ಬೆಂಗಳೂರು: ಡಿಕೆ ಶಿವಕುಮಾರ್ ಅವರು ಮನಸ್ಸು ಮಾಡಿದ್ರೆ, ಸ್ವಂತ ಹಣದಲ್ಲೇ ಸಾಲ ಮನ್ನಾ ಮಾಡಬಹುದು ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಹೇಳಿದರು.
ಬೆಂಗಳೂರಿನಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರೈತರ ಸಾಲ ಮನ್ನಾಗೆ ಆಗ್ರಹಿಸಿದರು.
ಡಿಕೆ ಶಿವಕುಮಾರ್ ಅವರು ಮನಸು ಮಾಡಿದ್ರೆ, ತಮ್ಮ ಸ್ವಂತ ಹಣದಲ್ಲೇ ಸಾಲ ಮನ್ನಾ ಮಾಡಬಹುದು. ರೈತರು ಸಾಲಮನ್ನಾ ಆಗಬೇಕು ಅಂತ ಹೇಳ್ತಿದ್ದಾರೆ. ಸಿಎಂ ಕೂಡಾ ʻʻಸಿದ್ದರಾಮಯ್ಯ, ಕುಮಾರಸ್ವಾಮಿ ಕಾಲದಲ್ಲಿ ಸಾಲ ಮನ್ನಾ ಆಗಿದೆ. ನಾನು ಸಾಲಮನ್ನಾ ಮಾಡಿಲ್ಲ ಅಂದ್ರೆ 2028 ಚುನಾವಣೆಗೆ ಕಷ್ಟ ಆಗುತ್ತೆ ಅಂತ ಹೀಗಾಗಿ ದುಡ್ಡು ಹೊಂದಿಸಿʼʼ ಅಂತ ಹೇಳ್ತಾರೆ. ಡಿಕೆ ಶಿವಕುಮಾರ್ ಮನಸು ಮಾಡಿದ್ರೆ ಸಾಲ ಮನ್ನಾ ಮಾಡೋಕೆ ಆರ್ಥಿಕ ಇಲಾಖೆ ಬೇಕಿಲ್ಲ ಎಂದು ಕುಟುಕಿದರು.
ಬೆಂಗಳೂರು ಸುತ್ತಮುತ್ತ ಸಾವಿರಾರು ಕೋಟಿ ಆಸ್ತಿ ನುಂಗಲು ಹೊರಟಿದ್ದಾರೆ. ʻನೈಸ್ʼ ಹೆಸರಿನಲ್ಲಿ ಸಾವಿರಾರು ಕೋಟಿ ನುಂಗೋಕೆ ಹೊರಟಿದ್ದಾರೆ. ಮನಸ್ಸು ಮಾಡಿದ್ರೆ ಡಿಕೆಶಿ ತಮ್ಮ ಕೈಯಿಂದಲೇ ಸಾಲ ಮನ್ನಾ ಮಾಡಬಹುದು. ವೈಯಕ್ತಿಕವಾಗಿಯೇ ಸಾಲ ಮನ್ನಾ ಮಾಡಬಹುದು. ಇತ್ತೀಚೆಗೆ ಬಹಳ ಬದಲಾವಣೆ ಆಗಿರೋ ರೀತಿ ತೋರಿಸ್ತಾ ಇದ್ದಾರೆ. ಅದು ಕಾರ್ಯ ರೂಪಕ್ಕೆ ಇಲ್ಲಿವರೆಗೂ ಹಲವಾರು ರೀತಿ ಸಂಪಾದನೆ ಮಾಡಿರೋ ಹಣವನ್ನ ಜನರ ಪರವಾಗಿ ಕೊಟ್ಟರೆ 2028ಕ್ಕೂ, ಮುಂದೆಯೂ ನಾನೇ ಸಿಎಂ ಅಂತ ಹೇಳ್ತಾ ಇದ್ದಾರೆ. ಇದು ಮಾಡಿದ್ರೆ ಅದೂ ಆಗಬಹುದು ಎಂದು ಭವಿಷ್ಯ ನುಡಿದರು.
ನಾನೂ ಮೋದಿ, ಮನಮೋಹನ್ ಸಿಂಗ್ ಬಳಿ ಹಣ ಕೇಳಿದ್ನಾ?
ಇನ್ನು ಸಾಲಮನ್ನಾಗೆ ಮೋದಿ ಸಹಕಾರ ಬೇಕು ಎಂದ ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿ, ನಾನು ಎರಡು ಬಾರಿ ಸಾಲಮನ್ನಾ ಮಾಡಿದಾಗ ಮೋದಿ, ಮನಮೋಹನ್ ಸಿಂಗ್ ಅವರ ಬಳಿ ಹಣ ಕೊಡಿ ಅಂತ ಕೇಳಿದ್ನಾ? ನಮ್ಮ ತೆರಿಗೆ ಹಣದಿಂದ ಸಾಲಮನ್ನಾ ಮಾಡಿದ್ದೇನೆ. ಪೊಳ್ಳು ಘೋಷಣೆಗಳನ್ನ ಸಿಎಂ ಮೊದಲು ಬಿಡಲಿ. ಎಷ್ಟು ಕೆಲಸ ಆಗುತ್ತೋ ಅಷ್ಟು ಸಾಲ ಮಾಡಿ ಎಂದು ಒತ್ತಾಯಿಸಿದರು.
