Home / Uncategorized / ಕರ್ನಾಟಕವನ್ನೇನು ಮೋದಿಗೆ ಬರೆದುಕೊಟ್ಟಿಲ್ಲ, ಕೇಂದ್ರದಿಂದ ಪರಿಹಾರ ಕೊಡಿಸಿ

ಕರ್ನಾಟಕವನ್ನೇನು ಮೋದಿಗೆ ಬರೆದುಕೊಟ್ಟಿಲ್ಲ, ಕೇಂದ್ರದಿಂದ ಪರಿಹಾರ ಕೊಡಿಸಿ

Spread the love

# ಮಹಾಂತೇಶ್ ಬ್ರಹ್ಮ 
ಅವರು ಗಡಿಯಲ್ಲಿ ನಿಂತು ದೇಶ ಕಾಯುವ ಸೈನಿಕರಷ್ಟೇ ಶಿಸ್ತಿನ ಸಿಪಾಯಿಗಳು, ರಾಷ್ಟ್ರೀಯತೆ ಸಿದ್ಧಾಂತಗಳನ್ನು ರಕ್ತದ ಕಣಕಣದಲ್ಲಿ ತುಂಬಿಕೊಂಡವರು. ಎಲ್ಲಿ ನೋವಿದೆಯೋ, ಎಲ್ಲಿ ಕಷ್ಟವಿದೆಯೋ, ಎಲ್ಲಿ ಬಂಧನವಿದೆಯೋ ಅಂತಹ ಜನರಿಗಾಗಿ ಸೇವೆ ಮಾಡುವ ಅವಕಾಶ ನನಗು ಬೇಕು ಎಂದು ತಾಯಿ ಭಾರತ ಮಾತೆಯಲ್ಲಿ ಕೇಳುವವರು ಒಂದೆ ಮಾತಿನಲ್ಲಿ ಹೇಳಬೇಕೆಂದರೆ ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಕಾರ್ಯಕರ್ತರು. ಭೂಕಂಪವಾಗಲಿ, ಚಂಡಮಾರುತವಾಗಲಿ, ಅತಿವೃಷ್ಟಿಯಾಗಲಿ, ಅನಾವೃಷ್ಟಿಯಾಗಲಿ, ಕಾಲರ ಪ್ಲೇಗಿನಿಂದ ಹಿಡಿದು ಈಗಿನ ಕೊರೋನಾದಂತ ಯಾವುದೇ ಮಹಾಮಾರಿ ರೋಗಗಳು ವಕ್ಕರಿಸಿಕೊಂಡರು ಅಲ್ಲಿ ಸ್ವಯಂ ಸೇವಾ ಸಂಘದ ಕಾರ್ಯಕರ್ತರು ನಿಸ್ವಾರ್ಥ ಸೇವೆಗೆ ಹಾಜರಿರುತ್ತಾರೆ.

ಅವರ ಪ್ರಾಣವನ್ನು ಒತ್ತೆಯಿಟ್ಟು ಜನರನ್ನು ರಕ್ಷಿಸುತ್ತಾರೆ ಅವರ ಬದುಕಿನ ಪುನರ್ವಸತಿಗಾಗಿ ಯಾವುದೇ ಮುಜುಗರವಿಲ್ಲದೇ ಬೀದಿ ಬೀದಿ ಸುತ್ತಿ ಜನರಿಂದ ಚಂದಾ ಎತ್ತಿ ಆ ಜನರಬೇಕು ಬೇಡಗಳನ್ನು ಅವಶ್ಯವಾಗಿ ಪೂರೈಸುತ್ತಾರೆ. ಯಾಕೆಂದರೆ ಅವರೆಲ್ಲ ಮಾನವ ಸಂಬಂಧಗಳಿಗೆ ಬೆಲೆ ಕೊಡುವಂತವರು ಅದು ಎಷ್ಟರ ಮಟ್ಟಿಗೆ ಎಂದರೆ ರಸ್ತೆ ಆಚೆಯ ಬದಿಯಲ್ಲಿ ಹೋಗುತ್ತಿರುವ ವ್ಯಕ್ತಿಗೆ ಸಮಸ್ಯೆ ಇದೆ ಎಂದು ತಿಳಿದರೆ, ಇವರೇ ರಸ್ತೆ ದಾಟಿ ಹೋಗಿ ಕೈಲಾದ ಸಹಾಯ ಮಾಡಿ ಅದರಲ್ಲಿ ತೃಪ್ತಿ ಪಡುವವರು.

