ಹಾವೇರಿ: ರಾಜ್ಯಾದ್ಯಂತ ಜೂನ್ 25ರಿಂದ ಎಸ್‍ಎಸ್‍ಎಲ್‍ಸಿ ಪರೀಕ್ಷೆಗಳು ಆರಂಭವಾಗಲಿವೆ. ಆದರೆ ಜಿಲ್ಲೆಯಲ್ಲಿ ಪರೀಕ್ಷೆಗೆ ಹಾಜರಾಗಬೇಕಿದ್ದ ವಿದ್ಯಾರ್ಥಿನಿಗೆ ಕೋವಿಡ್-19 ತಗುಲಿರುವುದು ದೃಢಪಟ್ಟಿದೆ.
ಜಿಲ್ಲೆಯಲ್ಲಿ ಶನಿವಾರ ಹನ್ನೆರಡು ಜನರಿಗೆ ಹೆಮ್ಮಾರಿ ಕೊರೊನಾ ಪತ್ತೆಯಾಗಿದೆ. ಇತ್ತ ಶಿಗ್ಗಾಂವಿ ಪಟ್ಟಣದ ದೇಸಾಯಿ ಗಲ್ಲಿ ಮತ್ತು ಗೌಡರ ಓಣಿಯ ಒಟ್ಟು 12 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಪೈಕಿ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿನಿ ಕೂಡ ಇದ್ದು, ಎಲ್ಲರನ್ನೂ ಜಿಲ್ಲೆಯ ಕೋವಿಡ್-19 ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಲಾಗುತ್ತಿದೆ.
62 ವರ್ಷದ ವೃದ್ಧೆ (ರೋಗಿ-6252) ಮತ್ತು ವೃದ್ಧೆಯ 46 ವರ್ಷದ (ರೋಗಿ-6832) ಸಂಪರ್ಕದಲ್ಲಿದ್ದ ಅದೇ ಓಣಿಯ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿನಿಗೆ 15 ವರ್ಷದ ಬಾಲಕಿಗೆ ಕೊರೊನಾ ಸೋಂಕು ಧೃಡಪಟ್ಟಿದೆ. (ರೋಗಿ-8644) ವಿದ್ಯಾರ್ಥಿನಿ ತಂದೆ-ತಾಯಿಯೊಂದಿಗೆ ವಾಸವಾಗಿದ್ದು, ಕಂಟೈನ್‍ಮೆಂಟ್ ಪ್ರದೇಶದವಳಾಗಿದ್ದಾಳೆ.
ವೃದ್ಧೆ ಮತ್ತು ಆಕೆಯ ಮಗನಿಗೆ ಸೋಂಕು ದೃಢಪಟ್ಟ ನಂತರ ದೇಸಾಯಿ ಗಲ್ಲಿಯನ್ನು ಜಿಲ್ಲಾಡಳಿತ ಸೀಲ್‍ಡೌನ್ ಮಾಡಿತ್ತು. ಜೂನ್ 17ರಂದು ಆರೋಗ್ಯ ಇಲಾಖೆ ಹನ್ನೆರಡು ಜನರ ಗಂಟಲು ದ್ರವವನ್ನು ಪಡೆದು ಕೊರೊನಾ ಪರೀಕ್ಷೆಗೆ ಕಳುಹಿಸಲಾಗಿತ್ತು. ಶನಿವಾರ ಸಂಜೆ ಬಂದ ವರದಿಯಲ್ಲಿ 12 ಜನರಿಗೆ ಸೋಂಕು ತಗುಲಿರುವುದು ಧೃಡಪಟ್ಟಿದೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 39ಕ್ಕೆ ಏರಿದೆ.