ಕಸ್ತೂರಿ ರಂಗನ್ ವರದಿ ವಿಚಾರದಲ್ಲಿ ಎಲ್ಲರ ಧ್ವನಿ ಒಂದೇ
ಇನ್ನೂ ಸೋಮವಾರದಿಂದ ವಿಶೇಷ ಕ್ಯಾಬಿನೆಟ್ ವಿಚಾರವಾಗಿ ಮಾತನಾಡಿ, ವಿಶೇಷ ಅಧಿವೇಶನದಲ್ಲಿ ಕಸ್ತೂರಿ ರಂಗನ್ ವರದಿ ಚರ್ಚೆ ಆಗಲಿ ಸಂತೋಷ. ಕಸ್ತೂರಿ ರಂಗನ್ ವರದಿ ವಿಚಾರದಲ್ಲಿ ಎಲ್ಲಾ ಪಕ್ಷಗಳ ಧ್ವನಿ ಒಂದೇ. ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಸೇರಿ ಎಲ್ಲಾ ರೈತರು, ಜನರು ವರದಿ ಜಾರಿ ಬೇಡ ಅಂತ ಹೇಳ್ತಾ ಇದ್ದಾರೆ. ಅನೇಕ ವರ್ಷಗಳಿಂದ ಹೋರಾಟ ಮಾಡ್ತಾ ಇದ್ದಾರೆ. ಸಿಎಂ ಅವರು ಕಸ್ತೂರಿ ರಂಗನ್ ವರದಿ ಮತ್ತು ಬರಗಾಲದ ಬಗ್ಗೆ ಅಧಿವೇಶನ ಅಂತ ಹೇಳ್ತಾ ಪ್ರಚಾರ ಮಾಡಿದ್ದಾರೆ. ಕಸ್ತೂರಿ ರಂಗನ್ ವರದಿ ಜಾರಿ ಮಾಡಬಾರದು ಅಂತ ಎಲ್ಲರ ನಿಲುವು ಇದೆ. ನಮ್ಮ ಪಕ್ಷದ ನಿಲುವು ಇದೆ. ಒಂದು ಧ್ವನಿಯಾಗಿ ಈ ವಿಚಾರದಲ್ಲಿ ನಾವು ಹೋರಾಟ ಮಾಡಬೇಕು ಎಂದು ಕರೆ ನೀಡಿದರು.
ಬರಗಾಲದ ಬಗ್ಗೆ ಏನ್ ಚರ್ಚೆ ಮಾಡ್ತಾರೆ?
ಇನ್ನೂ ರಾಜ್ಯದಲ್ಲಿ ಬರ ವಿಚಾರ ಸಂಬಂಧ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ, ಬರಗಾಲದ ಬಗ್ಗೆ ಏನ್ ಚರ್ಚೆ ಮಾಡ್ತಾರೆ. ಇವರ ಬಳಿ ಏನ್ ಇದೆ? ಬರಗಾಲ ಸಂಬಂಧ ಯಾವುದೇ ಭಾಗದ ರೈತರಿಗೆ ಪರಿಹಾರ ಕೊಟ್ಟಿಲ್ಲ. 2-3 ಬಾರಿ ಬಿತ್ತನೆ ಮಾಡಿದ್ರು ಬೆಳೆ ಒಣಗಿ ಹೋಗಿದೆ. ಇದಕ್ಕೆ ಹಣ ಖರ್ಚು ಮಾಡಿದ್ದು ಸಂಪೂರ್ಣ ನಾಶವಾಗಿದೆ. ಸಿಎಸ್ ಅವರು ಬ್ಯಾಂಕರ್ಸ್‌ಗೆ ಒಂದು ವರ್ಷ ಸಾಲ ವಸೂಲಿ ಮುಂದೂಡಿ ಅಂತ ಹೇಳಿದ್ದಾರೆ. ನಾನು ಮಂಡ್ಯದಲ್ಲಿ ದಿಶಾ ಮೀಟಿಂಗ್ ನಲ್ಲಿ ಡಿಸಿಗಳಿಗೆ ನಾನು ಸೂಚನೆ ಕೊಟ್ಟಿದ್ದೆ. ಸರ್ಕಾರದಿಂದ ಏನ್ ಮಾಡ್ತೀರಾ? ಹಳ್ಳಿಗಳಲ್ಲಿ ಕುಡಿಯೋ ನೀರಿನ ಸಮಸ್ಯೆ ಇದೆ. ಕುಡಿಯೋ ನೀರಿನ ಸಮಸ್ಯೆ ಸರ್ಕಾರ ಬಗೆಹರಿಸಿಲ್ಲ. ದುಂಡು ವೆಚ್ಚ ಮಾಡಿಕೊಂಡು ಸರ್ಕಾರ ರೈತರಿಗೆ ಪರಿಹಾರ ಕೊಡ್ತಿಲ್ಲ. ಸಿಎಂ ಅವರೇ ಬೆಳೆ ಬೆಳೆಯಬೇಡಿ ಅಂತ ಹೇಳಿದ್ರು. ಈಗ ಆ ರೈತರಿಗೆ ಏನ್ ಮಾಡ್ತೀರಾ? ಸಾಲಸೋಲ ಮಾಡಿ ಬಿತ್ತನೆ ಮಾಡಿದ್ರು ಫಲ ಸಿಕ್ಕಿಲ್ಲ ಅವರಿಗೆ ಏನ್ ಮಾಡ್ತೀರಾ? ಸದನದಲ್ಲಿ ಏನ್ ಚರ್ಚೆ ಮಾಡ್ತೀರಾ? ಎಂದು ಪ್ರಶ್ನೆಗಳ ಮಳೆ ಸುರಿಸಿದ್ರು ಕುಮಾರಸ್ವಾಮಿ.
Laxmi News 24×7