ಸೆಪ್ಟೆಂಬರ್ 27,1925 ವಿಜಯದಶಮಿ ಯಂದು ಮಹಾರಾಷ್ಟ್ರದ ನಾಗಪುರದಲ್ಲಿ ಡಾ.ಕೇಶವ ಬಲಿರಾಂ ಹೆಡಗೆರವರು ರಾಷ್ಟ್ರೀಯ ಸ್ವಯಂ ಸೇವಾ ಸಂಘ ಸ್ಥಾಪನೆ ಮಾಡಿದರು. ಈ ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಮುಖ್ಯ ಉದ್ದೇಶ ರಾಷ್ಟ್ರ ನಿರ್ಮಾಣ, ಉತ್ತಮ ಸಮಾಜ ನಿರ್ಮಾಣ, ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸಂಘದ ಸೇವೆ ಮಾಡಿ ಅವನನ್ನು ಸಮಾಜದ ಮುಖ್ಯ ವಾಹಿನಿಗೆ ತರುವುದು ಆರ್‍ಎಸ್‍ಎಸ್‍ನ ದೃಢ ಸಂಕಲ್ಪ.

ಅದು ಯಾವುದೇ ಪ್ರಚಾರ ಇಲ್ಲದೇ, ಸ್ವಂತಕ್ಕೆ ಯಾವುದೇ ಲಾಭವು ಇಲ್ಲದೇ, ಅವರ ಬದುಕಿನ ಅಮೂಲ್ಯವಾದ ಸಮಯ, ದುಡಿದ ಹಣವನ್ನು ಖರ್ಚು ಮಾಡಿಕೊಂಡು ಸಂಘ ಸೇವೆ ಮಾಡುತ್ತಾರೆ. ಕೆಲವು ಬಾರಿ ಪ್ರಾಕೃತಿಕ ವಿಕೋಪವಾದ ಸಂದರ್ಭದಲ್ಲಿ ಮನೆ ಮಠ ಬಿಟ್ಟುಬಂದು ವಾರಗಟ್ಟಲೇ ಕೆಲಸ ಮಾಡುವಾಗ ಯಾವುದೋ ಬೀದಿ ಕೊಳಾಯಿ ಬಳಿ ಚಡ್ಡಿಯಲ್ಲಿ ನಿಂತು ಸ್ನಾನ ಮಾಡುತ್ತಾರೆ, ಅಲ್ಲೇ ರಸ್ತೆ ಬದಿಯ ತಿಂಡಿಗಳನ್ನು ತಿಂದು ಹಸಿವು ನೀಗಿಸಿಕೊಳ್ಳುತ್ತಾರೆ ಯಾವುದೋ ಮುರುಕಲು ಶಾಲೆ ಗುಡಿಗಳಲ್ಲಿ ಮಲಗಿ ನಿದ್ರಿಸುತ್ತಾರೆ.

ಇದು ಅಷ್ಟು ಸುಲಭದ ಮಾತಲ್ಲ. ಆದರು ಆರ್‍ಎಸ್‍ಎಸ್ ದೇಶದ ತುಂಬಾ ಲಕ್ಷಾಂತರ ಸ್ವಯಂ ಸೇವಕರನ್ನ ಸೃಷ್ಟಿ ಮಾಡಿದೆ. ಎಂದರೆ ಅದು ಸಂಘದ ಶಕ್ತಿ. ಇಲ್ಲಿ ಕೆಲಸ ಮಾಡುವ ಯಾರಿಗೂ ಪ್ರಚಾರ ಸಿಗುವುದಿಲ್ಲ. ಯಾಕೆಂದರೆ 1925 ರಲ್ಲಿ ಸ್ಥಾಪನೆಯಾದ ಆರ್‍ಎಸ್‍ಎಸ್‍ನಲ್ಲಿ 70 ವರ್ಷಗಳ ಕಾಲ ಪ್ರಚಾರ ವಿಭಾಗ ಎಂಬ ವಿಚಾರವೇ ರಚನೆಯಾಗಿರಲಿಲ್ಲ.

