ್ಮ ಇಲಾಖೆಯ ಲೆಟರ್ ಹೆಡ್ ಬಳಸಿಕೊಂಡು ಕೆಲವೊಂದು ನಕಲಿ ಸಹಿ ಮಾಡಿ, ಕೆಲವೊಂದಿಷ್ಟು ಮಂದಿ ಬಳಿ ದುಡ್ಡು ತೆಗೆದುಕೊಂಡು ಮೋಸ ಮಾಡಿರುವುದಾಗಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ನಾಲ್ಕು ತಿಂಗಳ ಹಿಂದೆ ನನಗೆ ಪತ್ರ ಬರೆದಿದ್ದರು. ಆರೋಪಿ ಕಿತ್ತೂರು ಠಾಣಾ ವ್ಯಾಪ್ತಿಗೆ ಸೇರಿದ್ದರಿಂದ ನೊಂದವರ ಅರ್ಜಿ ವಿಚಾರಣೆಗೆ ಕಿತ್ತೂರು ಠಾಣೆ ಸಿಪಿಐಗೆ ವಹಿಸಲಾಗಿತ್ತು. ಈ ವೇಳೆ ನೊಂದವರನ್ನು ಸಂಪರ್ಕಿಸಿ ದೂರು ಕೊಡಲು ತಿಳಿಸಲಾಗಿತ್ತು. ಆಗ ಅವರು ನಮಗೆ ದುಡ್ಡು ಕೊಡಿಸಿ ಅಂತಾ ಕೇಳಿದ್ದರು. ಬಳಿಕ ನೊಂದವರು ಮತ್ತು ಆರೋಪಿಯನ್ನು ಠಾಣೆಗೆ ಕರೆಸಿದಾಗ ದೂರು ಕೊಡಲು ನಿರಾಕರಿಸಿದ್ದರು” ಎಂದು ಹೇಳಿದರು.

ಕಿತ್ತೂರು ಠಾಣೆಯಲ್ಲಿ ಎಫ್ಐಆರ್​​: ”ಬಳಿಕ ಮತ್ತೋರ್ವ ನೊಂದ ವ್ಯಕ್ತಿ ಬೈಲಹೊಂಗಲ ತಾಲೂಕಿನ ನೇಗಿನಹಾಳ ಗ್ರಾಮದ ವಿಠಲ ಪಡದಪ್ಪನವರ ಕಿತ್ತೂರು ಠಾಣೆಗೆ ದೂರು ನೀಡಿದ ತಕ್ಷಣ ಎಫ್ಐಆರ್ ದಾಖಲಿಸಿಕೊಂಡಿದ್ದೇವೆ. ನೊಂದ ಯುವತಿ ಎನ್ನಲಾದ ಕಾವ್ಯಾ ಯಳ್ಳೂರ ಅವರಿಗೂ ನೋಟಿಸ್ ಕೊಟ್ಟಿದ್ದೆವು. ಆ ಸಂದರ್ಭದಲ್ಲಿ ನಮಗೆ ನಿಮ್ಮ‌ ಮೇಲೆ ನಂಬಿಕೆ ಇಲ್ಲ. ಹಾಗಾಗಿ, ನಾನು ಪ್ರತ್ಯೇಕವಾಗಿ ದೂರು ಕೊಡುವುದಿಲ್ಲ ಎಂದು ಕಾವ್ಯಾ ಹೇಳಿದ್ದರು. ಇನ್ನು ಆರೋಪಿ ಮಂಜುನಾಥನನ್ನು ಬಂಧಿಸಲು ಹೋಗುತ್ತಿರುವಾಗಲೇ ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡು ಆತ ತನಿಖೆಗೆ ಸಹಕರಿಸಿದ್ದ. ಭಾಗಶಃ ತನಿಖೆ ಮುಕ್ತಾಯವಾಗಿದ್ದು, ಇನ್ನೇನು ಚಾರ್ಜ್​ಶೀಟ್ ಸಲ್ಲಿಸಲಿದ್ದೇವೆ” ಎಂದು ಭೀಮಾಶಂಕರ ಗುಳೇದ ವಿವರಿಸಿದರು.

ಕೋರ್ಟ್​​ ಜಾಮೀನು ಕೊಟ್ಟಿದ್ದರಿಂದ ಆರೋಪಿಯನ್ನು ಬಂಧಿಸಲಾಗಿಲ್ಲ: ”ನೊಂದ ಯುವತಿ ಪೊಲೀಸರ ಮೇಲೆ ಆಪಾದನೆ ಮಾಡಿದ್ದು ಸತ್ಯಕ್ಕೆ ದೂರವಾಗಿದೆ. ನೊಂದವರು ದೂರು ಕೊಡದೇ ಇದ್ದುದರಿಂದ ಎಫ್ಐಆರ್ ದಾಖಲಿಸಿಕೊಳ್ಳಲು ವಿಳಂಬವಾಗಿದೆ. ವಂಚನೆ ಪ್ರಕರಣ ಇದಾಗಿದ್ದು, ನ್ಯಾಯಾಲಯ ಜಾಮೀನು ಕೊಟ್ಟಿದ್ದರಿಂದ ಆರೋಪಿ ಮಂಜುನಾಥನನ್ನು ಬಂಧಿಸಲು ಆಗಿಲ್ಲ. ತನಿಖೆಯಲ್ಲಿ ಆರೋಪಿಯ ಪಾತ್ರ ನೇರವಾಗಿ ಕಂಡುಬಂದಿರುವ ಹಿನ್ನೆಲೆಯಲ್ಲಿ ಚಾರ್ಜ್​ಶೀಟ್ ಸಿದ್ಧಪಡಿಸುತ್ತಿದ್ದೇವೆ. ಆರೋಪಿ ಮಂಜುನಾಥ ಮೆಲಸರ್ಜ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಹಿರಿಯ ಅಧಿಕಾರಿಗಳು ಮತ್ತು ಸಚಿವರ ಆಪ್ತ ಸಂಗನಗೌಡ ಪಾಟೀಲ ಅವರ ಹೆಸರನ್ನು ವಿನಾಕಾರಣ ಎಳೆದು ತಂದಿದ್ದಾನೆ. ಸಂಗನಗೌಡನ ಖಾತೆಗೆ ಹಣ ಕಳಿಸಿರುವ ಬಗ್ಗೆ ಯಾವುದೇ ದಾಖಲೆ ಒದಗಿಸಿಲ್ಲ‌” ಎಂದರು.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