ಕೊಪ್ಪಳ: ಪಿಎಸ್ಐ ನೇಮಕಾತಿ ಹಗರಣದ ಬಳಿಕ ಐದು ವರ್ಷಗಳ ಕಾಲ ಯಾವುದೇ ಪೊಲೀಸ್ ನೇಮಕಾತಿ ಆಗಿಲ್ಲ. ಒಂದು ಸಾವಿರ ಪಿಎಸ್ಐ ಹುದ್ದೆಗಳು ಖಾಲಿ ಇವೆ. ನಮ್ಮ ಸರ್ಕಾರದಿಂದ ಶೀಘ್ರವಾಗಿ ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸುವುದಾಗಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದರು.
ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಇಂದು (ಭಾನುವಾರ) ಭೇಟಿ ನೀಡಿದ್ದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈಗಾಗಲೇ 500 ಪಿಎಸ್ಐ ಹುದ್ದೆಗಳಿಗೆ ನೇಮಕಾತಿ ನಡೆದಿದ್ದು, ಅವರೆಲ್ಲ ತರಬೇತಿ ಪಡೆಯುತ್ತಿದ್ದಾರೆ. ರಾಜ್ಯದಲ್ಲಿ ಎಂಟು ಸಾವಿರ ಕಾನ್ಸ್ಟೇಬಲ್ ಹುದ್ದೆಗಳು ಖಾಲಿ ಇವೆ. ಆದ್ಯತೆಯ ಮೇರೆಗೆ ಭರ್ತಿ ಮಾಡಿಕೊಳ್ಳಲು ಕ್ರಮ ಕೈಗೊಳ್ಳಲಾಗುವುದು. ಜೊತೆಗೆ ರಾಜ್ಯದಲ್ಲಿ ಹೆಚ್ಚುವರಿ ಟ್ರಾಫಿಕ್ ಪೊಲೀಸ್ ಸ್ಟೇಷನ್ ಸೇರಿದಂತೆ ಇನ್ನಿತರ ಕಾರ್ಯಚಟುವಟಿಕೆಗಳಿಗೆ ಮುಂದಿನ ಬಜೆಟ್ನಲ್ಲಿ ಅನುದಾನ ಮೀಸಲಿಡಲಾಗುವುದು ಎಂದರು.
ಆಳಂದ ಶಾಸಕ ಬಿ.ಆರ್. ಪಾಟೀಲ್, ಸಚಿವ ಹೆಚ್. ಕೆ. ಪಾಟೀಲ್ ಆರೋಪದ ಬಗ್ಗೆ ಪ್ರತ್ರಿಕ್ರಿಯಿಸಿ, ಅವರು ಆರೋಪ ಮಾಡಿದ್ದು ಸರ್ಕಾರದ ವಿರುದ್ಧವಲ್ಲ. ಹೆಚ್.ಕೆ ಪಾಟೀಲ್ ಅವರು ಗಣಿ ಹಗರಣದಲ್ಲಿ 1.5 ಲಕ್ಷ ಕೋಟಿ ರೂಪಾಯಿ ಬೇರೆಯವರ ಪಾಲಾಗಿದೆ. ಈ ಕುರಿತು ತನಿಖೆಯಾಗಲಿ, ಹಗರಣದಲ್ಲಿ ಭಾಗಿಯಾದವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಅದನ್ನು ಪರಿಶೀಲಿಸಲಾಗುವುದು. ಬಿ.ಆರ್. ಪಾಟೀಲ್ ಹಿರಿಯರು, ಅವರ ಸಲಹೆಯನ್ನು ಕೂಡ ಸರ್ಕಾರ ಸ್ವೀಕರಿಸಲಿದೆ. ಸರ್ಕಾರ ಎಲ್ಲರ ಕೆಲಸಕ್ಕೂ ಆದ್ಯತೆ ನೀಡುತ್ತಿದೆ. ಇಲ್ಲಿ ಯಾರನ್ನು ತೇಜೋವಧೆ ಮಾಡುವ ಮತ್ತು ಅವರ ಮಾತಿಗೆ, ಸಲಹೆಗಳಿಗೆ ವಿರುದ್ಧವಾದ ಕೆಲಸ ಮಾಡುತ್ತಿಲ್ಲ ಎಂದು ತಿಳಿಸಿದರು.
ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಅವರು ಈ ಹಿಂದೆ ಗಂಗಾವತಿ ಡ್ರಗ್ಸ್ ಹಬ್ ಆಗಿದೆ ಎಂದು ಸದನದಲ್ಲೇ ಹೇಳಿದ್ದರು. ಈ ಕುರಿತು ಸರ್ಕಾರ ಯಾವ ಕ್ರಮ ಕೈಗೊಂಡಿದೆ? ಎಂಬ ಮಾಧ್ಯಮದವರ ಪ್ರಶ್ನೆಗೆ, ರಾಜ್ಯದ ಯಾವುದೇ ಪ್ರದೇಶದಲ್ಲಾಗಲಿ ಗಾಂಜಾ, ಡ್ರಗ್ಸ್ ಸೇವನೆ, ಮಾರಾಟ ಸಹಿಸಲ್ಲ. ಗಂಗಾವತಿ ಅಷ್ಟೇ ಅಲ್ಲ ರಾಜ್ಯದ ಯಾವ ಭಾಗದಲ್ಲಿಯೂ ಇಂತಹ ಘಟನೆಗಳು ಜರುಗುದಂತೆ ನೋಡಿಕೊಳ್ಳಲು ನಾವು ಆಯಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮುಕ್ತ ಅಧಿಕಾರ ನೀಡಿದ್ದೇವೆ. ಇದರಲ್ಲಿ ಸರ್ಕಾರದ ಯಾವುದೇ ವ್ಯಕ್ತಿಗಳು ಒತ್ತಡ ಹಾಕಿಲ್ಲ. ಇನ್ಮುಂದೆ ರಾಜ್ಯದ ಎಲ್ಲಿಯೂ ಇಂತಹ ಪ್ರಕಣಗಳು ನಡೆಯಲು ಬಿಡುವುದಿಲ್ಲ ಎಂದು ಹೇಳಿದರು.
Laxmi News 24×7