ಬೆಂಗಳೂರು:ಸಿಲಿಕಾನ್ ಸಿಟಿಯಲ್ಲಿ ನವವಿವಾಹಿತೆಯೊಬ್ಬರು ಮನೆಯಲ್ಲಿ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಸಂಭವಿಸಿದೆ. ಆತ್ಮಹತ್ಯೆಗೂ ಮುನ್ನ ಆಕೆ ಬರೆದಿಟ್ಟಿರುವ ಡೆತ್‌ನೋಟ್ ಈಗ ಲಭ್ಯವಾಗಿದ್ದು, ಅದರಲ್ಲಿ ಪತಿ ಹಾಗೂ ಪತಿಯ ಅಕ್ಕನ ಕಿರುಕುಳದ ಬಗ್ಗೆ ಗಂಭೀರ ಆರೋಪ ಮಾಡಿದ್ದಾರೆ.
ಚಿಕ್ಕಮಗಳೂರು ಮೂಲದ ಶ್ವೇತಾ (25) ಮೃತಪಟ್ಟ ದುರ್ದೈವಿ. ಇವರು ಬೆಂಗಳೂರಿನ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಸುಂಕದಕಟ್ಟೆಯಲ್ಲಿ ವಾಸವಾಗಿದ್ದರು ಹಾಗೂ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ನಾಲ್ಕು ತಿಂಗಳ ಹಿಂದಷ್ಟೇ ಇವರು ಪ್ರೇಮ ವಿವಾಹವಾಗಿದ್ದರು.
ಬೆಂಗಳೂರಿನ ಕಮಲನಗರದ ಶಕ್ತಿ ಗಣಪತಿ ದೇವಸ್ಥಾನದಲ್ಲಿ ಇವರ ಮದುವೆ ನಡೆದಿತ್ತು. ಮದುವೆ ಬಳಿಕ ಗಂಡ ಹೆಂಡತಿ ಒಟ್ಟಿಗೆ ನೆಲೆಸಿದ್ದಾರೆ. ಭಾನುವಾರ ರಾತ್ರಿ 11 ಗಂಟೆಗೆ ಶ್ವೇತಾ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಡೆತ್‌ನೋಟ್‌ನಲ್ಲಿ ಏನಿದೆ?:
ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಶ್ವೇತಾ ಅವರು ತಮ್ಮ ತಾಯಿಯನ್ನು ಸಂಬೋಧಿಸಿ ಭಾವನಾತ್ಮಕ ಹಾಗೂ ಆಕ್ರೋಶಭರಿತ ಡೆತ್‌ನೋಟ್ ಬರೆದಿದ್ದಾರೆ.
ನನ್ನ ಸಾವಿಗೆ ನನ್ನ ಗಂಡ ಮತ್ತು ಅವರ ಅಕ್ಕನೇ ಕಾರಣ. ಅವರಿಂದ ನನಗೆ ಹಿಂಸೆ ಆಗುತ್ತಿತ್ತು. ಇನ್ನು ಮುಂದೆ ನನಗೆ ಬದುಕಲು ಆಸೆಯೇ ಇಲ್ಲ ಎನ್ನುವ ರೀತಿ ಮಾಡಿದ್ದಾರೆ. ನನ್ನ ಸಾವಿಗೆ ಅವರನ್ನ ಮಾತ್ರ ಸುಮ್ಮನೆ ಬಿಡಬೇಡ ಅಮ್ಮ. ನನ್ನಿಂದ ತಪ್ಪಾಗಿದೆ ಕ್ಷಮಿಸು ಇಂತಿ ನಿನ್ನ ಪ್ರೀತಿಯ ಮಗಳು ಶ್ವೇತಾ ಎಂದು ಬರೆದಿದ್ದಾರೆ.
ಆರೋಪಿಗಳಿಗೆ ಶಿಕ್ಷೆ ನೀಡಲು ಆಗ್ರಹ:
ಡೆತ್‌ನೋಟ್‌ನಲ್ಲಿ ಶ್ವೇತಾ ಅವರು ತಾಯಿಯ ಬಳಿ ತಮಗಾದ ಹಿಂಸೆಯನ್ನು ತೋಡಿಕೊಂಡಿದ್ದಾರೆ. ನನಗೆ ಬದುಕುವ ಆಸೆಯೇ ಇಲ್ಲದಂತೆ ಅವರು ಮಾಡಿದ್ದಾರೆ. ನಾನು ಸತ್ತ ಮೇಲೆ ಅವರನ್ನು ಮಾತ್ರ ಯಾವುದೇ ಕಾರಣಕ್ಕೂ ಸುಮ್ಮನೆ ಬಿಡಬೇಡಿ ಎಂದು ಪತಿ ಮತ್ತು ಗಂಡನ ಅಕ್ಕನ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ತಾಯಿಯಲ್ಲಿ ಮನವಿ ಮಾಡಿದ್ದಾರೆ. ಜೊತೆಗೆ ತಾಯಿಯ ಬಳಿ ಕ್ಷಮೆಯನ್ನೂ ಯಾಚಿಸಿದ್ದಾರೆ.
ಘಟನಾ ಸ್ಥಳಕ್ಕೆ ಕಾಮಾಕ್ಷಿಪಾಳ್ಯ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಡೆತ್‌ನೋಟ್ ಅನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಮೃತರ ಕುಟುಂಬಸ್ಥರ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Laxmi News 24×7