ಬೆಳಗಾವಿ: ಬೆಳಗಾವಿಗೆ ವಿಮಾನ ಸಂಪರ್ಕವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಬೆಳಗಾವಿ-ಬೆಂಗಳೂರು-ದೆಹಲಿ ಮಾರ್ಗಗಳಲ್ಲಿ ಪ್ರತಿದಿನ ವಿಮಾನ ಸಂಚಾರ ಪುನರಾರಂಭಿಸುವಂತೆ ಗುರುವಾರ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕೆ. ರಾಮಮೋಹನ ನಾಯ್ಡು ಅವರನ್ನು ಸಂಸದ ಜಗದೀಶ ಶೆಟ್ಟರ್ ಒತ್ತಾಯಿಸಿದರು.
ನವದೆಹಲಿಯ ಸಂಸತ್ ಭವನದಲ್ಲಿ ಸಚಿವರನ್ನು ಭೇಟಿ ಮಾತನಾಡಿ, ಬೆಂಗಳೂರು-ಬೆಳಗಾವಿ ಹಾಗೂ ನವದೆಹಲಿ-ಬೆಳಗಾವಿ ಮಾರ್ಗಗಳಲ್ಲಿ ಇಂಡಿಗೋ ಸಂಸ್ಥೆ ವಾರದ ಆಯ್ದ ದಿನಗಳಲ್ಲಿ ಮಾತ್ರ ವಿಮಾನ ಸೇವೆ ನೀಡುತ್ತಿರುವುದರಿಂದ ವ್ಯಾಪಾರಿಗಳು, ವಿದ್ಯಾರ್ಥಿಗಳು, ಉದ್ಯೋಗಿಗಳು ಮತ್ತು ಸಾರ್ವಜನಿಕರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಈ ಹಿಂದೆ ಇದ್ದಂತೆ ಪ್ರತಿದಿನ ವಿಮಾನ ಸಂಚಾರವನ್ನು ಪುನರಾರಂಭಿಸಲು ಇಂಡಿಗೋ ಸಂಸ್ಥೆಗೆ ನಿರ್ದೇಶನ ನೀಡುವಂತೆ ಮನವಿ ಮಾಡಿದರು.
ಜೂ.16ರಿಂದ ಬೆಂಗಳೂರು-ಬೆಳಗಾವಿ ಮಾರ್ಗದಲ್ಲಿ ಸೇವೆಯ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿದ್ದು, ನವದೆಹಲಿ-ಬೆಳಗಾವಿ ಮಾರ್ಗದಲ್ಲೂ ವಾರದಲ್ಲಿ ಕೇವಲ ಮೂರು ದಿನಗಳಷ್ಟೇ ವಿಮಾನ ಸೇವೆ ಲಭ್ಯವಿರುವುದರಿಂದ ಪ್ರಯಾಣಿಕರ ಸಂಚಾರದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಿದೆ. ಕೈಗಾರಿಕೆ, ಶಿಕ್ಷಣ ಹಾಗೂ ವಾಣಿಜ್ಯ ಕ್ಷೇತ್ರಗಳಲ್ಲಿ ವೇಗವಾಗಿ ಬೆಳೆಯುತ್ತಿರುವ ಬೆಳಗಾವಿಯ ಅಗತ್ಯವನ್ನು ಪರಿಗಣಿಸಿ, ಇಲ್ಲಿನ ವಿಮಾನ ನಿಲ್ದಾಣವನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನಾಗಿ ಅಭಿವೃದ್ಧಿಪಡಿಸಬೇಕು.ಬೆಳಗಾವಿಯಿಂದ ಚೆನ್ನೈ, ಪುಣೆ ಮತ್ತು ಅಹಮದಾಬಾದ ನಗರಗಳಿಗೆ ಹೊಸ ವಿಮಾನಯಾನ ಸೇವೆ ಆರಂಭಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಇದಕ್ಕೆ ಸ್ಪಂದಿಸಿದ ಕೇಂದ್ರ ಸಚಿವರು, ಸಾರ್ವಜನಿಕ ಹಿತದೃಷ್ಟಿಯಿಂದ ಅಗತ್ಯ ಕ್ರಮಗಳನ್ನು ಶೀಘ್ರದಲ್ಲೇ ಕೈಗೊಳ್ಳುವ ಭರವಸೆ ನೀಡಿದರು ಎಂದು ಸಂಸದರು ತಿಳಿಸಿದ್ದಾರೆ.
Laxmi News 24×7