1994 ರಲ್ಲಿ ಆರ್‍ಎಸ್‍ಎಸ್‍ನ ಧ್ಯೇಯೋದ್ದೇಶಗಳನ್ನು ಸಮಾಜಕ್ಕೆ ಮುಟ್ಟಿಸುವ ಸಲುವಾಗಿ ಅಡ್ವರ್ಟೈಸ್‍ಮೆಂಟ್ ಸೆಕ್ಷನ್ ಹುಟ್ಟಿಕೊಂಡಿತು ಆದರೂ ಅಲ್ಲಿ ವ್ಯಕ್ತಿ ಪ್ರಚಾರ ಇಲ್ಲವೇ ಇಲ್ಲ. ಸ್ವಯಂ ಸೇವಾ ಕಾರ್ಯಕರ್ತನಿಂದ ಹಿಡಿದು ಈಗಿನ ರಾಷ್ಟ್ರೀಯ ಸರ ಸಂಘ ಚಾಲಕರಾದ ಮೋಹನ್ ಭಾಗವತ್‍ರವರೆಗೂ ಪ್ರಚಾರದಿಂದ ದೂರ, ಬಲು ದೂರ.

ಈಗಿನ ಕಾಲದಲ್ಲಿ 2 ಕೊಳೆತ ಬಾಳೆಹಣ್ಣುಗಳನ್ನು ದಾನ ಕೊಟ್ಟು ದೊಡ್ಡ ಫೋಟೋ ತೆಗೆದು ಸಾಮಾಜಿಕ ಜಲತಾಣದಲ್ಲಿ ಬಿಟ್ಟಿ ಪ್ರಚಾರ ಪಡೆಯುವ ಜನರ ಮಧ್ಯೆ ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಕಾರ್ಯಕರ್ತರು ಎಷ್ಟು ಭಿನ್ನರು ಅಲ್ಲವೇ..? ಅದಕ್ಕೆ ಸಮಾಜದ ಕೆಲವು ಪೂರ್ವಾ ಗ್ರಹಪೀಡಿತ ಮನಸ್ಥಿತಿಗಳು ಅವರನ್ನು ದ್ವೇಷಿಸುತ್ತವೆ. ಸಂಘಿಗಳು ಎಂದು ಅಪಹಾಸ್ಯ ಮಾಡುತ್ತವೆ. ಯಾಕೆಂದರೆ ಇವರು ಏನು ಎಂಬುದನ್ನು ಇವರೂ ಪ್ರಚಾರ ಮಾಡಿಕೊಳ್ಳಲಿಲ್ಲ, ಪೂರ್ವ ಗ್ರಹ ಪೀಡಿತ ಮನಸ್ಸುಗಳು ಅರ್ಥ ಮಾಡಿಕೊಳ್ಳಲಿಲ್ಲ.

ಅರ್ಥ ಮಾಡಿಕೊಳ್ಳಲು ಸ್ಮೃತಿ ಪ್ರಜ್ಞೆ ಬೇಕು ಅದು ವಿಲಕ್ಷಣ ಮನಸ್ಥಿತಿಗಳಿಗೆ ಅರ್ಥವಾಗುವುದಿಲ್ಲ ಎಂಬುದು ಆರ್‍ಎಸ್‍ಎಸ್‍ನವರ ಅಭಿಪ್ರಾಯ.ಸಂಘದ ಈ ಕೆಳಗಿನ ಸಾಲುಗಳನ್ನು ಓದಿದರೆ ಅವರ ಅನಿಸಿಕೆ ಸತ್ಯವೇ ಇರಬಹುದು ಎಂದು ಅನಿಸುವುದರಲ್ಲಿ ಸಂಶಯವೇ ಇಲ್ಲ.ಶಲಬ್ ಬನ್ ಜಲನಾ, ಸರಲ್ ಹೈ ಸ್ನೇಹ್ ಕಿ ಜಲ್ತಿ ಶಿಖಾ ಪರ್.

