ಬೆಂಗಳೂರು: ಚಿಕ್ಕಬಳ್ಳಾಪುರದ ಜಿಲ್ಲಾಧಿಕಾರಿಗಳ ಅವರಣದಲ್ಲಿ ಡೆತ್ನೋಟ್ ಬರೆದಿಟ್ಟು ಚಾಲಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಸಂಬಂಧ ಬಂಧನ ಭೀತಿಯಲ್ಲಿರುವ ಸಂಸದ ಡಾ. ಕೆ. ಸುಧಾಕರ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಸೋಮವಾರ ಕಲಾಪ ಪ್ರಾರಂಭವಾಗುತ್ತಿದ್ದಂತೆ ಅರ್ಜಿದಾರರ ಪರ ವಕೀಲರು, ನ್ಯಾಯಮೂರ್ತಿ ಎಂ.ಐ. ಅರುಣ್ ಅವರಿದ್ದ ಪೀಠಕ್ಕೆ ವಿಷಯವನ್ನು ಪ್ರಸ್ತಾಪಿಸಿ, ಅರ್ಜಿದಾರರಿಗೂ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ಅವರನ್ನು ಬಂಧಿಸಬೇಕು ಎಂಬ ಕಾರಣದಿಂದ ವ್ಯಾಪ್ತಿಯಿಲ್ಲದ ನ್ಯಾಯಾಲಯಕ್ಕೆ ದೂರು ದಾಖಲಿಸಲಾಗಿದೆ. ಆದ್ದರಿಂದ ಅರ್ಜಿಯನ್ನು ತುರ್ತು ವಿಚಾರಣೆಗೆ ಪರಿಗಣಿಸಬೇಕು ಎಂದು ಕೋರಿದರು.
ಈ ಅಂಶವನ್ನು ಪರಿಗಣಿಸಿದ ನ್ಯಾಯಪೀಠ, ಅರ್ಜಿಯನ್ನು ಮಧ್ಯಾಹ್ನ ವಿಚಾರಣೆಗೆ ಪರಿಗಣಿಸುವುದಾಗಿ ತಿಳಿಸಿ, ವಿಚಾರಣೆಗೆ ನಿಗದಿ ಮಾಡಿದೆ.
ಚಾಲಕ ಬಾಬು ಎಂಬವರು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಸಂಬಂಧ ಮೃತರ ಪತ್ನಿ ನೀಡಿದ ದೂರಿನ ಆಧಾರದಲ್ಲಿ, ಸಂಸದರ ವಿರುದ್ಧ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರಿನ ವಿವರ: ಡಾ. ಕೆ. ಸುಧಾಕರ್, ನಾಗೇಶ್ ಮತ್ತು ಮಂಜುನಾಥ್ ಸರ್ಕಾರಿ ಕೆಲಸ ಕೊಡಿಸುವುದಾಗಿ ಬಾಬು ಅವರಿಂದ ಮೋಸದಲ್ಲಿ 35 ಲಕ್ಷ ರೂ. ಹಣ ಪಡೆದಿದ್ದಾರೆ. ಆದರೆ ಕೆಲಸ ಮಾಡಿಕೊಟ್ಟಿರಲಿಲ್ಲ. ಈ ವಿಚಾರವನ್ನು ಕೇಳಿದಾಗ ನಿಂದಿಸಿ, ಬೆದರಿಕೆ ಹಾಕಿ ಮಾನಸಿಕ ಹಿಂಸೆ ನೀಡಿದರು. ಇದರಿಂದ ಮನನೊಂದು ಬಾಬು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಶಿಲ್ಪಾ ದೂರಿನಲ್ಲಿ ತಿಳಿಸಿದ್ದಾರೆ.
Laxmi News 24×7