Breaking News
Home / ಜಿಲ್ಲೆ / ಬೆಂಗಳೂರು: ಜನತಾ ಕರ್ಫ್ಯೂ ಪಾಲಿಸಿ ಡಾ. ಅಶ್ವತ್ಥನಾರಾಯಣ ನಿರ್ದೇಶಿಸಿದ್ದಾರೆ.

ಬೆಂಗಳೂರು: ಜನತಾ ಕರ್ಫ್ಯೂ ಪಾಲಿಸಿ ಡಾ. ಅಶ್ವತ್ಥನಾರಾಯಣ ನಿರ್ದೇಶಿಸಿದ್ದಾರೆ.

Spread the love

ಬೆಂಗಳೂರು: ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದಂತೆ ಐಟಿ-ಬಿಟಿ ಕಂಪನಿಗಳ ಎಲ್ಲ ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡಬೇಕು ಎಂದು ನೀಡಿದ್ದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಲು ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ನಿರ್ದೇಶಿಸಿದ್ದಾರೆ. ಐಟಿ- ಬಿಟಿ, ಸ್ಟಾರ್ಟ್‌ ಅಪ್‌ ಕಂಪನಿಗಳ ಮುಖ್ಯಸ್ಥರ ಜತೆ ಶುಕ್ರವಾರ ವೀಡಿಯೋ ಕಾನ್ಫರೆನ್ಸ್‌ ನಡೆಸಿದ ಡಾ. ಅಶ್ವತ್ಥನಾರಾಯಣ, ಕೊರೊನಾ ನಿಯಂತ್ರಣ ಸಂಬಂಧ ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ವಿವರಿಸಿದರು. ಜತೆಗೆ ಅವರಿಂದ ಸಲಹೆ- ಸೂಚನೆಗಳನ್ನು ಪಡೆದು ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ರಾಜ್ಯದ ಐಟಿ ವಿಷನ್‌ ಗ್ರೂಪ್‌ ಅಧ್ಯಕ್ಷ ಕ್ರಿಸ್‌ ಗೋಪಾಲಕೃಷ್ಣ, ಬಿಟಿ ವಿಷನ್‌ ಗ್ರೂಪ್‌ನ ಸದಸ್ತೆ ಡಾ. ಕಿರಣ್‌ ಮಜುಂದಾರ್‌ ಷಾ, ನಾಸ್ಕಾಂ ಅಧ್ಯಕ್ಷೆ ದೇಬಜಾನಿ ಘೋಷ್‌ ಹಾಗೂ ಇನ್ನಿತರ ಪ್ರಮುಖ ಐಟಿ ಸಂಸ್ಥೆಗಳ ಮುಖ್ಯಸ್ಥರು ವೀಡಿಯೋ ಕಾನ್ಫರೆನ್ಸ್‌ನಲ್ಲಿ ಪಾಲ್ಗೊಂಡರು. ಇದೇ ಸಂದರ್ಭದಲ್ಲಿ, ಕೊರೊನಾ ಸೋಂಕಿತರು ಅಥವಾ ಕ್ವಾರಂಟೈನ್‌ನಲ್ಲಿರುವವರ ಮೇಲೆ ನಿಗಾ ವಹಿಸುವ ಜತೆಗೆ ಅಗತ್ಯ ಸೌಲಭ್ಯ ಒದಗಿಸಲು ಅಭಿವೃದ್ಧಿ ಪಡಿಸುವ ಆ್ಯಪ್‌ ಹಾಗೂ ದೇಶಿಯವಾಗಿ ಅಭಿವೃದ್ಧಿ ಪಡಿಸುತ್ತಿರುವ ಟೆಸ್ಟ್‌ ಕಿಟ್ ಬಗ್ಗೆ ಡಾ. ಅಶ್ವತ್ಥನಾರಾಯಣ ಮಾಹಿತಿ ಪಡೆದರು.