ಸ್ವಯಂ ಕೋ ತಿಲ್ ತಿಲ್ ಜಲಾ ಕರ್, ದೀಪ್ ಬನಾನ್ ಹೀ ಕಠಿಣ್ ಹೈ, ಸಾಧನಾ ಕಾ ಪಥ್ ಕಠಿಣ ಹೈ. (ಅರ್ಥ:- ಪತಂಗವಾಗಿ ಉರಿಯುತ್ತಿರುವ ಪ್ರೇಮ ದೀಪದಲ್ಲಿ ಸುಟ್ಟು ಕೊಳ್ಳುವುದು ಸುಲಭ. ಆದರೆ,ತನ್ನನ್ನು ತಾನು ತಾನೇ ಕಣಕಣವಾಗಿ ಸುಟ್ಟುಕೊಂಡು ಇತರರಿಗೆ ಬೆಳಕು ನೀಡುವ ದೀಪವಾಗುವುದು ಕಠಿಣ,ಸೇವೆಗೆ ಮುಡಿಪಾಗಿಡುವ ಹಾದಿ ನಿಜಕ್ಕೂ ಕಠಿಣ)
ಈ ಸಾಲುಗಳು ನಿಜವಾಗಿಯೂ ಭಾರತೀಯ ಜನತಾ ಪಾರ್ಟಿಯ ಜನಪ್ರತಿನಿಧಿಗಳಿಗೆ ಖಂಡಿತವಾಗಿ ಅರ್ಥ ವಾಗಿರುತ್ತದೆ.

ಯಾಕೆಂದರೆ ಭಾಜಪ ಆರ್‍ಎಸ್‍ಎಸ್‍ನ ರಾಜಕೀಯ ಮುಖ ಎಂಬುದು ಇಡೀ ಜಗತ್ತಿಗೆ ಗೊತ್ತಿರುವ ವಿಚಾರ, ಅದರಲ್ಲಿ ಯಾವುದೇ ಮುಚ್ಚು ಮರೆಯಿಲ್ಲ ಯಾಕೆಂದರೆ ಭಾಜಪದಲ್ಲಿ ಒಂದು ಗುಂಡು ಸೂಜಿ ಅಲ್ಲಾಡಬೇಕೆಂದರು ಆರ್‍ಎಸ್‍ಎಸ್‍ನ ಆದೇಶ ಇರಬೇಕು. ಇಂತಹ ಸಂಘ ಪರಿವಾರದ ಹಿನ್ನೆಲೆಯಲ್ಲಿ ಖಾಕಿ ಚಡ್ಡಿ, ಬಿಳಿ ಅಂಗಿ, ತಲೆಗೆ ಟೋಪಿ, ಕೈಯಲ್ಲಿ ಲಾಠಿ ಹಿಡಿದುಕೊಂಡು ಶಾಖೆಯಲ್ಲಿ ವರ್ಷಗಟ್ಟಲೇ ಕೆಲಸ ಮಾಡುತ್ತಾ ಸ್ವಯಂ ಸೇವಕನ ಗುಣಗಳನ್ನು ಅಳವಡಿಸಿಕೊಂಡು ಯಾವುದೇ ವ್ಯಕ್ತಿಗತ ಪ್ರಚಾರ ಇಲ್ಲದೇ, ಸ್ವಂತ ಲಾಭವು ಇಲ್ಲದೇ ಕೇವಲ ಭಗವಧ್ವಜದ ರಕ್ಷಣೆಗಾಗಿ ತಾಯಿ ಭಾರತ ಮಾತೆ ತೃಪ್ತಿ ಪಡುವಂತಹ ರಾಷ್ಟ್ರ ನಿರ್ಮಾಣಕ್ಕಾಗಿ ದುಡಿದು ಆಮೇಲೆ ಭಾಜಪ ದಲ್ಲಿ ಅಧಿಕಾರ ಪಡೆದುಕೊಂಡು ಜನರ ಮಧ್ಯ ಬಂದಾಗ ಸಹಜವಾಗಿ ಅಂತಹ ಜನಪ್ರತಿನಿಧಿಗಳಿಂದ ನಮ್ಮ ಜನರಿಗೆ ಹೆಚ್ಚಿನ ನಿರೀಕ್ಷೆಗಳು ಉಂಟಾಗುತ್ತವೆ.

ಯಾಕೆಂದರೆ ಸೇವೆ ಅವರಿಗೆ ಹೊಸದಲ್ಲ.ಆದರೆ ಆ ಮಟ್ಟಿಗೆ ಭಾಜಪ ಸರ್ಕಾರದಲ್ಲಿ ಕೆಲಸಗಳು ನಡೆಯುತ್ತಿಲ್ಲ ಎಂಬುದಕ್ಕೆ ನಿನ್ನೆ ನಡೆದ ಸಂಪುಟ ಸಭೆಯೇ ಸಾಕ್ಷಿ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ತಮ್ಮ ಸಂಪುಟದ ಸಚಿವರ ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ರಾಜ್ಯದಲ್ಲಿ ನನ್ನ ನಿರೀಕ್ಷೆಯಂತೆ ಅಭಿವೃದ್ಧಿ ಸಾಗುತ್ತಿಲ್ಲ ಇದಕ್ಕೆ ಪೂರಕವಾಗಿ ಸಚಿವರು, ಶಾಸಕರು ಕೆಲಸ ಮಾಡುತ್ತಿಲ್ಲ ಎಂದು ರೇಗಾಡಿದ್ದಾರೆ.

ಉತ್ತರ ಕರ್ನಾಟಕದಲ್ಲಿ ನೆರೆ ಹಾವಳಿ ಬಂದು ಲಕ್ಷ ಹೆಕ್ಟೇರ್ ಲೆಕ್ಕದಲ್ಲಿ ಅಲ್ಲಿನ ಜನರು ಬೆಳೆದ ಬೆಳೆ ನಾಶವಾಗಿದೆ, ಮನೆಗಳು ಬಿದ್ದು ಹೋಗಿವೆ, ಒಂದು ಹೊತ್ತಿನ ಊಟಕ್ಕೂ ಸಂತ್ರಸ್ತರು ಪರದಾಡುವ ಪರಿಸ್ಥಿತಿ ಉಂಟಾಗಿದೆ. ಅದರಲ್ಲೂ ಉತ್ತರ ಕರ್ನಾಟಕ ಭಾಗದಿಂದ ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ ಇಬ್ಬರು ಉಪ ಮುಖ್ಯಮಂತ್ರಿಗಳಿದ್ದಾರೆ. ಆದರೂ ಯಾವ ಪ್ರಯೋಜನವು ಇಲ್ಲ. ಅಲ್ಲಿನ ನಿರಾಶ್ರಿತರಿಗೆ ಇನ್ನು ಗಂಜಿ ಕೇಂದ್ರ ತೆರೆಯುವ ಕೆಲಸವು ಪೂರ್ಣ ಪ್ರಮಾಣದಲ್ಲಿ ಆಗಿಲ್ಲ. ಇನ್ನೂ ಪರಿಹಾರದ ಲೆಕ್ಕಚಾರವಂತೂ ದೂರದ ಮಾತು ಬಿಡಿ,ಇದು ಭಾಜಪ ಸರ್ಕಾರದ ಆಡಳಿತದ ದುರಂತ.

