ನವದೆಹಲಿ/ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಅಕ್ಕಪಕ್ಕದ ಪಟ್ಟಣಗಳಿಂದ ಹುಬ್ಬಳ್ಳಿಗೆ ಪ್ರಯಾಣಿಸುವವರ ಅನುಕೂಲಕ್ಕಾಗಿ 10 ಹೊಸ ಮೆಮು ರೈಲುಗಳ ಸಂಚಾರ ಆರಂಭಿಸುವಂತೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಲ್ಲಿ ಪ್ರಲ್ಹಾದ್ ಜೋಶಿ ಮನವಿ ಮಾಡಿದರು.
ನವದೆಹಲಿಯಲ್ಲಿ ಬುಧವಾರ ಕೇಂದ್ರ ರೈಲ್ವೆ ಸಚಿವರನ್ನು ಭೇಟಿ ಮಾಡಿದ ಜೋಶಿ, ಪಟ್ಟಣ ಹಾಗೂ ಗ್ರಾಮಗಳಿಂದ ಹುಬ್ಬಳ್ಳಿಗೆ ಪ್ರಯಾಣಿಸುವವರಿಗಾಗಿ 10 ಹೊಸ ಮೆಮು (MEMU) ರೈಲುಗಳ ಸಂಚಾರ ಆರಂಭಿಸಬೇಕೆಂದು ಕೋರಿದರು.
ಹುಬ್ಬಳ್ಳಿ ಉತ್ತರ ಕರ್ನಾಟಕದ ವಾಣಿಜ್ಯ ರಾಜಧಾನಿಯಾಗಿದೆ. ಅಕ್ಕಪಕ್ಕದ ಪಟ್ಟಣ, ಗ್ರಾಮೀಣ ಪ್ರದೇಶಗಳಿಂದ ಪ್ರತಿನಿತ್ಯ ಲಕ್ಷಾಂತರ ಮಂದಿ ಸಂಚರಿಸುತ್ತಿರುತ್ತಾರೆ. ಹಾಗಾಗಿ ಇಲ್ಲಿ ಹೊಸ ಮೆಮು (ಮೇನ್‌ಲೈನ್ ಎಲೆಕ್ಟ್ರಿಕ್ ಮಲ್ಟಿಪಲ್ ಯೂನಿಟ್) ರೈಲುಗಳ ಸಂಚಾರಕ್ಕೆ ಕ್ರಮ ಕೈಗೊಳ್ಳಬೇಕೆಂದು ಜೋಶಿ ಮನವಿ ಮಾಡಿದರು.
ಪ್ಯಾಸೆಂಜರ್ ರೈಲು ಸಹ ಓಡಿಸಲು ಮನವಿ: ಹುಬ್ಬಳ್ಳಿ ನಗರಕ್ಕೆ ಶಿಕ್ಷಣ, ಉದ್ಯೋಗ, ವ್ಯಾಪಾರ, ಆಸ್ಪತ್ರೆಗಳಿಗಾಗಿ ಅಸಂಖ್ಯಾತ ಜನ ಸಂಚರಿಸುತ್ತಾರೆ. ದಿನನಿತ್ಯದ ರೈಲುಗಳು ಭರ್ತಿಯಾಗಿರುತ್ತವೆ. ಹಾಗಾಗಿ ಜನ ಸಂಚಾರ ಅನುಕೂಲಕ್ಕೆ ಮೆಮು ರೈಲುಗಳ ಅಗತ್ಯತೆಯಿದೆ. ಈ ಭಾಗದಲ್ಲಿ ರಸ್ತೆ ಸಾರಿಗೆಗಿಂತ ರೈಲು ಸಂಚಾರ ಅನುಕೂಲಕರವಾಗಿ ಪರಿಣಮಿಸಿದ್ದು, ಕೋವಿಡ್ ವೇಳೆ ಸ್ಥಗಿತಗೊಳಿಸಿದ್ದ ಅನೇಕ ಪ್ಯಾಸೆಂಜರ್ ರೈಲು ಸಂಚಾರ ಸಹ ಆರಂಭಿಸುವಂತೆ ಸಚಿವ ಜೋಶಿ ಇದೇ ವೇಳೆ ಮನವಿ ಮಾಡಿದರು.
ಬೆಂಗಳೂರು ರೈಲು ನಿಲ್ದಾಣ ಬಿಟ್ಟರೆ ಹುಬ್ಬಳ್ಳಿಯೇ ಅತ್ಯಂತ ಜನನಿಬಿಡ ರೈಲು ನಿಲ್ದಾಣವಾಗಿದ್ದು, ನಿತ್ಯ ಕಡಿಮೆ ಎಂದರೂ 50 ಸಾವಿರಕ್ಕೂ ಅಧಿಕ ಪ್ರಯಾಣಿಕರಿಂದ ತುಂಬಿರುತ್ತದೆ. ನೈರುತ್ಯ ರೈಲ್ವೆ ವಲಯದ ಮುಖ್ಯ ಕಚೇರಿ ಹೊಂದಿರುವ ಹುಬ್ಬಳ್ಳಿ ನಿಲ್ದಾಣ ಭಾರತೀಯ ರೈಲ್ವೆಯಲ್ಲಿ ಮಹತ್ತರವಾಗಿದ್ದು, ಅಂತಾರಾಷ್ಟ್ರೀಯ ಮಟ್ಟಕ್ಕೆ ಪರಿವರ್ತಿಸುವುದು ಅತ್ಯಗತ್ಯವಾಗಿದೆ ಎಂದು ಅಶ್ವಿನಿ ವೈಷ್ಣವ್ ಅವರಿಗೆ ಮನವರಿಕೆ ಮಾಡಿಕೊಟ್ಟರು.
ಮತ್ತೊಂದು ರೈಲ್ವೆ ಬ್ರಿಡ್ಜ್ ನಿರ್ಮಾಣಕ್ಕೆ ಬೇಡಿಕೆ: ಹುಬ್ಬಳ್ಳಿ ರೈಲ್ವೆ ನಿಲ್ದಾಣವನ್ನು ಅಂತಾರಾಷ್ಟ್ರೀಯ ಮಟ್ಟದ ರೈಲ್ವೆ ನಿಲ್ದಾಣವಾಗಿ ಪರಿವರ್ತಿಸುವ ಬಗ್ಗೆ ಸಹ ಮಹತ್ವದ ಚರ್ಚೆ ನಡೆಸಿದರು. ಅಲ್ಲದೇ, ನಗರದ ಗದಗ ರಸ್ತೆ ಮೇಲಿರುವ ಡಬಲ್ ಲೈನ್ ರೈಲ್ವೆ ಬ್ರಿಡ್ಜ್ ಅನ್ನು 4 ಲೈನ್‌ಗೆ ವಿಸ್ತರಿಸುವ ಸಲುವಾಗಿ ಇನ್ನೊಂದು ರೈಲ್ವೆ ಬ್ರಿಡ್ಜ್ ನಿರ್ಮಾಣ ಮಾಡಬೇಕೆಂಬ ಬೇಡಿಕೆ ಮುಂದಿಟ್ಟರು. ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಸಹ ಈ ಬಗ್ಗೆ ಗಮನ ಸೆಳೆದರು.
Laxmi News 24×7