Breaking News
Home / ಜಿಲ್ಲೆ / ಬೆಂಗಳೂರು / ದಸರಾ ವೈಭವ ಆರಂಭ: ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿ ಚಾಲನೆ ನೀಡಿದ ರಾಷ್ಟ್ರಪತಿ

ದಸರಾ ವೈಭವ ಆರಂಭ: ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿ ಚಾಲನೆ ನೀಡಿದ ರಾಷ್ಟ್ರಪತಿ

Spread the love

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ದಸರಾ ಸಂಭ್ರಮ ಆರಂಭವಾಗಿದ್ದು, ಚಾಮುಂಡಿ ಬೆಟ್ಟದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಚಾಲನೆ ನೀಡಿದರು.

ಇದೇ ಮೊದಲ ಬಾರಿಗೆ ದಸರಾ ಉದ್ಘಾಟನೆಗೆ ರಾಷ್ಟ್ರಪತಿ ಆಗಮಿಸಿದ್ದು, ಬೆಳಿಗ್ಗೆ 9.45 ರಿಂದ‌10.05ರ ವೃಶ್ಚಿಕ ಲಗ್ನದಲ್ಲಿ ಚಾಮುಂಡಿ ದೇವಿಗೆ ಅಗ್ರ ಪೂಜೆ ಸಲ್ಲಿಸುವ ಮೂಲಕ ಸಾಂಪ್ರದಾಯಿಕ, ವೈಭವಯುತವಾದ ದಸರಾ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು.

 

ಚಾಮುಂಡಿಬೆಟ್ಟಕ್ಕೆ ಆಗಮಿಸುತ್ತಿದ್ದಂತೆಯೇ ಮೊದಲು ತಾಯಿ ಚಾಮುಂಡೇಶ್ವರಿಯ ದರ್ಶನಕ್ಕೆ ತೆರಳಿದ ರಾಷ್ಟ್ರಪತಿಗಳು ತಾಯಿಯ ದರ್ಶನ ಪಡೆದರು. ದೇವಸ್ಥಾನವನ್ನು ವೀಕ್ಷಿಸಿದರು. ದೇವಸ್ಥಾನದ ಕುರಿತು ಮಾಹಿತಿ ಪಡೆದುಕೊಂಡರು. ಬಳಿಕ ಅವರು ವೇದಿಕೆಗೆ ಆಗಮಿಸುತ್ತಿದ್ದಂತೆಯೇ ಪೊಲೀಸ್ ಬ್ಯಾಂಡ್ ವತಿಯಿಂದ ರಾಷ್ಟ್ರಗೀತೆ ಮೊಳಗಿತು. ಸಭೆಯಲ್ಲಿ ಸೂಜಿ ಬಿದ್ದರೂ ಸದ್ದಾಗುವಷ್ಟು ಶಾಂತತೆ ಇತ್ತು. ಹೆಚ್ಚಿನ ಸಂಖ್ಯೆಯಲ್ಲಿ ಚಿಣ್ಣರು ಆಗಮಿಸಿದ್ದರೂ ಕೂಡ ಶಾಂತಚಿತ್ತರಾಗಿ ಕುಳಿತು ಕಾರ್ಯಕ್ರಮವನ್ನು ತದೇಕಚಿತ್ತರಾಗಿ ವೀಕ್ಷಿಸಿ ಭಾರತದ ಪ್ರಥಮ ಪ್ರಜೆಯನ್ನು ಕಣ್ತುಂಬಿಸಿಕೊಂಡು ಪುಳಕಿತರಾದರು.

ಚಾಮುಂಡೇಶ್ವರಿ ಉತ್ಸವ ಮೂರ್ತಿ ಸಿಂಗಾರಗೊಂಡಿತ್ತು. ಹಚ್ಚ ಹಸಿರು ಜರತಾರಿ ಸೀರೆ ತೊಡಿಸಿ ದೇವಿಗೆ ಸಿಂಗರಿಸಲಾಗಿತ್ತು. ಬಂಗಾರದ ಒಡವೆಗಳು, ತಾಳಿ, ವಿವಿಧ ಬಗೆಯ ಹೂವುಗಳಿಂದ ತಾಯಿ ಚಾಮುಂಡಿಯ ಉತ್ಸವ ಮೂರ್ತಿಯನ್ನು ಅಲಂಕಾರಿಸಲಾಗಿತ್ತು. ಬೆಳ್ಳಿ ಪಲ್ಲಕ್ಕಿಯಲ್ಲಿ ಮಹಿಷ ಮರ್ದಿನಿ‌ ಅವತಾರದ ದೇವಿಗೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ದಸರಾಗೆ ವಿದ್ಯುಕ್ತ ಚಾಲನೆ ದೊರೆಯಿತು.

ವೇದಿಕೆಯಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಖಾತೆ ಸಚಿವ ಪ್ರಹ್ಲಾದ್ ಜೋಶಿ, ಕೇಂದ್ರದ ಕೃಷಿ ಮತ್ತು ರೈತ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್ ಕುಮಾರ್, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಉಪಸ್ಥಿತರಿದ್ದರು.

ವೇದಿಕೆಯ ಮುಂಭಾಗದಲ್ಲಿ ಶಾಸಕರುಗಳಾದ ಜಿ ಟಿ ದೇವೇಗೌಡ ಎಲ್.ನಾಗೇಂದ್ರ, , ತನ್ವೀರ್ ಸೇಠ್, ವಿಧಾನ ಪರಿಷತ್ ಸದಸ್ಯರಾದ ಹೆಚ್.ವಿಶ್ವನಾಥ್, ಸಿ.ಎನ್.ಮಂಜೇಗೌಡ , ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಮತ್ತಿತರರು ಉಪಸ್ಥಿತರಿದ್ದರು.


Spread the love

About Laxminews 24x7

Check Also

ಕುಡಿಯುವುದಕ್ಕೆ ಹಣ ಕೊಟ್ಟಿಲ್ಲವೆಂದು ಪತ್ನಿಗೆ ಚಾಕು ಇರಿದ ಪತಿರಾಯ

Spread the love ಬೆಂಗಳೂರು: ಕುಡಿಯುವುದಕ್ಕೆ ಹಣ ಕೊಟ್ಟಿಲ್ಲವೆಂದು ಗಂಡನನ್ನೇ ಪತ್ನಿಗೆ ಚಾಕು ಇರಿದ ಘಟನೆ ನಡೆದಿದೆ.ನಗರದ ಜಕ್ಕೂರು ಬಳಿಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