ಹೈದರಾಬಾದ್: ಚಿಕನ್ ಮಸಾಲ ಎಂದು ಚಿಕನ್ ಕರ್ರಿಗೆ ಕೀಟನಾಶಕ ಮಿಕ್ಸ್ ಮಾಡಿದ್ದು, ಅದೇ ಆಹಾರವನ್ನು ಸೇವಿಸಿ ಮಕ್ಕಳಿಬ್ಬರು ಮೃತಪಟ್ಟಿರುವ ಘಟನೆ ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ನಡೆದಿದೆ.
ಮೃತರನ್ನು ರೋಹಿತ್ (11) ಮತ್ತು ಜೀವನ್ (8) ಎಂದು ಗುರುತಿಸಲಾಗಿದೆ. ಗುಡಿಪಾಲ ಮಂಡಲದ ಎ.ಎಲ್.ಪುರಂನಲ್ಲಿ ಈ ಘಟನೆ ನಡೆದಿದೆ. ಚಿತ್ತೂರು ಗ್ರಾಮೀಣ ಮಂಡಳಿಯ ಚೆರ್ಲೋಪಳ್ಳಿ ಗ್ರಾಮದ ರೋಹಿತ್ ಮತ್ತು ಜೀವನ ಇಬ್ಬರು ತಮ್ಮ ರಜಾದಿನಗಳನ್ನು ಎಎಲ್ ಪುರಂನಲ್ಲಿರುವ ತಮ್ಮ ಅಜ್ಜಿಯ ಮನೆಯಲ್ಲಿ ಕಳೆಯುತ್ತಿದ್ದರು.
ಸೋಮವಾರ ಅಜ್ಜಿ ಗೋವಿಂದಮ್ಮ (70) ಚಿಕನ್ ಕರ್ರಿ ಮಾಡಿದ್ದಾರೆ. ಆದರೆ ಗೋವಿಂದಮ್ಮ ಚಿಕನ್ ಮಸಾಲ ಎಂದು ಕೊಂಡು ಕೀಟನಾಶಕಗಳನ್ನು ಚಿಕನ್ ಕರ್ರಿಗೆ ಬೆರೆಸಿ ಅಡುಗೆ ಮಾಡಿದ್ದರು. ಇದರ ಅರಿವೇ ಇಲ್ಲದೆ ಗೋವಿಂದಮ್ಮ ಪ್ರೀತಿಯಿಂದ ತಾನು ಮಾಡಿದ್ದ ಚಿಕನ್ ಕರ್ರಿಯನ್ನು ಮೊಮ್ಮಕ್ಕಳಿಗೆ ಬಡಿಸಿದ್ದಾರೆ.
ಕೀಟನಾಶಕ ಮಿಕ್ಸ್ ಮಾಡಿದ್ದ ಆಹಾರ ಸೇವಿಸಿದ ಬಳಿಕ ಮಕ್ಕಳಿಬ್ಬರು ಪ್ರಜ್ಞೆ ತಪ್ಪಿದ್ದಾರೆ. ಅಜ್ಜಿಯೂ ಕೂಡ ಅದೇ ಊಟವನ್ನು ಮಾಡಿದ್ದು, ಅವರು ಕೂಡ ಅಸ್ವಸ್ಥರಾಗಿದ್ದಾರೆ. ತಕ್ಷಣ ಅವರನ್ನು ಚಿತ್ತೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಆದರೆ ಅಷ್ಟರಲ್ಲಿಯೇ ರೋಹಿತ್ ಮತ್ತು ಜೀವನ್ ಮೃತಪಟ್ಟಿದ್ದಾರೆ.
ಸದ್ಯಕ್ಕೆ ಅಜ್ಜಿ ಆಸ್ಪತ್ರೆಯಲ್ಲಿ ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು, ಗ್ರಾಮಕ್ಕೆ ಹೋಗಿ ಪರಿಶೀಲನೆ ನಡೆಸಿದ್ದಾರೆ.