ದಾವಣಗೆರೆ: ಕಳ್ಳತನ ಪ್ರಕರಣವೊಂದನ್ನು ಬೇಧಿಸಿರುವ ದಾವಣಗೆರೆ ಪೊಲೀಸರು, 18.790 ಕೆಜಿ ಬೆಳ್ಳಿ ಆಭರಣ ಕಳವು ಮಾಡಿದ್ದ ರಾಜಸ್ಥಾನ ಮೂಲದ ಮೂವರು ಖದೀಮರನ್ನು ಬಂಧಿಸಿದ್ದಾರೆ. ದಿನೇಶ್ ಕುಮಾರ್(35), ದೀಪಕ್ ಕುಮಾರ್(26), ರಮೇಶ್ ಕುಮಾರ್ (31) ಬಂಧಿತರು.
ನಗರದ ಕೆಬಿ ಬಡಾವಣೆಯ ಕೀರ್ವಾಡಿ ಲೇಔಟ್ನ ನಿವಾಸಿ ಗಿರೀಶ್ ಎನ್ನುವರು ಜು.14ರಂದು ತಾವು ಯಾರು ಇಲ್ಲದಾಗ ತಮ್ಮ ಮನೆಯಲ್ಲಿ ಕಳ್ಳತನವಾಗಿದೆ ಎಂದು ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣ ದಾಖಲಾಗುತ್ತಿದ್ದಂತೆ ತನಿಖೆ ಚುರುಕುಗೊಳಿಸಿದ್ದ ಕೆಟಿಜೆ ನಗರ ಪೊಲೀಸರು, ಕಳತನ ನಡೆದ 15 ದಿನದಲ್ಲೇ ಪ್ರಕರಣ ಬೇಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಸ್ಥಾನ ಮೂಲದ ಮೂವರು ಆರೋಪಿಗಳಾದ ದಿನೇಶ್ ಕುಮಾರ್, ದೀಪಕ್ ಕುಮಾರ್ ಮತ್ತು ರಮೇಶ್ ಕುಮಾರ್ ಎಂಬುವರನ್ನು ಬಂಧಿಸಲಾಗಿದ್ದು, ಅವರಿಂದ ಒಟ್ಟು 20 ಲಕ್ಷ ಮೌಲ್ಯದ 17.690 ಕೆಜಿ ಬೆಳ್ಳಿ ಆಭರಣ ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾಪ್ರಶಾಂತ್ ಮಾಹಿತಿ ನೀಡಿದ್ದಾರೆ.
ರೈಲು ಮೂಲಕ ಕಳ್ಳತನಕ್ಕೆ ಬರುತ್ತಿದ್ದ ಕಳ್ಳರು: ಖದೀಮರು ಕಳ್ಳತನ ಮಾಡುವ ಉದ್ದೇಶದಿಂದ ರೈಲು ಮೂಲಕ ದಾವಣಗೆರೆಗೆ ಬಂದಿದ್ದರು. ಕಳ್ಳತನದ ಬಳಿಕ ರೈಲು ಹಿಡಿದು ಸುಲಭವಾಗಿ ತಮ್ಮ ಊರು ಸೇರಲು ಮಾರ್ಗ ಕಂಡುಕೊಂಡಿದ್ದರು. ಪ್ರಯಾಣಿಕರಂತೆ ರೈಲಲ್ಲಿ ಬಂದು ಕಳ್ಳತನ ಮಾಡಿದ್ದಲ್ಲಿ ಯಾರಿಗೂ ಗೊತ್ತಾಗುವುದಿಲ್ಲ ಎಂಬ ಕಾರಣದಿಂದ ಕಳ್ಳತನ ಮಾಡಿದ್ದಲ್ಲದೇ ರೈಲು ಹತ್ತಿ ಮೂವರು ರಾಜಸ್ಥಾನ ಸೇರಿದ್ದರು. ಅನುಮಾನದ ಹಿನ್ನೆಲೆ ಇವರ ಜಾಡು ಹಿಡಿದ ಪೊಲೀಸರು, ಒಂದು ವಾರ ರಾಜಸ್ಥಾನದಲ್ಲಿದ್ದು, ಕಳ್ಳರ ಮೇಲೆ ಕಣ್ಣಿಟ್ಟಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ಮೂವರನ್ನು ಬಂಧಿಸಲಾಗಿದೆ. ಈ ವೇಳೆ ತನ್ನ ಕೃತ್ಯದ ಬಗ್ಗೆ ಖದೀಮರು ಬಾಯ್ಬಿಟ್ಟಿರುವುದಾಗಿ ಪೊಲೀಸರು ತಿಳಿಸಿದರು.
ಪೂಜೆಗಾಗಿ ಮನೆಯಲ್ಲಿ ಕೆಜಿಗಟ್ಟಲೆ ಬೆಳ್ಳಿ ಇಟ್ಟಿದ್ದ ಮಾಲೀಕ: ಮನೆ ಮಾಲೀಕ ಗಿರೀಶ್ ಅವರು ಅಪ್ಪಟ ಸಾಯಿಬಾಬಾ ಭಕ್ತರಾಗಿದ್ದು, ಪೂಜೆ0ಗಾಗಿ ಬೆಳ್ಳಿ ಸಾಮಗ್ರಿಗಳನ್ನು ಬಳಕೆ ಮಾಡುತ್ತಿದ್ದರು. ಅಲ್ಲದೆ ಅವರಿಗೆ ಉಡುಗೊರೆಯಾಗಿ ಸಾಕಷ್ಟು ಬೆಳ್ಳಿ ಸಾಮಗ್ರಿಗಳು ಬಂದಿದ್ದವು. ಕೆಜಿಗಟ್ಟಲೆ ಬೆಳ್ಳಿ ಬ್ಯಾಂಕ್ ಅಲ್ಲಿ ಇಡಲು ಆಗದ ಕಾರಣ ಮನೆಯಲ್ಲಿ ಇರಿಸಿಕೊಂಡಿದ್ದರು ಎಂದು ಎಸ್ಪಿ ಉಮಾಪ್ರಶಾಂತ್ ಮಾಹಿತಿ ನೀಡಿದರು.
Laxmi News 24×7