ಬೆಳಗಾವಿ : ನರಗುಂದ ಹಾಗೂ ನವಲಗುಂದದಲ್ಲಿ ರೈತರ ನ್ಯಾಯಯುತ ಬೇಡಿಕೆಗಳಿಗಾಗಿ ನಡೆದಿದ್ದ ಹೋರಾಟದ ವೇಳೆ ಅಂದಿನ ಸರ್ಕಾರ ಪೊಲೀಸರ ಮೂಲಕ ಗುಂಡಿನ ದಾಳಿ ನಡೆಸಿ ಇಬ್ಬರನ್ನು ಬಲಿ ಪಡೆದ ಘಟನೆಯನ್ನು ರಾಜ್ಯದ ರೈತ ಸಮುದಾಯ ಎಂದಿಗೂ ಮರೆಯಲು ಸಾಧ್ಯವಿಲ್ಲ. ಆ ಘಟನೆ ರೈತ ಹೋರಾಟದ ಇತಿಹಾಸದಲ್ಲಿ ಕರಾಳ ಅಧ್ಯಾಯವಾಗಿ ಉಳಿದಿದೆ ಎಂದು ರೈತ ಮುಖಂಡ ಅಪ್ಪಾಸಾಹೇಬ ದೇಸಾಯಿ ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮಂಗಳವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಜರುಗಿದ ರೈತ ಹುತಾತ್ಮ ದಿನದಲ್ಲಿ ಕಬ್ಬಿನ ಗಣಿಗೆ ಪೂಜೆ ಸಲ್ಲಿಸಿ, ರೈತ ಹೋರಾಟಗಳಲ್ಲಿ ಹುತಾತ್ಮರಾದ ರೈತರಿಗೆ ಗೌರವ ನಮನ ಸಲ್ಲಿಸಿದ ಬಳಿಕ ಅವರು ಮಾತನಾಡಿದರು.
ರೈತ ಹೋರಾಟಗಾರ ಪ್ರಕಾಶ ನಾಯಕ ಮಾತನಾಡಿ, ಪೊಲೀಸ್ ಗುಂಡಿನ ದಾಳಿಗೆ ಬಲಿಯಾದ ರೈತ ಹೋರಾಟಗಾರರ ತ್ಯಾಗವನ್ನು ಸ್ಮರಿಸುವ ಉದ್ದೇಶದಿಂದ ಪ್ರತಿವರ್ಷ ರೈತ ಹುತಾತ್ಮ ದಿನ ಆಚರಿಸಲಾಗುತ್ತಿದೆ. ರೈತರ ಬಲಿದಾನ ಎಂದಿಗೂ ವ್ಯರ್ಥವಾಗಬಾರದು. ರೈತ ಸಮುದಾಯ ಸಂಘಟಿತವಾಗಿ ಹೋರಾಟ ನಡೆಸಿದಾಗ ಮಾತ್ರ ರೈತರ ನ್ಯಾಯಯುತ ಬೇಡಿಕೆಗಳು ಈಡೇರಲಿವೆ. ಹಿರಿಯ ರೈತ ನಾಯಕರು ಆರಂಭಿಸಿದ ಹೋರಾಟವನ್ನು ಮುಂದುವರಿಸಿ, ರೈತರ ಹಕ್ಕುಗಳ ರಕ್ಷಣೆಗಾಗಿ ಎಲ್ಲರೂ ಒಗ್ಗಟ್ಟಿನಿಂದ ಹೋರಾಡಬೇಕು ಎಂದು ಕರೆ ನೀಡಿದರು.
ಮಂಜು ಗಡಾದಿ, ಪ್ರೇಮ ಚೌಗಲಾ,ಪಾರ್ವತಿ ಕಳಸಣ್ಣವರ, ಶಿವಾನಂದ ಮುಗಳಿಹಾಳ ಇತರರಿದ್ದರು.
Laxmi News 24×7