Breaking News
Home / ಜಿಲ್ಲೆ / ಬೆಂಗಳೂರು / ಕುಂಬಳಕಾಯಿ ಕಳ್ಳ ಅಂದ್ರೆ ಬಿಜೆಪಿಯವರೇಕೆ ಹೆಗಲು ಮುಟ್ಟಿನೋಡಿಕೊಳ್ಳುತ್ತಿದ್ದಾರೆ..? : ಡಿಕೆಶಿ

ಕುಂಬಳಕಾಯಿ ಕಳ್ಳ ಅಂದ್ರೆ ಬಿಜೆಪಿಯವರೇಕೆ ಹೆಗಲು ಮುಟ್ಟಿನೋಡಿಕೊಳ್ಳುತ್ತಿದ್ದಾರೆ..? : ಡಿಕೆಶಿ

Spread the love

ಬೆಂಗಳೂರು, ನ.29- ಖಾಸಗಿ ವಿಡಿಯೋ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಾನು ಯಾರ ಹೆಸರನ್ನೂ ಪ್ರಸ್ತಾಪ ಮಾಡಿಲ್ಲ. ಆದರೂ ಬಿಜೆಪಿಯ ಕೆಲವರು ಏಕೆ ಹೆಗಲು ಮುಟ್ಟಿನೋಡಿಕೊಳ್ಳುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ.

ಕರಾವಳಿ ಭಾಗದ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡಿರುವ ಡಿ.ಕೆ.ಶಿವಕುಮಾರ್ ಅವರು, ಇಂದು ಬೆಳಗ್ಗೆ ಕುಂದಾಪುರದಲ್ಲಿರುವ ಮಾಜಿ ಶಾಸಕ ಗೋಪಾಲ್ ಪೂಜಾರಿ ಅವರ ನಿವಾಸಕ್ಕೆ ಭೇಟಿ ನೀಡಿ ಉಪಹಾರ ಸೇವಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಇದ್ದ ಮಾಹಿತಿಯನ್ನು ಸಾರ್ವಜನಿಕವಾಗಿ ನಿನ್ನೆ ಬಹಿರಂಗಪಡಿಸಿದ್ದೇನೆ. ಕಳೆದ 2-3 ತಿಂಗಳ ಹಿಂದೆಯೇ ಖಾಸಗಿ ವಿಡಿಯೋದ ವಿಷಯ ನನಗೆ ಬಂದಿತ್ತು. ಅದನ್ನು ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದಾರೆ, ಬ್ಲಾಕ್‍ಮೇಲ್ ಮಾಡುತ್ತಿದ್ದಾರೆ ಎಂಬ ವದಂತಿಗಳಿದ್ದವು.

ಮೊನ್ನೆ ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಎನ್.ಆರ್.ಸಂತೋಷ್ ಅವರು ಆತ್ಮಹತ್ಯೆಗೆ ಪ್ರಯತ್ನ ಮಾಡಿದ ಬಳಿಕ ನನಗಿದ್ದ ಮಾಹಿತಿಯನ್ನು ಹೇಳಿದ್ದೇನೆ. ಅದಕ್ಕೆ ಬಿಜೆಪಿಯ ಕೆಲ ಸಚಿವರು ಹೆಗಲು ಮುಟ್ಟಿ ನೋಡಿಕೊಳ್ಳುತ್ತಿದ್ದಾರೆ. ಕುಂಬಳಕಾಯಿ ಕಳ್ಳ ಎಂದರೆ ಇವರ್ಯಾಕೆ ತಡಕಾಡಬೇಕೆಂದು ಪ್ರಶ್ನಿಸಿದರು.

ನಾನು ಹೆಸರನ್ನೂ ಹೇಳಲಿಲ್ಲ. ಆದರೂ, ಈಶ್ವರಪ್ಪ ಅವರು ಪ್ರತಿಕ್ರಿಯಿಸುತ್ತಿದ್ದಾರೆ. ಬೆಳಗಾವಿಯ ಸಚಿವರೊಬ್ಬರು ಮಾತನಾಡಿದ್ದಾರೆ. ವಿಧಾನಪರಿಷತ್‍ನಲ್ಲಿ ಅನೇಕ ಸದಸ್ಯರಿದ್ದಾರೆ. ಆದರೂ ವಿಧಾನಪರಿಷತ್‍ನ ಒಬ್ಬ ಸದಸ್ಯ ವಿಡಿಯೋವನ್ನು ಹೈಕಮಾಂಡ್ ನಾಯಕರಿಗೆ ತಲುಪಿಸಿದ್ದಾರೆ ಎಂದು ನಾನು ಹೇಳುತ್ತಿದ್ದಂತೆ ಇವರೆಲ್ಲ ಏಕೆ ಮೈಮುಟ್ಟಿಕೊಳ್ಳಬೇಕು ಎಂದರು.

ಬಿಜೆಪಿಯವರ ಪ್ರತಿಕ್ರಿಯೆಗಳನ್ನು ನೋಡಿದರೆ ಇದರಲ್ಲಿ ಏನೋ ಇದೆ ಎಂಬುದು ಖಚಿತವಾಗಿದೆ. ಬ್ಲಾಕ್‍ಮೇಲ್ ನಡೆಯುತ್ತಿರುವುದು ಸ್ಪಷ್ಟವಾಗಿದೆ ಎಂದು ಹೇಳಿದರು.