ಕೊರೊನಾ ನಿಯಂತ್ರಣಕ್ಕಾಗಿ ಐಟಿ ಬಿಟಿ, ಸ್ಟಾರ್ಟ್‌ ಅಪ್‌ ಕಂಪನಿ ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡಲು ಅನುವು ಮಾಡಿಕೊಡಬೇಕು ಎಂದು ಈ ಮೊದಲೇ ಸಲಹೆ‌ ನೀಡಲಾಗಿತ್ತು. ಆದರೆ, ಕೆಲವಡೆ ಇದು ಜಾರಿ ಆಗಿಲ್ಲ ಎಂಬ ದೂರು ಕೇಳಿಬಂದಿತ್ತು. ಮುಂದಿನ ದಿನಗಳಲ್ಲಿ ವರ್ಕ್‌ ಫ್ರಮ್‌ ಹೋಂ ನೀತಿಯ ಕಟ್ಟುನಿಟ್ಟು ಜಾರಿಗೆ ಆದೇಶಿಸಲಾಗಿದೆ. ಶೀಘ್ರದಲ್ಲೇ ಈ ಸಂಬಂಧ ನಿರ್ದೇಶನ ಹೊರಡಿಸಲಾಗುವುದು. ಸರ್ಕಾರ ಇದನ್ನು ಕಡ್ಡಾಯಗೊಳಿಸುವ ಬದಲು ರಾಷ್ಟ್ರೀಯ ಹಿತಾಸಕ್ತಿಯ ದೃಷ್ಟಿಯಿಂದ ಕಂಪನಿಗಳೇ ಅಗತ್ಯ ನಿರ್ಣಯಕೈಗೊಳ್ಳಬೇಕು,” ಎಂದು ಸಚಿವರು ತಿಳಿಸಿದರು.

“ಸರ್ಕಾರಿ ಕೆಲಸ, ಆರೋಗ್ಯ ಹಾಗೂ ಬ್ಯಾಂಕಿಂಗ್‌ ಮುಂತಾದ ಅಗತ್ಯ ಸೇವೆ ಒದಗಿಸುವಂಥ ಐಟಿ ಉದ್ಯೋಗಿಗಳನ್ನು ಮಾತ್ರ ಕಚೇರಿಗೆ ಕರೆಸಲಾಗುತ್ತಿದೆ. ಕೆಲ ಸೇವೆಗಳಲ್ಲಿ ಗೌಪ್ಯತೆ ಕಾಯ್ದುಕೊಳ್ಳುವ ಅನಿವಾರ್ಯತೆಯೂ ಇರುತ್ತದೆ. ಉಳಿದಂತೆ ಹೆಚ್ಚಿನವರು ಮನೆಯಿಂದಲೇ ಕೆಲಸ ಮಾಡಲು ಅವಕಾಶ ಕಲ್ಪಿಸಲಾಗಿದೆ. ಇನ್ನೂ ಹೆಚ್ಚಿನ ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡಲು ಸೂಚಿಸಲಾಗುವುದು ಎಂದು ಐಟಿ ಬಿಟಿ ಕಂಪನಿ ಮುಖ್ಯಸ್ಥರು ಆಶ್ವಾಸನೆ ನೀಡಿದರು,”ಎಂದು ಡಾ. ಅಶ್ವತ್ಥನಾರಾಯಣ ತಿಳಿಸಿದರು.

“ಮನೆಯಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಬ್ರಾಡ್‌ ಬ್ಯಾಂಡ್‌, ಇಂರ್ಟನೆಟ್‌, ವಿದ್ಯುತ್ ಸಮಸ್ಯೆ ಎದುರಾಗುತ್ತದೆ. ಜತೆಗೆ, ಬಹಳಷ್ಟು ಮಂದಿ ಯುವ ಉದ್ಯೋಗಿಗಳು ಊಟದ ವ್ಯವಸ್ಥೆ ಇಲ್ಲದೆ ಪರದಾಡುತ್ತಿದ್ದಾರೆ. ಪಿಜಿಗಳಲ್ಲಿ ಸಮಸ್ಯೆ ಆಗುತ್ತಿವೆ ಎಂಬ ವಿಷಯಗಳನ್ನು ನನ್ನ ಗಮನಕ್ಕೆ ತಂದಿದ್ದಾರೆ. ಈ ಸಂಬಂಧ ಬೆಸ್ಕಾಂ ಹಾಗೂ ಟೆಲಿಕಾಂ ಸಂಸ್ಥೆಗಳ ಜತೆ ಮಾತುಕತೆ ನಡೆಸಲಾಗುವುದು. ಈ ಎಲ್ಲ ಸಮಸ್ಯೆಗಳ ಬಗ್ಗೆ ಗಮನ ಹರಿಸಿ, ಸರ್ಕಾರ ಅಗತ್ಯ ಕ್ರಮ ಕೈಗೊಳ್ಳುವುದು. ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಅವರು ಈಗಾಗಲೇ 200 ಕೋಟಿ ರೂ. ಬಿಡುಗಡೆ ಮಾಡಿದ್ದಾರೆ,” ಎಂದರು.

# ಜನತಾ ಕರ್ಫ್ಯೂ ಪಾಲಿಸಿ
“ತಂತ್ರಜ್ಞಾನದ ಬಳಕೆ ಮೂಲಕ ಕೊರೊನಾ ತಡೆ ನಿಟ್ಟಿನಲ್ಲಿ ವ್ಯವಸ್ಥೆ ಮೇಲಿನ ಹೊರೆ ಕಡಿಮೆ ಮಾಡಲಾಗುವುದು. ಇದಕ್ಕಾಗಿ ಅಭಿವೃದ್ಧಿ ಪಡಿಸುತ್ತಿರುವ ಆಪ್‌ ಜನರಿಗೆ ನೆರವಾಗಲಿದೆ. ಎಲ್ಲಕ್ಕಿಂತ ಮುಖ್ಯವಾಗಿ ರೋಗ ನಿಯಂತ್ರಣಕ್ಕೆ ಜನರ ಸಹಕಾರ ಮುಖ್ಯ. ಪ್ರಧಾನಿ ನರೇಂದ್ರ ಮೋದಿ ನೀಡಿರುವ ಕರೆಗೆ ಜನ ಸ್ಪಂದಿಸಿ, ಭಾನುವಾರ ಜನತಾ ಕರ್ಫ್ಯೂ ಪಾಲಿಸಿ, ಸಮುದಾಯದ ಆರೋಗ್ಯ ಕಾಯ್ದುಕೊಳ್ಳಲು ಸಹಕರಿಸಿ,” ಎಂದು ಅವರು ಮನವಿ ಮಾಡಿದರು.
ಡಾ. ಕಿರಣ್‌ ಮಜುಂದಾರ್‌ ಮಾತನಾಡಿ, “ಇಂಥ ಸಾಂಕ್ರಾಮಿಕ ರೋಗಗಳ ತಡೆಗೆ ಪ್ರತ್ಯೇಕ ಆಸ್ಪತ್ರೆ ನಿಗದಿಪಡಿಸಿದರೆ, ಅದಕ್ಕೆ ಸಿಎಸ್‌ಆರ್‌ ನಿಧಿಯಿಂದ ಅಗತ್ಯ ನೆರವು ಒದಗಿಸಲಾಗುವುದು”ಎಂದರು.

ಕ್ರಿಸ್‌ ಗೋಪಾಲಕೃಷ್ಣ ಮಾತನಾಡಿ,”ಕೊರೊನಾದಿಂದ ಆರ್ಥಿಕತೆ ಸಂಕಷ್ಟ ಎದುರಾಗಿದೆ. ಹಲವರು ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ. ಸಣ್ಣ ಉದ್ದಿಮೆದಾರರು ಸಾಲದ ಕಂತು ಕಟ್ಟಲಾಗದೇ ಪರದಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು,”ಎಂದು ಮನವಿ ಮಾಡಿದರು.