ಯಡಿಯೂರಪ್ಪನವರು ಸುಖಾ ಸುಮ್ಮನೇ ರೇಗಾಡಿದರು ಏನು ಪ್ರಯೋಜನವಿಲ್ಲ ಆರ್‍ಎಸ್‍ಎಸ್ ಸಿದ್ದಾಂತದಂತೇ ಒಬ್ಬರಿಗೆ ಒಂದೇ ಹುದ್ದೆ ಎನ್ನುವಂತೆ, ಒಬ್ಬರಿಗೆ ಒಂದೇ ಖಾತೆ ಎಂಬ ಲೆಕ್ಕದಲ್ಲಿ ಜವಬ್ದಾರಿ ನೀಡಬೇಕು ಆಗ ಎಲ್ಲರಿಗೂ ಅವಕಾಶ ಸಿಗುತ್ತದೆ. ಕೆಲವು ಸಚಿವರ ಕೈಯಲ್ಲಿ ಒಂದಕ್ಕಿಂತ ಹೆಚ್ಚು ಖಾತೆಗಳಿವೆ ಆಗ ಅದು ಕೇವಲ ವ್ಯಾಪಾರವಾಗುತ್ತದೆಯೇ ಹೊರತು ಜನರ ಕಷ್ಟಗಳಿಗೆ ಸ್ಪಂದನೆ ಮಾಡಲು ಸಾಧ್ಯವಿಲ್ಲ.

ಮತ್ತೊಂದು ಕಡೆ ಬಿ.ಎಸ್.ವೈ ಬದಲಾವಣೆಯ ಕುರಿತು ವಾಜಪೇಯಿ ಸಂಪುಟದಲ್ಲಿ ಕೇಂದ್ರ ಸಚಿವರಾಗಿ ಕೆಲಸ ಮಾಡಿರುವ ಬಸವನಗೌಡ ಪಾಟೀಲ್ ಯತ್ನಾಳ್ ರವರ ಹೇಳಿಕೆ ಸರ್ಕಾರದಲ್ಲಿ ಮತ್ತಷ್ಟು ಗೊಂದಲವುಂಟು ಮಾಡಿದೆ. ಜನ ಕೊರೋನ ದಿಂದ ಉದ್ಯೋಗ ಕಳೆದುಕೊಂಡು ಬೀದಿಗೆ ಬಂದಿದ್ದಾರೆ, ಜೊತೆಗೆ ನೆರೆಹಾವಳಿ ಸಿಲುಕಿ ಸಾಯುತ್ತಿದ್ದಾರೆ.ಈಗ ಸರ್ಕಾರದ ಜವಾಬ್ದಾರಿ ಹೆಚ್ಚಿದೆ.

ಯಾವುದೇ ಮುಲಾಜಿಲ್ಲದೇ ಕೇಂದ್ರದಿಂದ ಪರಿಹಾರ ಹಣವನ್ನು ತಂದು ಜನರ ಕಷ್ಟಗಳಿಗೆ ಸ್ಪಂದಿಸಬೇಕು, ಮೋದಿಯವರು ಹಣ ಬಿಡುಗಡೆ ಮಾಡದಿದ್ದರೆ 24 ಸಂಸದರು ಮೋದಿಯವರ ಮುಂದೆ ಎದೆಯುಬ್ಬಿಸಿ ನಿಂತು ಗಟ್ಟಿ ಧ್ವನಿಯಲ್ಲಿ ಕೇಳಬೇಕು. ಯಾಕೆಂದರೆ ಪದೇ ಪದೇ ನಾವು ಉತ್ತರ ಕರ್ನಾಟಕದ ಜನರು ನೆರೆ ಹಾವಳಿಗೆ ತುತ್ತಾಗಿ ಬದುಕನ್ನು ಕಳೆದು ಕೊಳ್ಳುತ್ತಿದ್ದೇವೆ.ನಮಗೆ ಶಾಶ್ವತ ಪರಿಹಾರ ಕಲ್ಪಿಸಿಕೊಡುವುದು ನಿಮ್ಮ ಕತ್ರ್ಯವ್ಯ.ಯಾಕೆಂದರೆ ಭಾಜಪ ಪಕ್ಷ ಇಂದು ದಕ್ಷಿಣ ಕರ್ನಾಟಕದಲ್ಲಿ ಆಡಳಿತ ನಡೆಸುತ್ತಿದ್ದರೆ ಅದಕ್ಕೆ ಕಾರಣ ನಮ್ಮ ಉತ್ತರ ಕರ್ನಾಟಕ ಎಂಬುದನ್ನು ಮರೆಯಬಾರದು.

