ಹಾವೇರಿ: ಮದ್ಯ ಮಾರಾಟಕ್ಕೆ ವಿರೋಧ ವ್ಯಕ್ತಪಡಿಸಿ ಮದ್ಯದ ಅಂಗಡಿಗಳ ಆರಂಭದ ದಿನವೇ ಮಹಿಳೆಯರು ಕಲ್ಲೆಸೆದು ಮದ್ಯದ ಅಂಗಡಿಗಳನ್ನ ಬಂದ್ ಮಾಡಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಮೇ 4ರಂದು ಹಾವೇರಿ ಜಿಲ್ಲೆ ಶಿಗ್ಗಾಂವಿ ಪಟ್ಟಣದ ಒಂದು ಎಂಎಸ್‍ಐಎಲ್ ಮತ್ತು ಎರಡು ಎಂಆರ್‌ಪಿ ಮದ್ಯದ ಅಂಗಡಿಗಳಿಗೆ ಕಲ್ಲೆಸೆದು ಕೆಲಕಾಲ ಅಂಗಡಿಗಳನ್ನ ಬಂದ್ ಮಾಡಿಸಿದ್ದರು. ಲಾಕ್‍ಡೌನ್ ವೇಳೆಯಲ್ಲಿ ಮದ್ಯದ ಅಂಗಡಿಗಳು ಬಂದ್ ಆಗಿದ್ದರಿಂದ ಪುರುಷರು ಮನೆಯಲ್ಲಿ ಸುಮ್ಮನಿದ್ದರು. ಆದರೆ ಈಗ ಮದ್ಯದ ಅಂಗಡಿಗಳು ಆರಂಭ ಆಗಿದ್ದರಿಂದ ಮತ್ತೆ ಕುಟುಂಬಗಳು ಹಾಳಾಗುತ್ತವೆ ಎಂದು ಗರಂ ಆಗಿದ್ದ ಮಹಿಳೆಯರು ಮದ್ಯದಂಗಡಿಗಳ ಮೇಲೆ ಕಲ್ಲೆಸೆದು, ಅಂಗಡಿಗಳನ್ನ ಬಂದ್ ಮಾಡಿಸಿ ತಮ್ಮ ಆಕ್ರೋಶ ಹೊರಹಾಕಿದ್ದರು.
ಪೊಲೀಸ್ ಸಿಬ್ಬಂದಿ ಸ್ಥಳದಲ್ಲಿಯೇ ಇದ್ದರೂ ಕ್ಯಾರೇ ಮಾಡದೆ ಮದ್ಯದ ಅಂಗಡಿಗಳ ಮೇಲೆ ಕಲ್ಲೆಸೆದು ಅಂಗಡಿಗಳನ್ನ ಮಹಿಳೆಯರು ಬಂದ್ ಮಾಡಿಸಿದ್ದರು. ಅಂಗಡಿಗಳ ಮೇಲೆ ಮಹಿಳಾ ಮಣಿಗಳು ಕಲ್ಲೆಸೆದು ಮದ್ಯದಂಗಡಿ ಬಂದ್ ಮಾಡಿಸಿದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ.