ಬಳ್ಳಾರಿ: ಜಿಂದಾಲ್ ಕಾರ್ಖಾನೆಯಲ್ಲಿ ಸೋಂಕಿತರ ಸಂಖ್ಯೆ ಏರುತ್ತಲೇ ಇದೆ. ಇದರಿಂದ ಸುತ್ತಲಿನ ಗ್ರಾಮಗಳು ಸಹ ಭೀತಿಯಲ್ಲೇ ದಿನ ಕಳೆಯುತ್ತಿವೆ. ಈ ಮಧ್ಯೆ ಬಳ್ಳಾರಿ ಜಿಲ್ಲಾಡಳಿತ ಇಂದಿನಿಂದ 12 ದಿನಗಳ ಕಾಲ ಗ್ರಾಮ ಸಂಪರ್ಕ ನಿರ್ಬಂಧಿಸಿತ್ತು. ಆದರೆ ಜಿಂದಾಲ್ ಮಾತ್ರ ನೆಪ ಮಾತ್ರಕ್ಕೆ ಗೇಟ್ ಕ್ಲೋಸ್ ಮಾಡಿದ್ದು ಹೊರಗಿನ ಕಾರ್ಮಿಕರು ಬಿಂದಾಸ್ ಆಗಿಯೇ ಎಂಟ್ರಿ ಕೊಡುತ್ತಿದ್ದಾರೆ.
ಹೌದು. ಬಳ್ಳಾರಿಯ ಜಿಂದಾಲ್ ಕಾರ್ಖಾನೆ ಕೊರೊನಾ ಕಾರ್ಖಾನೆಯಾಗಿದೆ. ಸೋಂಕಿತರ ಪ್ರಮಾಣ ಭಾರೀ ಮಟ್ಟದಲ್ಲಿ ಏರಿಕೆಯಾಗುತ್ತಿದ್ದು, ಇಲ್ಲಿವರೆಗೂ 178 ಪ್ರಕರಣಗಳು ಜಿಂದಾಲ್ ಒಂದರಲ್ಲೇ ಪತ್ತೆಯಾಗಿರೋದು ಆತಂಕಕ್ಕೆ ಕಾರಣವಾಗಿದೆ. 500ಕ್ಕೂ ಹೆಚ್ಚು ಪ್ರಾಥಮಿಕ ಸಂಪರ್ಕ ಹಾಗೂ 269 ಮಂದಿಯ ದ್ವಿತೀಯ ಸಂಪರ್ಕಿತರನ್ನು ಕ್ವಾರಂಟೈನ್ ಮಾಡಲಾಗಿದೆ. ಸೋಂಕಿತರ ಪ್ರಮಾಣ ಹೆಚ್ಚಾಗುವ ಎಲ್ಲಾ ಲಕ್ಷಣಗಳೂ ಇದ್ದು, ಸುತ್ತಮುತ್ತಲಿನ ಜನ ಉಸಿರು ಹಿಡಿದುಕೊಂಡೇ ಬದುಕು ಸಾಗಿಸುತ್ತಿದ್ದಾರೆ. ಕೆಲವು ಹಳ್ಳಿಗಳಲ್ಲಿ ಕಾರ್ಮಿಕರಿಗೆ ಗ್ರಾಮಕ್ಕೆ ಪ್ರವೇಶ ನಿರ್ಬಂಧ ಮಾಡಲಾಗಿದ್ದು, ಜಿಂದಾಲ್ ಮುಚ್ಚಬೇಕು ಇಲ್ಲವೇ ಸೀಲ್‍ಡೌನ್ ಮಾಡಬೇಕು ಅನ್ನೋ ಕೂಗು ಕೇಳಿಬಂದಿತ್ತು.
ಇಷ್ಟೆಲ್ಲಾ ಆದ್ಮೇಲೂ ಜಿಂದಾಲ್ ಕಂಪನಿ ಪೂರ್ಣವಾಗಿ ಎಚ್ಚೆತ್ತುಕೊಂಡಿಲ್ಲ. ಇಂದಿನಿಂದ ಜೂನ್ 30ರವರೆಗೆ ಜಿಂದಾಲ್ ಕಾರ್ಮಿಕರ ಗ್ರಾಮಪ್ರವೇಶ ಹಾಗೂ ಗ್ರಾಮದ ಜನ ಜಿಂದಾಲ್ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಆದೇಶದ ಮೊದಲ ದಿನವಾದ ನಿನ್ನೆ ಪೊಲೀಸರು ಬ್ಯಾರಿಕೇಡ್ ಹಾಕಿದ್ರು. ಜಿಂದಾಲ್ ಕಂಪನಿಯ ಮೈನ್ ಗೇಟ್ ಮಾತ್ರ ಕ್ಲೋಸ್ ಮಾಡಿದ್ದು, ಇನ್ನೊಂದು ಗೇಟ್ ಮೂಲಕ ಉದ್ಯೋಗಿಗಳು ಆರಾಮಾಗಿ ಓಡಾಡ್ತಿದ್ದ ದೃಶ್ಯ ಕಂಡುಬಂತು.
ಸೋಂಕು ಎಷ್ಟೇ ಹೆಚ್ಚಿದ್ರೂ ಜಿಂದಾಲ್ ನೌಕರರು ಮಾತ್ರ ಕ್ಯಾರೇ ಅಂತಿಲ್ಲ. ಜಿಲ್ಲಾಧಿಕಾರಿಗಳು ಹೊರಡಿಸಿರೋ ಆದೇಶಕ್ಕೂ ತಲೆಕೆಡಿಸಿಕೊಳ್ಳದೆ ಓಡಾಡ್ತಿರೋದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಜಿಂದಾಲ್ ಈ ನಡೆಗೆ ಜಿಲ್ಲಾಡಳಿತ ಯಾವ ಕ್ರಮ ಕೈಗೊಳ್ಳುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.