ಬೆಳಗಾವಿ: ಕಿತ್ತೂರು ತಾಲೂಕಿನ ಅವರಾದಿ ಗ್ರಾಮ ಪಂಚಾಯ್ತಿಗೆ ನುಗ್ಗಿ ತಂದೆ ಮಗಳನ್ನು ಬರ್ಬರವಾಗಿ ಹತ್ಯೆಗೈದಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಕೊಲೆಯಾದ ಮಾಜಿ ಯೋಧ ರುದ್ರಪ್ಪ ಅವರ ಸಹೋದರ ಬಸಪ್ಪ ಕುಂದರಗಿ, ಸಂಗಪ್ಪ ಕುಂದರಗಿ ಮತ್ತು ಪುತ್ರ ಮಡಿವಾಳಪ್ಪ ಕುಂದರಗಿ ಬಂಧಿತ ಆರೋಪಿಗಳು. ಕೊಲೆಗೆ ಬಳಿಸಿದ ಆಯುಧಗಳನ್ನೂ ಸಹ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆಸ್ತಿ ವಿಚಾರಕ್ಕೆ ಅಣ್ಣ ತಮ್ಮಂದಿರ ನಡುವೆ ಗಲಾಟೆ ನಡೆಯುತ್ತಿತ್ತು. ಅದೇ ಆಸ್ತಿ ಪಾಲುದಾರಿಕೆಗೆ ಅರ್ಜಿ ಸಲ್ಲಿಸಲು ಮತ್ತೊಬ್ಬ ಸಹೋದರ ಗ್ರಾಮ ಪಂಚಾಯ್ತಿಗೆ ಬಂದಿದ್ದಾಗ ಕೊಲೆ ಮಾಡಲಾಗಿತ್ತು. ರುದ್ರಪ್ಪ ಕುಂದರಗಿ (67), ಪುತ್ರಿ ಶಶಿಕಲಾ ಕುಂದರಗಿ (26) ಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಘಟನೆಯಲ್ಲಿ ರುದ್ರಪ್ಪ ಅವರ ಕಾರು ಚಾಲಕನಿಗೂ ಸಹ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
38 ಗುಂಟೆ ಆಸ್ತಿ ಪೈಕಿ ಮೂರು ಜನರಿಗೆ ಹಂಚಿಕೆ ಮಾಡಿ ಕೋರ್ಟ್ ಆದೇಶ ಮಾಡಿತ್ತು ಎನ್ನಲಾಗಿದೆ. ಆದರೆ ರುದ್ರಪ್ಪ ತನಗೆ ಬಂದಿದ್ದ ಜಮೀನನ್ನು ಮೊದಲೇ ಮಾರಿಕೊಂಡು, ಉಳಿದ ಜಮೀನಿನಲ್ಲೂ ತನಗೆ ಪಾಲು ಬೇಕು ಎಂದು ಪಟ್ಟು ಹಿಡಿದಿದ್ದರು ಎನ್ನಲಾಗಿದೆ. ಇದರಿಂದ ಸಿಟ್ಟಿಗೆದ್ದಿದ್ದ ಇಬ್ಬರು ಸಹೋದರರು ಕೊಲೆಗೈದಿದ್ದರು. ಈ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ.
Laxmi News 24×7