ಚಿಕ್ಕಬಳ್ಳಾಪುರ: ನಗರದಲ್ಲಿ ಎಟಿಎಂ ಯಂತ್ರಕ್ಕೆ ವಿಶೇಷ ಸಾಧನ ಅಳವಡಿಸಿ, ಗ್ರಾಹಕರು ಡ್ರಾ ಮಾಡಿದ ಹಣವನ್ನು ದೋಚುತ್ತಿದ್ದ ಚಾಲಾಕಿ ಕಳ್ಳನನ್ನು ಚಿಕ್ಕಬಳ್ಳಾಪುರ ನಗರ ಪೊಲೀಸರು ಬಂಧಿಸಿದ್ದಾರೆ. ನಿಯಾಜುದ್ದೀನ್ (20) ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.
ನಗರದ ಬಿ.ಬಿ.ರಸ್ತೆಯಲ್ಲಿರುವ ಕೆನರಾ ಬ್ಯಾಂಕ್ ಎಟಿಎಂನಲ್ಲಿ ಏಪ್ರಿಲ್ 11ರ ರಾತ್ರಿ ಸಿನಿಮೀಯ ರೀತಿಯ ಕಳ್ಳತನ ನಡೆದಿತ್ತು. ಕಳ್ಳರು ಎಟಿಎಂನಿಂದ ಹಣ ಹೊರಬರುವ ಜಾಗಕ್ಕೆ ಒಂದು ಸಾಧನವನ್ನು ಅಳವಡಿಸಿದ್ದರು. ಗ್ರಾಹಕರು ಹಣ ಡ್ರಾ ಮಾಡಿದಾಗ ನೋಟುಗಳು ಹೊರಬರುವ ಬದಲು ಆ ಸಾಧನದೊಳಗೆ ಸಿಲುಕಿಕೊಳ್ಳುತ್ತಿದ್ದವು. ಹಣ ಬರಲಿಲ್ಲವೆಂದು ತಿಳಿದು ಗ್ರಾಹಕರು ಅಲ್ಲಿಂದ ಹೊರಟುಹೋದ ನಂತರ, ಕಳ್ಳರು ಎಟಿಎಂಗೆ ಬಂದು ಸಾಧನದಲ್ಲಿ ಸಿಕ್ಕಿಹಾಕಿಕೊಂಡಿದ್ದ ಅಂದಾಜು 2 ಲಕ್ಷ ರೂಪಾಯಿ ಹಣವನ್ನು ದೋಚಿ ಪರಾರಿಯಾಗಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಕೆನರಾ ಬ್ಯಾಂಕ್ ಎಟಿಎಂ ಕಳ್ಳತನ ಪ್ರಕರಣದ ದೂರಿನನ್ವಯ, ಪೊಲೀಸರು ವಿಶೇಷ ತಂಡ ರಚಿಸಿ ತಾಂತ್ರಿಕ ಸಾಕ್ಷ್ಯಗಳನ್ನು ಆಧರಿಸಿ ತನಿಖೆ ಕೈಗೊಂಡಿದ್ದರು. ಆರೋಪಿ ಬೆಂಗಳೂರಿನಲ್ಲಿ ತಲೆಮರೆಸಿಕೊಂಡಿರುವುದು ಪತ್ತೆಯಾಗಿತ್ತು. ಪೊಲೀಸರ ತಂಡ ಬೆಂಗಳೂರಿಗೆ ತೆರಳಿ, ತ್ರಿಪುರಾ ಮೂಲದ ನಿಯಾಜುದ್ದೀನ್‌ನನ್ನು ಬಂಧಿಸಿದೆ. ಈತ ಇದೇ ರೀತಿ ಇನ್ನೊಂದು ಪ್ರಕರಣದಲ್ಲಿ ಭಾಗಿಯಾಗಿರುವುದನ್ನು ಒಪ್ಪಿಕೊಂಡಿದ್ದಾನೆ. ಆತನಿಂದ 15 ಸಾವಿರ ರೂಪಾಯಿ ನಗದನ್ನು ವಶಪಡಿಸಿಕೊಳ್ಳಲಾಗಿದೆ. ತನಿಖೆ ಮುಂದುವರೆದಿದೆ ಎಂದು ಪೊಲೀಸರು ಹೇಳಿದ್ದಾರೆ.
Laxmi News 24×7