27 ಕ್ಕೇರಿದ ಕೊರೋನಾ ಸೊಂಕೀತರ ಸಂಖ್ಯೆ: ನಾಳೆಯಿಂದ ಇಡೀ ರಾಜ್ಯ ಸಂಪೂರ್ಣ ಲಾಕಡೌನ್ ಸಾಧ್ಯತೆ
ಬೆಂಗಳೂರು: ಕೊರೋನಾ ವೈರಸ್ ಸೋಂಕು ನಿಗ್ರಹಿಸಲು ರಾಜ್ಯ ಸರ್ಕಾರ ಕಠಿಣ ಕ್ರಮಗಳನ್ನ ತೆಗೆದುಕೊಂಡಿದೆ. ಕೇಂದ್ರ ಸರ್ಕಾರದ ಸೂಚನೆಯಂತೆ ರಾಜ್ಯದ 9 ಜಿಲ್ಲೆಗಳಲ್ಲಿ ಇಂದಿನಿಂದ ಬಂದ್ ಆದೇಶ ಹೊರಡಿಸಿದೆ. ಇನ್ನು, ನಾಳೆಯಿಂದ ಸಂಪೂರ್ಣ ರಾಜ್ಯ ಸ್ಥಗಿತಗೊಳಿಸಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ ಎನ್ನಲಾಗಿದೆ.
ಇಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ. ಪ್ರತಿಪಕ್ಷ ಸದಸ್ಯರ ಅಭಿಪ್ರಾಯವನ್ನೂ ಪಡೆದು ಇಂದು ಸಂಜೆ ಬಿಎಸ್ವೈ ಅಂತಿಮ ನಿರ್ಧಾರ ಪ್ರಕಟಿಸಲಿದ್ದಾರೆ.
ಆರೋಗ್ಯ, ಗೃಹ, ಕಂದಾಯ, ಅರಣ್ಯ ಸೇರಿದಂತೆ ಪ್ರಮುಖ ಇಲಾಖೆಗಳು ಮಾತ್ರ ಕಾರ್ಯ ನಿರ್ವಹಿಸುತ್ತಿವೆ. ಉಳಿದೆಲ್ಲ ಇಲಾಖೆಗಳನ್ನು ತಾತ್ಕಾಲಿಕವಾಗಿ ಬಂದ್ ಮಾಡಲು ಸಭೆಯಲ್ಲಿ ಚರ್ಚೆ ನಡೆಸಲಾಗಿದೆ ಎನ್ನುವುದು ಮೂಲಗಳ ಮಾಹಿತಿ. ಇನ್ನು, ಈ ಬಾರಿ ಬೆಂಗಳೂರು ಕರಗ ನಡೆಸದಂತೆಯೂ ತೀರ್ಮಾನ ಮಾಡಲಾಗಿದೆ.
ಕೊರೋನಾ ವೈರಸ್ ಸೋಂಕಿತರು ಪತ್ತೆಯಾಗಿರುವ ಜಿಲ್ಲೆಗಳನ್ನು ಲಾಕ್ ಡೌನ್ ಮಾಡಲು ಈ ಮೊದಲು ನಿರ್ಧರಿಸಲಾಗಿತ್ತು. ಅಂತೆಯೇ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮಂಗಳೂರು, ಮೈಸೂರು, ಬೆಳಗಾವಿ, ಕಲಬುರ್ಗಿ, ಧಾರವಾಡ, ಚಿಕ್ಕಬಳ್ಳಾಪುರ ಮತ್ತು ಕೊಡಗು ಜಿಲ್ಲೆಗಳಲ್ಲಿ ಮಾರ್ಚ್ 31ರವರೆಗೆ ಬಂದ್ ಮಾಡಲು ಆದೇಶಿಸಲಾಗಿದೆ.
ಭಾರತದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಏರುತ್ತಲೇ ಇದೆ. ಭಾರತದಲ್ಲಿ ಕೊರೋನಾಗೆ ಬಲಿಯಾದವರ ಸಂಖ್ಯೆ 8ಕ್ಕೆ ಏರಿದೆ. ಈ ಮೂಲಕ ಮುಂಬೈವೊಂದರಲ್ಲೇ ಮೂರು ವ್ಯಕ್ತಿಗಳು ಕೊರೋನಾಗೆ ಬಲಿಯಾದಂತಾಗಿದೆ. ಕರ್ನಾಟಕದಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ 27 ಹಾಗೂ ಭಾರತದಾದ್ಯಂತ ಪ್ರಕರಣಗಳ ಸಂಖ್ಯೆ 415 ದಾಟಿದೆ.