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಆತ್ಮಹತ್ಯೆಗೆ ಯತ್ನಿಸಿದ ಬಳಿಕವೂ ರಾಜಕೀಯ ಪಕ್ಷವಾಗಿ ನಾವು ಸುಮ್ಮನಿರಲು ಸಾಧ್ಯವೇ ? ಹಾಗಾಗಿ ಮಾತನಾಡಿದ್ದೇನೆ. ಈ ಪ್ರಕರಣದ ಬಗ್ಗೆ ತನಿಖೆ ನಡೆಸುವುದಾಗಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿರುವುದು ಸ್ವಾಗತಾರ್ಹ. ನಿಷ್ಪಕ್ಷಪಾತ ತನಿಖೆ ನಡೆಯಲಿ, ಸತ್ಯ ಹೊರ ಬರಲಿ ಎಂದು ಅವರು ಹೇಳಿದರು.

ಸಿದ್ದರಾಮಯ್ಯ ಅವರ ಸರ್ಕಾರದ ಅವಯಲ್ಲಿ ಗೋಭಕ್ಷಕರಿಗೆ ರಕ್ಷಣೆ ನೀಡಲಾಗುತ್ತಿತ್ತು. ಡಿ.ಕೆ.ಶಿವಕುಮಾರ್ ಕೂಡ ಅವರಿಗೆ ಬೆಂಬಲವಾಗಿ ನಿಂತಿದ್ದರು. ಇದರಿಂದ ರಕ್ತಪಾತವೇ ನಡೆದಿತ್ತು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್ ಹೇಳಿದ್ದಾರೆ. ಒಂದು ವೇಳೆ ಆ ರೀತಿ ರಕ್ತಪಾತವಾಗಿದ್ದರೆ ಕೇಸು ದಾಖಲಿಸಲಿ ಎಂದು ಶಿವಕುಮಾರ್ ಸವಾಲು ಹಾಕಿದರು.

ಎಷ್ಟು ರಕ್ತಪಾತವಾಗಿತ್ತು ? ಎಷ್ಟು ಬಕೆಟ್‍ಗಳಲ್ಲಿ ರಕ್ತ ತುಂಬಿಕೊಂಡು ಹೋಗಲಾಗಿತ್ತು ಎಂಬ ವಿಷಯದ ಕುರಿತು ತನಿಖೆ ಮಾಡಿದ ಬಹಿರಂಗ ಪಡಿಸಲಿ. ಅನಗತ್ಯವಾಗಿ ಬೇಜವಾಬ್ದಾರಿಯುತವಾಗಿ ಮಾತನಾಡುವುದನ್ನು ಬಿಜೆಪಿ ನಾಯಕರು ನಿಲ್ಲಿಸಲಿ ಎಂದು ಆಗ್ರಹಿಸಿದರು.

ಗ್ರಾಮ ಪಂಚಾಯ್ತಿ ಸೇರಿದಂತೆ ಹಲವಾರು ಚುನಾವಣೆ ಬಗ್ಗೆ ಈಗಾಗಲೇ ನಾವು ತಯಾರಿ ಆರಂಭಿಸಿದ್ದೇವೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಮಾಹಿತಿ ನೀಡುತ್ತೇವೆ ಎಂದು ಹೇಳಿದರು.

ಯಡಿಯೂರಪ್ಪ ಸರ್ಕಾರ ರಚನೆಯಾಗಿರುವುದು ಕಾಂಗ್ರೆಸ್‍ನಿಂದ ಎಂಬುದನ್ನು ಬಿಜೆಪಿ ನಾಯಕರು ಮರೆಯಬಾರದು. ನಮ್ಮಲ್ಲಿ ಗೆದ್ದ ಶಾಸಕರು ರಾಜೀನಾಮೆ ಕೊಟ್ಟು ಹೋಗಿ ಬಿಜೆಪಿಯನ್ನು ಬೆಂಬಲಿಸದೇ ಇದ್ದಿದ್ದರೆ ಅವರ ಸರ್ಕಾರವೇ ರಚನೆಯಾಗುತ್ತಿರಲಿಲ್ಲ. ಬಿಜೆಪಿ ನಾಯಕರು ಇದನ್ನು ಮರೆತು ಮಾತನಾಡಬಾರದು ಎಂದು ತಿರುಗೇಟು ನೀಡಿದರು.


Spread the love

About Laxminews 24x7

Check Also

ಚಿದಾನಂದ ಸವದಿ‌ಗೆ ಚಿಕ್ಕೋಡಿ ಕ್ಷೇತ್ರಕ್ಕೆ ಟಿಕೆಟ್ ನೀಡುವ ಸಾಧ್ಯತೆ

Spread the loveಬೆಳಗಾವಿ, : ಲೋಕಸಭಾ ಚುನಾವಣೆ (Lok Sabha Elections )ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ (Congress) ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ಅಳೆದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