ಬಾಗಲಕೋಟೆ: ಹಾಸ್ಟೆಲ್ ವಿದ್ಯಾರ್ಥಿನಿಯೊಬ್ಬಳಿಗೆ ನಡು ರಸ್ತೆಯಲ್ಲೇ ಖಾಸಗಿ ಅಂಗ ತೋರಿಸಿ ಅಸಭ್ಯವಾಗಿ ವರ್ತಿಸಿದ ಆರೋಪ ಕೇಳಿಬಂದಿದ್ದು, ಘಟನೆಗೆ ಸಂಬಂಧಿಸಿದಂತೆ ಬಾಗಲಕೋಟೆಯ ನವನಗರ ಪೊಲೀಸರ ಕ್ರಮದ ವಿರುದ್ಧ ಕುಟುಂಬಸ್ಥರು ಹಾಗೂ ನೊಂದ ವಿದ್ಯಾರ್ಥಿನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಾಗಲಕೋಟೆಯ ನವನಗರದ 51ನೇ ಸೆಕ್ಟರ್‌ನಲ್ಲಿ ಸೆ.17ರಂದು ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಸುದೀಪ ನಾಡಗೌಡ ಎಂಬ ಯುವಕ ವಿದ್ಯಾರ್ಥಿನಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಈ ವೇಳೆ ವಿದ್ಯಾರ್ಥಿನಿ ಸಹಾಯಕ್ಕಾಗಿ ಕೂಗಿಕೊಂಡಿದ್ದು, ಆಕೆಯ ನೆರವಿಗೆ ಚೇತನ್ ಕೊಡಬಾಗಿ ಹಾಗೂ ರೋಹನ್ ಹಾದಿಮನಿ ಎಂಬ ಇಬ್ಬರು ಯುವಕರು ಧಾವಿಸಿದ್ದಾರೆ.
ಘಟನೆ ವೇಳೆ ಸ್ಥಳೀಯರು ಆರೋಪಿತ ಯುವಕನಿಗೆ ಥಳಿಸಿದ್ದು, ವಿದ್ಯಾರ್ಥಿನಿಯೂ ಆತನಿಗೆ ಚಪ್ಪಲಿಯಿಂದ ಹೊಡೆದಿದ್ದಾಳೆ. ಬಳಿಕ ಪ್ರಕರಣ ನವನಗರ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ಆದ್ರೆ ಕಾಮುಕನನ್ನ ಬಿಟ್ಟು ವಿದ್ಯಾರ್ಥಿನಿಯ ಸಹಾಯಕ್ಕೆ ಧಾವಿಸಿದ್ದ ಚೇತನ್ ಕೊಡಬಾಗಿ ಹಾಗೂ ರೋಹನ್ ಹಾದಿಮನಿ ಅವರನ್ನು ನವನಗರ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಪೊಲೀಸರ ಈ ನಡೆಗೆ ಕುಟುಂಬಸ್ಥರು ಹಾಗೂ ವಿದ್ಯಾರ್ಥಿನಿ ಕೂಡ ಆಕ್ರೋಶ ಹೊರಹಾಕಿದ್ದಾರೆ.
ವಿದ್ಯಾರ್ಥಿನಿಗೆ ಅಸಭ್ಯವಾಗಿ ವರ್ತಿಸಿದ ಆರೋಪ ಎದುರಿಸುತ್ತಿರುವ ಸುದೀಪ ನಾಡಗೌಡನನ್ನ ಪೊಲೀಸರು ಇದುವರೆಗೂ ಬಂಧಿಸಿಲ್ಲ ಎಂಬುದು ಕುಟುಂಬಸ್ಥರು ಆರೋಪಿಸಿದ್ದಾರೆ. ಆದ್ರೆ ಆರೋಪಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಿನ್ನೆಲೆ ಬಂಧನವಾಗಿಲ್ಲ ಎಂದು ಪೊಲೀಸರು ಸಬೂಬು ಹೇಳುತ್ತಿದ್ದಾರೆ.
ಪೊಲೀಸರ ಕ್ರಮಕ್ಕೆ ಆಕ್ರೋಶ
ವಿದ್ಯಾರ್ಥಿನಿಗೆ ಸಹಾಯ ಮಾಡಲು ಬಂದ ಇಬ್ಬರು ಯುವಕರನ್ನ ಬಂಧಿಸಿರುವುದಕ್ಕೆ ಅವರ ಕುಟುಂಬಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆರೋಪಿತ ಯುವಕನ ವಿರುದ್ಧ ಕ್ರಮ ಕೈಗೊಳ್ಳದೆ, ಸಂತ್ರಸ್ತೆಯ ನೆರವಿಗೆ ಬಂದ ಯುವಕರನ್ನ ಬಂಧಿಸಿರುವುದು ಏಕೆ ಎಂದು ಪ್ರಶ್ನಿಸಿದ್ದಾರೆ.
ಆರೋಪಿತ ಸುದೀಪ ನಾಡಗೌಡನನ್ನು ತಕ್ಷಣ ಬಂಧಿಸಬೇಕು ಹಾಗೂ ವಿದ್ಯಾರ್ಥಿನಿಯ ರಕ್ಷಣೆಗೆ ಧಾವಿಸಿದ್ದ ಚೇತನ್ ಕೊಡಬಾಗಿ ಮತ್ತು ರೋಹನ್ ಹಾದಿಮನಿ ಅವರನ್ನು ಬಿಡುಗಡೆ ಮಾಡಬೇಕು ಎಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ.
ನನ್ನ ಸಹಾಯಕ್ಕೆ ಬಂದಿದ್ದರು ಎಂದ ವಿದ್ಯಾರ್ಥಿನಿ
ಘಟನೆಯಿಂದ ನೊಂದ ವಿದ್ಯಾರ್ಥಿನಿ ಈ ಬಗ್ಗೆ ಮಾತನಾಡಿ, ತಾನು ಸಹಾಯಕ್ಕಾಗಿ ಕೂಗಿಕೊಂಡಾಗ ಚೇತನ್ ಹಾಗೂ ರೋಹನ್ ನೆರವಿಗೆ ಬಂದಿದ್ದರು. ಹೀಗಾಗಿ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೇ, ಅವರನ್ನು ಬಿಡುಗಡೆ ಮಾಡಬೇಕು ಎಂದು ಪೊಲೀಸರನ್ನು ಆಗ್ರಹಿಸಿದ್ದಾರೆ.
Laxmi News 24×7