ನವದೆಹಲಿ: ಕೆಪಿಸಿಸಿ ಅಧ್ಯಕ್ಷ ಸ್ಥಾನ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಕೈ ತಪ್ಪಲಿದೆ ಎಂಬ ಚರ್ಚೆಗಳು ಆರಂಭವಾಗಿವೆ. ಕೆಪಿಸಿಸಿ ಅಧ್ಯಕ್ಷ ಸ್ಥಾನ ವಿಚಾರವಾಗಿ ಹೈಕಮಾಂಡ್ ಲಿಂಗಾಯತ ಹಾಗೂ ಉತ್ತರ ಕರ್ನಾಟಕ ಭಾಗದವರಿಗೆ ಮಣೆ ಹಾಕುವ ನಿಟ್ಟಿನಲ್ಲಿ ಚಿಂತನೆ ನಡೆಸಿದ್ದು, ಈ ಹಿನ್ನಲೆಯಲ್ಲಿ ಎಂ.ಬಿ ಪಾಟೀಲ್, ಈಶ್ವರ್ ಖಂಡ್ರೆ ಅವರಿಗೆ ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಪಕ್ಷ ನಿಷ್ಠೆ, ಹಿರಿತನ ಹಾಗೂ ಸಂಘಟನಾ ಚಾತುರ್ಯದ ದೃಷ್ಟಿಯಿಂದ ಡಿ.ಕೆ.ಶಿವಕುಮಾರ್‌ಗೆ ಕೆಪಿಸಿಸಿ ಸಾರಥ್ಯ ವಹಿಸಲು ಹೈಕಮಾಂಡ್ ಬಯಸಿತ್ತು. ಆದರೆ, ಪ್ರಭಾವಿ ಲಿಂಗಾಯತ ಸಮುದಾಯವನ್ನು ಮರಳಿ ಪಕ್ಷದ ತೆಕ್ಕೆಗೆ ಸೆಳೆಯುವುದೂ, ಜಾತಿ, ಪ್ರದೇಶ ಸಮೀಕರಣ ಆಧರಿಸಿ ಕೆಪಿಸಿಸಿ ಅಧ್ಯಕ್ಷ ಸ್ಥಾನ ಜವಾಬ್ದಾರಿ ನೀಡುವ ಸಂಬಂಧ ಹೈಕಮಾಂಡ್ ಆಲೋಚನೆಯಲ್ಲಿದೆ.
ಬಿಜೆಪಿಗೆ ಬೆಂಬಲ ನೀಡುತ್ತಿರುವ ಲಿಂಗಾಯತ ಸಮುದಾಯವನ್ನು ಕಾಂಗ್ರೆಸ್ ತನ್ನ ತೆಕ್ಕೆಗೆ ಸೆಳೆಯಲು ಮುಮ್ದಾಗಿದ್ದು, ಈ ನಿಟ್ಟಿನಲ್ಲಿ ಎಂ.ಬಿ ಪಾಟೀಲ್ ಅಥವಾ ಖಂಡ್ರೆ ಅವರನ್ನು ಕೆಪಿಸಿಸಿ ಅಧ್ಯಕ್ಷ ಗಾದಿಗೆ ಕೂರಿಸುವುದು ಸೂಕ್ತ ಎಂಬ ವಿಚಾರಕ್ಕೆ ವರಿಷ್ಠರು ಬಂದಿದ್ದಾರೆ.
ಇನ್ನು ಕೆಪಿಸಿಸಿ ಆಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದ ಡಿ.ಕೆ ಶಿವಕುಮಾರ್ ಅವರ ಮನವೊಲಿಕೆ ಕಷ್ಟದಾಯಕವಲ್ಲ. ಕಾರಣ ಹೈಕಮಾಂಡ್ ಸೂಚನೆಗೆ ವಿರುದ್ಧವಾಗಿ ಡಿಕೆಶಿ ಹೋಗುವವರಲ್ಲ. ಹೀಗಾಗಿ, ಅವರಿಗೆ ವಿಧಾನಸಭೆ ವಿಪಕ್ಷ ಉಪನಾಯಕ ಸ್ಥಾನ, ಸಿಡಬ್ಯ್ಲೂಸಿ ಸದಸ್ಯತ್ವದಂತಹ ಬೇರೆ ಜವಾಬ್ದಾರಿಗಳನ್ನು ನೀಡಬಹದು ಎಂಬ ಲೆಕ್ಕಾಚಾರದಲ್ಲಿ ಹೈಕಮಾಂಡ್ ತೊಡಗಿದೆ. ಒಟ್ಟಾರೆ ಡಿಕೆಶಿಯವರಿಗೆ ಕೆಪಿಸಿಸಿ ಅಧ್ಯಕ್ಷ ಗಾದಿ ಕೈತಪ್ಪುವ ಸಾಧ್ಯತೆ ಇದೆ ಎನ್ನಲಾಗಿದೆ.