ಐಟಿ ಬಿಟಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ. ಇ.ವಿ ರಮಣರೆಡ್ಡಿ, ವೈದ್ಯ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಜಾವೇದ್‌ ಅಖ್ತರ್‌, ಐಟಿಬಿಟಿ ನಿರ್ದೇಶಕ ಪ್ರಶಾಂತ್ ಕುಮಾರ್ ಮಿಶ್ರಾ, ಎಂ ಎಂ ಆಕ್ಟೀವ್‌ ವಿಜ್ಞಾನ-ತಂತ್ರಜ್ಞಾನ ಸಂವಹನದ ಅಧ್ಯಕ್ಷ ಜಗದೀಶ್‌ ಪಟಾಂಕರ್‌ ಹಾಗೂ ಸ್ಟಾರ್ಟ್‌ಅಪ್‌ ವಿಷನ್‌ ಗ್ರೂಪ್‌ ಅಧ್ಯಕ್ಷ ಪ್ರಶಾಂತ್‌ ಪ್ರಕಾಶ್‌ ಉಪಸ್ಥಿತರಿದ್ದರು.

# ಆ್ಯಪ್‌ ಮತ್ತು ಕಿಟ್‌ ಅಭಿವೃದ್ಧಿ
“ಉದ್ಯಮ್‌ ಲರ್ನಿಂಗ್‌ ಫೌಂಡೇಷನ್‌ನ ಮೆಕಿನ್‌ ಮಹೇಶ್ವರಿ ನೇತೃತ್ವದಲ್ಲಿ ಕೊರೊನಾ ಕುರಿತು ಜಾಗೃತಿ ಮತ್ತು ಮಾಹಿತಿಗಾಗಿ ಆ್ಯಪ್‌ ಅಭಿವೃದ್ಧಿಪಡಿಸಲಾಗುತ್ತಿದೆ. ಒಂದೆರೆಡು ದಿನಗಳಲ್ಲಿ ಇದು ಬಳಕೆಗೆ ಲಭ್ಯವಾಗುವ ನಿರೀಕ್ಷೆ ಇದೆ. ಸೋಂಕಿತರು ಹಾಗೂ ಸ್ವಯಂ ಪ್ರೇರಣೆಯಿಂದ ಕ್ವಾರಂಟೈನ್‌ಗೆ ಹೋಗುವವರಿಗೆ ಆ್ಯಪ್‌ ನೆರವಾಗಲಿದೆ. ಆ್ಯಪ್‌ ಬಳಸುವವರ ಆರೋಗ್ಯದ ಮೇಲೆ ನಿಗಾ ವಹಿಸಲಾಗುತ್ತದೆ. ಡೇಟಾ ಇನ್‌ಸೈಟ್ ಪಡೆದು ಅಗತ್ಯ ನೆರವು ಒದಗಿಸಲಾಗುತ್ತದೆ. ಇ-ಕಾಮರ್ಸ್‌ ಸಂಸ್ಥೆಗಳ ಸಹಕಾರದೊಂದಿಗೆ ಅತ್ಯಗತ್ಯ ವಸ್ತುಗಳು, ಔಷಧ ಹಾಗೂ ಆಹಾರ ಪದಾರ್ಥಗಳನ್ನು ಪೂರೈಸುವ ವ್ಯವಸ್ಥೆ ಮಾಡಲಾಗುವುದು,”ಎಂದು ಪ್ರಶಾಂತ್‌ ಪ್ರಕಾಶ್‌ ವಿವರಿಸಿದರು.

