Breaking News
Home / Uncategorized / ಉತ್ತರ ಕರ್ನಾಟಕ ಭಾಗದಲ್ಲಿ 21 ಸಾವಿರ ಕೋಟಿ ರೂ. ವೆಚ್ಚದಲ್ಲಿ 847 ಕಿ.ಮೀ. ಉದ್ದದ ಹೆದ್ದಾರಿ ನಿರ್ಮಾಣ: ನಿತಿನ್ ಗಡ್ಕರಿ

ಉತ್ತರ ಕರ್ನಾಟಕ ಭಾಗದಲ್ಲಿ 21 ಸಾವಿರ ಕೋಟಿ ರೂ. ವೆಚ್ಚದಲ್ಲಿ 847 ಕಿ.ಮೀ. ಉದ್ದದ ಹೆದ್ದಾರಿ ನಿರ್ಮಾಣ: ನಿತಿನ್ ಗಡ್ಕರಿ

Spread the love

ಬೆಂಗಳೂರು : ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಹಾಗೂ ಎಂಎಸ್ಎಂಇ ಸಚಿವ ನಿತಿನ್ ಗಡ್ಕರಿ ಅವರು ಇಂದು ಉತ್ತರ ಕರ್ನಾಟಕ ಭಾಗದಲ್ಲಿ 21 ಸಾವಿರ ಕೋಟಿ ರೂ. ವೆಚ್ಚದಲ್ಲಿ 847 ಕಿ.ಮೀ. ಉದ್ದದ ಹೆದ್ದಾರಿ ನಿರ್ಮಾಣದ 13 ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ ಎಂದು ಘೋಷಿಸಿದರು..

ಅವರು ಇಂದು 323 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗುತ್ತಿರುವ ಹುಬ್ಬಳ್ಳಿಯ ರಾಣಿ ಚೆನ್ನಮ್ಮ ವೃತ್ತದ ಎಲಿವೇಟೆಡ್ ಕಾರಿಡಾರ್ ಹಾಗೂ ಕಲಘಟಗಿ ತಾಲ್ಲೂಕು ದಾಸ್ತಿಕೊಪ್ಪ ಗ್ರಾಮದಲ್ಲಿ ಬೇಡ್ತಿ ನಾಲೆಗೆ ಸೇತುವೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡುತ್ತಿದ್ದರು

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಭಾರತ ಸರ್ಕಾರವು ಕರ್ನಾಟಕ ರಾಜ್ಯದಲ್ಲಿನ ಹೆದ್ದಾರಿಗಳ ಅಭಿವೃದ್ಧಿಗೆ ಬದ್ಧವಾಗಿದೆ. ಈ ನಿಟ್ಟಿನಲ್ಲಿ ಹುಬ್ಬಳ್ಳಿ-ಧಾರವಾಡ ಬೈಪಾಸ್ ಚತುಷ್ಪಥ ರಸ್ತೆ ನಿರ್ಮಾಣ, ಬೆಳಗಾವಿ ಚತುಷ್ಪಥ ವರ್ತುಲ ರಸ್ತೆ ಸೇರಿದಂತೆ ಒಟ್ಟು 13 ಹೊಸ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ವಿವರಿಸಿದರು.

ಅಂತೆಯೇ ಹುಬ್ಬಳ್ಳಿ-ಹೊಸಪೇಟೆ ಹೆದ್ದಾರಿ ಸೇರಿದಂತೆ, ಉತ್ತರ ಕರ್ನಾಟಕದ ಪ್ರಗತಿಯಲ್ಲಿರುವ ಯೋಜನೆಗಳನ್ನೂ ಸಹ ಶೀಘ್ರವೇ ಪೂರ್ಣಗೊಳಿಸುವ ಭರವಸೆ ನೀಡಿದರು

ರಾಣಿ ಚೆನ್ನಮ್ಮ ವೃತ್ತದ ಎಲಿವೇಟೆಡ್ ಕಾರಿಡಾರ್ ಹಾಗೂ ದಾಸ್ತಿಕೊಪ್ಪ ಗ್ರಾಮದ ಬೇಡ್ತಿ ನಾಲಾ ಮೇಲಿನ ಸೇತುವೆ ನಿರ್ಮಾಣದಿಂದ ಅಂಕೋಲಾ- ಗುತ್ತಿ ಹೆದ್ದಾರಿಯಲ್ಲಿ ಸುಗಮ ಸಂಚಾರಕ್ಕೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟರು.

