Home / Uncategorized / ಆರ್ಥಿಕ ಸಂಕಷ್ಟ – ತಿರುಪತಿ ದೇವಾಲಯದ 500 ಕೋಟಿ ಸ್ಥಿರಾಸ್ತಿ ಮಾರಾಟ?

ಆರ್ಥಿಕ ಸಂಕಷ್ಟ – ತಿರುಪತಿ ದೇವಾಲಯದ 500 ಕೋಟಿ ಸ್ಥಿರಾಸ್ತಿ ಮಾರಾಟ?

Spread the love

ಹೈದರಾಬಾದ್: ಕೋವಿಡ್ 19 ಲಾಕ್‍ಡೌನ್ ನಿಂದ ಸೃಷ್ಟಿಯಾಗಿರುವ ಹಣಕಾಸು ಸಮಸ್ಯೆಯನ್ನು ಪರಿಹಾರ ಮಾಡಲು ತನ್ನ ಕೆಲ ಸ್ಥಿರಾಸ್ತಿಗಳನ್ನು ಮಾರಾಟ ಮಾಡಲು ತಿರುಪತಿ ತಿರುಮಲ ದೇಗುಲ (ಟಿಟಿಡಿ)ದ ಆಡಳಿತ ಮಂಡಳಿ ಚಿಂತನೆ ನಡೆಸಿದೆ.

ಹೌದು. ಮಾರ್ಚ್ ಮೂರನೇ ವಾರದಲ್ಲಿ ತಿರುಪತಿ ದೇಗುಲದ ಬಾಗಿಲು ಮುಚ್ಚಿದ್ದು, ಜೂನ್ ತಿಂಗಳಿನಲ್ಲಿ ಬಾಗಿಲು ತೆರೆಯಲು ತೆರೆಯಲು ಅನುಮತಿ ಸಿಗುತ್ತದೆಯೋ ಇಲ್ಲವೋ ಎನ್ನುವುದು ಸ್ಪಷ್ಟವಾಗಿಲ್ಲ. ಒಂದು ವೇಳೆ ಜೂನ್ ತಿಂಗಳಿನಲ್ಲೂ ದೇವಾಲಯದ ಬಾಗಿಲು ತೆರೆಯದಿದ್ದರೆ ಭಕ್ತರು ದೇಣಿಗೆ ರೂಪದಲ್ಲಿ ನೀಡಿದ್ದ ಕೆಲ ಸ್ಥಿರಾಸ್ತಿಯನ್ನು ಮಾರಾಟ ಮಾಡಲು ಟಿಟಿಡಿ ಮುಂದಾಗಿದೆ.

ಚೆನ್ನೈ, ಮುಂಬೈ, ಸೇರಿದಂತೆ ಕೆಲ ಮಹಾನಗರಗಳಲ್ಲಿ ಭಕ್ತರು ಆಸ್ತಿ ನೀಡಿದ್ದು, ಆ ಸ್ಥಿರಾಸ್ತಿಗಳು ದಶಕಗಳಿಂದ ನಿರುಪಯುಕ್ತ ಸ್ಥಿತಿಯಲ್ಲಿದೆ. ಇವುಗಳ ಪೈಕಿ 500 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಮಾರಾಟ ಮಾಡಿ ಹಣ ತುಂಬಿಸಲು ಚಿಂತನೆ ನಡೆಸಿದೆ ಎಂದು ಮೂಲಗಳನ್ನು ಆಧಾರಿಸಿ ಮಾಧ್ಯಮವೊಂದು ವರದಿ ಮಾಡಿದೆ.

ಟಿಟಿಡಿಯಲ್ಲಿ ಖಾಯಂ ಮತ್ತು ಗುತ್ತಿಗೆ ರೂಪದಲ್ಲಿ ಒಟ್ಟು 22 ಸಾವಿರ ಸಿಬ್ಬಂದಿ ಇದ್ದು, ಇವರ ತಿಂಗಳ ವೇತನ ಪಾವತಿಗೆ 115 ಕೋಟಿ ರೂ. ಬೇಕಾಗುತ್ತದೆ. ಆದಾಯ ಸಮಸ್ಯೆಯಾದ ಹಿನ್ನೆಲೆಯಲ್ಲಿ 7 ಸಾವಿರ ರೂ. ಕಾಯಂ ಸಿಬ್ಬಂದಿಗೆ ಅರ್ಧ ಸಂಬಳ ಪಾವತಿಸಲಾಗುತ್ತಿದೆ. ಜೂನ್ ತಿಂಗಳಿನಲ್ಲಿ ದೇವಾಲಯ ತೆರೆಯದಿದ್ದರೆ ಭಾರೀ ಕಷ್ಟವಾಗುವ ಸಾಧ್ಯತೆಯಿದೆ. ಈ ಕಾರಣಕ್ಕೆ ಮೇ 28ಕ್ಕೆ ಟಿಟಿಡಿ ಆಡಳಿತ ಮಂಡಳಿ ಸಭೆಯಲ್ಲಿ ಸ್ಥಿರಾಸ್ತಿ ಮಾರಾಟದ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆಯಿದೆ.

2020-21ನೇ ಸಾಲಿನಲ್ಲಿ ಹುಂಡಿ ಮೂಲಕ 1,350 ಕೋಟಿ ರೂ., ಲಡ್ಡು, ವಿಶೇಷ ದರ್ಶನ ಟಿಕೆಟ್ ಮೂಲಕ 900 ಕೋಟಿ ರೂ. ಸಂಗ್ರಹವಾಗಬಹುದು ಎಂದು ಟಿಟಿಡಿ ಅಂದಾಜಿಸಿತ್ತು. ಆದರೆ ಲಾಕ್‍ಡೌನ್ ನಿಂದಾಗಿ ದೇವಾಲ ಮುಚ್ಚಿದ್ದು, ಪ್ರತಿ ತಿಂಗಳು 115 ಕೋಟಿ ರೂ. ಆದಾಯ ನಷ್ಟವಾಗುತ್ತಿದೆ.

ವಿವಿಧ ಬ್ಯಾಂಕ್‍ಗಳಲ್ಲಿ 14 ಸಾವಿರ ಕೋಟಿ ನಗದು, ಮತ್ತು 8 ಸಾವಿರ ಕೆಜಿ ಚಿನ್ನವನ್ನು ಟಿಟಿಡಿ ಇಟ್ಟಿದ್ದು, ಇದರಿಂದ ಒಟ್ಟು ವರ್ಷಕ್ಕೆ 750 ಕೋಟಿ ರೂ. ಬಡ್ಡಿ ಬರುತ್ತದೆ. ಈ ಆಸ್ತಿಯನ್ನು ಮಾರಾಟ ಮಾಡುವುದಿಲ್ಲ ಎಂದು ಟಿಟಿಡಿ ಅಧ್ಯಕ್ಷ ವೈ.ವಿ.ಸುಬ್ಬಾರೆಡ್ಡಿ ಹೇಳಿದ್ದಾರೆ.


Spread the love

About Laxminews 24x7

Check Also

ಮಹಿಳೆ ಮೇಲೆ ಹಲ್ಲೆ ಪ್ರಕರಣ ; ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಸಿಹಿ ತಿನ್ನಿಸಿ ಸ್ವಾಗತ

Spread the loveಬೆಳಗಾವಿ : ಕಳೆದ ಡಿಸೆಂಬರ್ ನಲ್ಲಿ ಬೆಳಗಾವಿ ಹೊರವಲಯದ ಹೊಸ ವಂಟಮೂರಿ ಗ್ರಾಮದಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