# ಇತರ ವ್ಯವಸ್ಥೆ
*ಕೊರೊನಾ ತಡೆಗೆ ಕೈಗೊಳ್ಳಬಹುದಾದದ ಕ್ರಮಗಳ ಬಗ್ಗೆ ಜನಕ್ಕೆ ಮಾಹಿತಿ ನೀಡಲು ಸಾಮಾಜಿಕ ಜಾಲತಾಣ ಹಾಗೂ ಆ್ಯಪ್‌ಗಳ ಮೂಲಕ ಎಲ್ಲ ಭಾಷೆಗಳಲ್ಲಿ ಮಾಹಿತಿ ನೀಡಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. 104 ಸಹಾಯವಾಣಿ ಸಂಪರ್ಕ ಸುಗಮಗೊಳಿಸಲು ಐವಿಆರ್‌ಎಸ್‌ ನೆರವು ಪಡೆಯಲಾಗುವುದು. ಜತೆಗೆ ಚಾಟ್‌ ಮೂಲಕವೂ ಮಾಹಿತಿ ಪಡೆಯಲು ಕ್ರಮ ಕೈಗೊಳ್ಳಲಾಗುವುದು. ಟೆಲಿಮೆಡಿಸನ್‌ ತಂತ್ರಜ್ಞಾನದ ಮೂಲಕ ರಿಮೋಟ್‌ ಮೆಡಿಸನ್‌ ಸೇವೆ ಆರಂಭ.

# ಟೆಸ್ಟ್‌ ಕಿಟ್‌
“ರೋಗ ಪತ್ತೆಗೆ ಟೆಸ್ಟ್‌ ಕಿಟ್‌ಗಳನ್ನು ಸದ್ಯ ಆಮದು ಮಾಡಿಕೊಳ್ಳಲಾಗುತ್ತಿದೆ. ಈ ಅವಲಂಬನೆಯನ್ನು ಕಡಿಮೆ ಮಾಡಲು ದೇಶೀಯವಾಗಿ ಕಿಟ್‌ ಅಭಿವೃದ್ಧಿ ಪಡಿಸಲಾಗುತ್ತಿದೆ. ಐಐಎಸ್‌ಸಿ ನೆರವಿನೊಂದಿಗೆ ಟೆಸ್ಟ್‌ ಕಿಟ್‌ ಅಭಿವೃದ್ಧಿ ಪಡಿಸಲಾಗುತ್ತಿದ್ದು, 10 ದಿನಗಳಲ್ಲಿ ಬಳಕೆಗೆ ಲಭ್ಯವಾಗಲಿದೆ. ಸದ್ಯ ಅದರ ಬೆಲೆ ದುಬಾರಿಯಾಗಿದ್ದು, ನಾವು ಅಭಿವೃದ್ಧಿಪಡಿಸಲಿರುವ ಕಿಟ್‌ನಲ್ಲಿ ಪರೀಕ್ಷಾ ವೆಚ್ಚ 800 ರೂ. ಆಗಬಹುದು ಎಂದು ಶಂಕರ್ ಆಸ್ಪತ್ರೆಯ ಮುಖ್ಯಸ್ಥರಾದ ಡಾ.ಕೆ.ಎನ್‌. ಶ್ರೀಧರ್ ವಿವರಿಸಿದರು.


Spread the love

About Laxminews 24x7

Check Also

ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ವೀರಮರಣ ಹೊಂದಿದ ಕ್ಯಾ. ಪ್ರಾಂಜಲ್​ ಅವರ ಕುಟುಂಬಕ್ಕೆ ರಾಜ್ಯ ಸರ್ಕಾರ ಸಹಾಯಾರ್ಥವಾಗಿ ಚೆಕ್​ ವಿತರಣೆ

Spread the love ಆನೇಕಲ್: ದೇಶಕ್ಕಾಗಿ ಉಗ್ರರ ವಿರುದ್ಧದ ಹೋರಾಟದಲ್ಲಿ ವೀರಮರಣ ಹೊಂದಿದ ಕ್ಯಾಪ್ಟನ್ ಪ್ರಾಂಜಲ್ ಕುಟುಂಬಕ್ಕೆ ರಾಜ್ಯ ಸರ್ಕಾರ ಕೊಟ್ಟ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