ರಾಜ್ಯದಲ್ಲಿ 1.16 ಲಕ್ಷ ಕೋಟಿ ರೂ. ಗಳನ್ನು ಹೆದ್ದಾರಿ ಅಭಿವೃದ್ಧಿಗಾಗಿ ಹೂಡಿಕೆ ಮಾಡುವ ಕೇಂದ್ರ ಸರ್ಕಾರದ ಕ್ರಮದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಮುಖ್ಯಮಂತ್ರಿಗಳು, ರಾಜ್ಯದ ಎಲ್ಲ ಹೆದ್ದಾರಿ ಯೋಜನೆಗಳು ಕಾಲಬದ್ಧವಾಗಿ ಪೂರ್ಣಗೊಳ್ಳಲು ಅಗತ್ಯ ಸಹಕಾರ ನೀಡುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ ಜೋಷಿ ಅವರು ರಾಣಿ ಚೆನ್ನಮ್ಮ ವೃತ್ತದ ಎಲಿವೇಟೆಡ್ ಕಾರಿಡಾರ್ ನಿಂದ ಹುಬ್ಬಳ್ಳಿ ನಗರದಲ್ಲಿ ಸಂಚಾರ ದಟ್ಟಣೆ ನಿವಾರಣೆಯಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಉಪ ಮುಖ್ಯಮಂತ್ರಿ ಗೋವಿಂದ ಎಂ. ಕಾರಜೋಳ ಅವರು ಮಾತನಾಡಿ, ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಅಧಿಕಾರದ ಅವಧಿಯಲ್ಲಿ 77,297 ಕೋಟಿ ರೂಪಾಯಿಗಳ ವೆಚ್ಚದಲ್ಲಿ 222 ಯೋಜನೆಗಳಿಗೆ ಮಂಜೂರಾತಿ ನೀಡಿ, 8,819 ಕಿ.ಮೀ. ರಸ್ತೆಯನ್ನು ಮೇಲ್ದರ್ಜೆಗೆ ಏರಿಸಲು ಕ್ರಮ ವಹಿಸಿದ್ದನ್ನು ಶ್ಲಾಘಿಸಿದರು.

ಕರ್ನಾಟಕ ರಾಜ್ಯದ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮತ್ತು ಹೆದ್ದಾರಿಯಲ್ಲಿ ಸಂಪೂರ್ಣ ಸಹಕಾರ ನೀಡುತ್ತಿರುವುದಕ್ಕಾಗಿ ಮತ್ತು ಕೋವಿಡ್ 19 ಸಾಂಕ್ರಾಮಿಕ ಸನ್ನಿವೇಶದಲ್ಲಿಯೂ ಕೂಡ ರಸ್ತೆಗಳ ನಿರ್ಮಾಣ ವಿಷಯದಲ್ಲಿ ತೋರಿರುವ ಮುತುವರ್ಜಿ, ಮಾರ್ಗದರ್ಶನ, ಆರ್ಥಿಕ ಹಾಗೂ ತಾಂತ್ರಿಕ ನೆರವು ನೀಡಿದ್ದಕ್ಕಾಗಿ ಕರ್ನಾಟಕ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಅವರು ಹುಬ್ಬಳ್ಳಿ ನಗರದ ಜನತೆಯ ಬಹುದಿನಗಳ ಬೇಡಿಕೆ ಈಡೇರುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಅಂತೆಯೇ ಹುಬ್ಬಳ್ಳಿ-ಧಾರವಾಡ ಬೈಪಾಸ್ ರಸ್ತೆಯನ್ನು ಚತುಷ್ಪಥ ರಸ್ತೆಯಾಗಿಸಲು ಹಾಗೂ ಹುಬ್ಬಳ್ಳಿ-ಹೊಸಪೇಟೆ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿ ಶೀಘ್ರವೇ ಪೂರ್ಣಗೊಳಿಸುವಂತೆ ಮನವಿ ಮಾಡಿದರು.

ಸಮಾರಂಭದಲ್ಲಿ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ, ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಖಾತೆ ರಾಜ್ಯ ಸಚಿವ ಜನರಲ್ ವಿ.ಕೆ. ಸಿಂಗ್ ಮತ್ತು ಇತರರು ಭಾಗವಹಿಸಿದ್ದರು


Spread the love

About Laxminews 24x7

Check Also

ಖಾನಾಪುರ: ಲಂಚ ಪಡೆಯುವಾಗ ಸಿಕ್ಕಿಬಿದ್ದ ಎಂಜಿನಿಯರ್

Spread the love ಖಾನಾಪುರ: ಸ್ಥಳೀಯ ಪಂಚಾಯತ್ ರಾಜ್ ಎಂಜಿನಿಯರಿಂಗ್ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (ಎಇಇ) ದುರದುಂಡೇಶ್ವರ ಮಹಾದೇವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