ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣವಚನ ಸ್ವೀಕರಿಸಿದ ವಿಭು ಬಖ್ರು
ದೆಹಲಿ ಹೈಕೋರ್ಟ್ನ ಹಿರಿಯ ನ್ಯಾಯಮೂರ್ತಿಯಾಗಿದ್ದ ವಿಭು ಬಖ್ರು ಅವರು ಇಂದು ಕರ್ನಾಟಕ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಪ್ರಮಾತ್ ವಚನ ಬೋಧಿಸಿದರು. ಈ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಸುಪ್ರೀಂ ಕೋರ್ಟ್ ಕೊಲಿಜಿಯಂ ಶಿಫಾರಸ್ಸಿನ ಮೇರೆಗೆ ಕೇಂದ್ರ ಸರ್ಕಾರವು ಇವರನ್ನು ನೇಮಕ ಮಾಡಿತ್ತು.
ರಾಜ ಭವನದ ಗಾಜಿನ ಮನೆಯಲ್ಲಿ ಶನಿವಾರ ನಡೆದ ಸರಳ ಸಮಾರಂಭದಲ್ಲಿ ನ್ಯಾಯಮೂರ್ತಿ ಬಖ್ರು ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.
ಬಳಿಕ ರಾಜ್ಯ ವಕೀಲರ ಪರಿಷತ್ನಿಂದ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಗಳ ಸಭಾಂಗಣದಲ್ಲಿ ನಡೆದ ಸ್ವಾಗತ ಕಾರ್ಯಕ್ರಮದಲ್ಲಿ ಮಾತನಾಡಿದ ನ್ಯಾಯಮೂರ್ತಿ ಬಖ್ರು, ದೇಶದಲ್ಲಿ ಕಾನೂನು ಮತ್ತು ಸಾಂವಿಧಾನಿಕ ಅಭಿವೃದ್ಧಿಗೆ ಕರ್ನಾಟಕ ಹೈಕೋರ್ಟ್ ಅಪಾರ ಕೊಡುಗೆ ನೀಡಿದ್ದು, ಈ ನ್ಯಾಯಪೀಠದಲ್ಲಿ ಕಾರ್ಯನಿರ್ವಹಿಸುವುದು ಹೆಮ್ಮೆಯಾಗಿದೆ ಎಂದು ತಿಳಿಸಿದರು.
ಭಾರತದ ಸಂವಿಧಾನಕ್ಕೆ ನಿಷ್ಠರಾಗಿದ್ದು, ನಮ್ಮ ಧರ್ಮ, ಕಾನೂನು, ಜನರ ನಂಬಿಕೆಯನ್ನು ಕಾಯಂಗೊಳಿಸುವುದು ನಮ್ಮ ಕರ್ತವ್ಯವಾಗಿದೆ. ವೃತ್ತಿ ಪರತೆ ಮತ್ತು ನೈತಿಕತೆಯ ದೃಷ್ಠಿಯಿಂದ ಬೆಂಗಳೂರು ವಕೀಲರ ಸಂಘಕ್ಕೆ ಗೌರವವಿದೆ. ನ್ಯಾಯಾಂಗದ ಸ್ವಾತಂತ್ರ್ಯವನ್ನು ರಕ್ಷಣೆ ಮಾಡುವುದು ಮತ್ತು ಸಂಸ್ಥೆಯನ್ನು ಭದ್ರಪಡಿಸುವ ಕೆಲಸ ಮಾಡುವುದಾಗಿ ಅವರು ಹೇಳಿದರು.ಕರ್ನಾಟಕ ರಾಜ್ಯ ಮೇಧಾವಿಗಳು, ನ್ಯಾಯಶಾಸ್ತ್ರಜ್ಞರು, ಸುಧಾರಣಾ ವಾದಿಗಳ ಇತಿಹಾಸ ಹೊಂದಿದೆ.
ಬಸವಣ್ಣ ಸಮ ಸಮಾಜ ದ ಸಮಾನತೆ, ಘನತೆ ಮತ್ತು ನೈತಿಕ ಸ್ಥೈರ್ಯದ ಕುರಿತಂತೆ ಬೋಧನೆ ಮಾಡಿದ್ದಾರೆ. ಸರ್. ಎಂ. ವಿಶ್ವೇಶ್ವರಯ್ಯ ಅವರು ಶಿಸ್ತಿನ ಪ್ರಾಮುಖ್ಯತೆ ತಿಳಿಸಿಕೊಟ್ಟಿದ್ದಾರೆ. ಡಾ. ಬಿ. ಆರ್. ಅಂಬೇಡ್ಕರ್ ಅವರ ಸಾಮಾಜಿಕ ನ್ಯಾಯ ಮತ್ತು ಸಾಂವಿಧಾನಿನ ಮೌಲ್ಯಗಳ ಕುರಿತ ಅವರಲ್ಲಿನ ಬದ್ಧತೆ ನಮಗೆ ದಾರಿದೀಪವಾಗಿದೆ ಎಂದರು.
ನ್ಯಾಯಮೂರ್ತಿ ಬಖ್ರು ಅವರು 1966ರಲ್ಲಿ ನಾಗ್ಪುರದಲ್ಲಿ ಜನಿಸಿದರು. ದೆಹಲಿಯಲ್ಲಿನ ದೆಹಲಿ ಪಬ್ಲಿಕ್ ಶಾಲೆಯಲ್ಲಿ ಶಿಕ್ಷಣ ಪಡೆದಿದ್ದಾರೆ. 1987ರಲ್ಲಿ ದೆಹಲಿ ವಿವಿಯಿಂದ ಬಿಕಾಂ ಪದವಿ ಪಡೆದರು. ಬಳಿಕ ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾದಲ್ಲಿ ಚಾರ್ಟರ್ಡ್ ಅಕೌಂಟೆಂಟ್ನಲ್ಲಿ ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣರಾದರು. 1990ರಲ್ಲಿ ಕಾನೂನು ಪದವಿ ಪಡೆದು ದೆಹಲಿಯ ಬಾರ್ ಕೌನ್ಸಿಲ್ನಲ್ಲಿ ವಕೀಲರಾಗಿ ಸನ್ನದು ಪಡೆದುಕೊಂಡರು. ಬಳಿಕ ದೆಹಲಿ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ಗಳಲ್ಲಿ ವಕೀಲರಾಗಿ ಸೇವೆ ಸಲ್ಲಿಸಿದರು.
2013 ರಲ್ಲಿ ದೆಹಲಿ ಹೈಕೋರ್ಟ್ನ ಹೆಚ್ಚುವರಿ ನ್ಯಾಯಮೂರ್ತಿ, 2015ರಲ್ಲಿ ಖಾಯಂ ನ್ಯಾಯಮೂರ್ತಿಯಾಗಿ ನೇಮಕಗೊಂಡರು. 2024 ರ ಡಿಸೆಂಬರ್ 5 ರಿಂದ ದೆಹಲಿ ಹೈಕೋರ್ಟ್ನ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಇದೀಗ ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದಾರೆ.
ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್, ಸಭಾಪತಿ ಬಸವರಾಜ ಹೊರಟ್ಟಿ, ಕಾನೂನು ಸಚಿವ ಹೆಚ್. ಕೆ. ಪಾಟೀಲ್, ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿದ್ದ ನ್ಯಾಯಮೂರ್ತಿ ವಿ. ಕಾಮೇಶ್ವರ ರಾವ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
Laxmi News 24×7