ಪದೇ ಪದೇ ನಮಗೆ ಯಾಕೆ ಅನ್ಯಾಯ ಮಾಡುತ್ತಿದ್ದೀರಿ..? ಈ ಮಲತಾಯಿ ಧೋರಣೆ ಬಿಟ್ಟುಬಿಡಿ, ಉತ್ತರ ಕರ್ನಾಟಕವೇನು ಬಿಟ್ಟಿ ಬಿದ್ದಿಲ್ಲ ಅಥವ ನಾವು ಮೋದಿಯವರಿಗೇನು ಬರೆದುಕೊಟ್ಟಿಲ್ಲ. ನಮ್ಮ ಪರಿಹಾರ ನಮಗೆ ಕೊಡಿ ಎಂದು ಸಂತ್ರಸ್ತರು ರೊಚ್ಚಿಗೆದ್ದಿದ್ದಾರೆ.

ಏನೇ ಆದರು ಆರ್‍ಎಸ್‍ಎಸ್ ಸಿದ್ಧಾಂತದ ಮೇಲೆ ಆಡಳಿತಕ್ಕೆ ಬಂದಿರುವ ಬಿಜೆಪಿಯ ಬಗ್ಗೆ ಉತ್ತರ ಕರ್ನಾಟಕ ಭಾಗದ ಜನರು ಬೇಸರವಾಗಿರುವುದಂತು ಸುಳ್ಳಲ್ಲ. ಯಾಕೆಂದರೆ ವಿರೋಧ ಪಕ್ಷದ ಬಿಜೆಪಿಯೇ ಬೇರೆ, ಆಡಳಿತ ಪಕ್ಷದ ಬಿಜೆಪಿಯೇ ಬೇರೆ ಎಂಬುದು ಅಲ್ಲಿನ ಜನರ ಆರೋಪ. ಇದರ ಬಗ್ಗೆ ಈ ಸಂಜೆ ಪತ್ರಿಕೆ ಪ್ರತಿಕ್ರಿಯೆ ಪಡೆಯಲು ಬಿಜೆಪಿ ನಾಯಕರಿಗೆ ಕರೆ ಮಾಡಿದರೆ ಯಾವೊಬ್ಬ ನಾಯಕರು ದೂರವಾಣಿ ಕರೆ ಸ್ವೀಕಾರ ಮಾಡಲಿಲ್ಲ..

ಪ್ರಾಯಶ: ಉತ್ತರ ಕರ್ನಾಟಕದ ಸಂತ್ರಸ್ತರ ಸಂಕಷ್ಟಕ್ಕಿಂತ ಉಪ ಚುನಾವಣೆಗಳೇ ಮುಖ್ಯವಾಗಿರಬಹುದೇನೋ..ಗೊತ್ತಿಲ್ಲ..! ಅದಕ್ಕೆ ಅವರೇ ಉತ್ತರಿಸಬೇಕು..

 


Spread the love

About Laxminews 24x7

Check Also

ಮಹಿಳೆ ಮೇಲೆ ಹಲ್ಲೆ ಪ್ರಕರಣ ; ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಸಿಹಿ ತಿನ್ನಿಸಿ ಸ್ವಾಗತ

Spread the loveಬೆಳಗಾವಿ : ಕಳೆದ ಡಿಸೆಂಬರ್ ನಲ್ಲಿ ಬೆಳಗಾವಿ ಹೊರವಲಯದ ಹೊಸ ವಂಟಮೂರಿ ಗ್ರಾಮದಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