Breaking News
Home / new delhi / ಲಾಕ್‌ಡೌನ್: ವಲಸೆ ಕಾರ್ಮಿಕರ ಸಾವು, ನೌಕರಿ ನಷ್ಟದ ಬಗ್ಗೆ ಸರ್ಕಾರ ಲೆಕ್ಕ ಇಟ್ಟಿಲ್ಲ

ಲಾಕ್‌ಡೌನ್: ವಲಸೆ ಕಾರ್ಮಿಕರ ಸಾವು, ನೌಕರಿ ನಷ್ಟದ ಬಗ್ಗೆ ಸರ್ಕಾರ ಲೆಕ್ಕ ಇಟ್ಟಿಲ್ಲ

Spread the love

ನವದೆಹಲಿ: ಕೊರೊನಾವೈರಸ್ ವ್ಯಾಪಿಸುವುದನ್ನು ತಡೆಯಲು ಕೇಂದ್ರ ಸರ್ಕಾರ ಲಾಕ್‍‌ಡೌನ್ ಘೋಷಿಸಿದಾಗ ದೇಶದಲ್ಲಿ ಸಂಭವಿಸಿದ ವಲಸೆ ಕಾರ್ಮಿಕರ ಸಾವು ಮತ್ತು ಉದ್ಯೋಗ ನಷ್ಟದ ಬಗ್ಗೆ ಸರ್ಕಾರದ ಬಳಿ ಅಂಕಿ ಅಂಶ ಇಲ್ಲ ಎಂದು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಲೋಕಸಭೆಯಲ್ಲಿ ಹೇಳಿದೆ.

 

ತಮ್ಮ ಊರಿಗೆ ಮರಳಲು ಬಯಸುವ ವಲಸೆ ಕಾರ್ಮಿಕರನ್ನು ಬಲವಂತವಾಗಿ ಉಳಿಸಿಕೊಳ್ಳುವ ಯಾವುದೇ ವರದಿಯೂ ಅದರಲ್ಲಿ ಇರಲಿಲ್ಲ ಎಂದು ಲೋಕಸಭೆಯಲ್ಲಿ ಲಿಖಿತ ಉತ್ತರ ನೀಡಿದ ಕಾರ್ಮಿಕ ಸಚಿವ ಸಂತೋಷ್ ಗಂಗ್ವಾರ್ ಹೇಳಿದ್ದಾರೆ.

ಲಭ್ಯವಿರುವ ಮಾಹಿತಿಯ ಪ್ರಕಾರ ತಮ್ಮ ತವರು ರಾಜ್ಯಗಳಿಗೆ ಮರಳಿದ ವಲಸೆ ಕಾರ್ಮಿಕರ ಸಂಖ್ಯೆಯನ್ನು ಸರ್ಕಾರವು 1.04 ಕೋಟಿಗೆ ನಿಗದಿಪಡಿಸಿದ್ದರೂ, ವಲಸೆ ಕಾರ್ಮಿಕರಿಗೆ ಉಚಿತ ಪಡಿತರ ವಿತರಣೆಯನ್ನು ಕೇಂದ್ರವು ರಾಜ್ಯವಾರು ವಿಂಗಡಿಸಿಲ್ಲ.

ರಾಜ್ಯಗಳ ಪೈಕಿ, ಉತ್ತರಪ್ರದೇಶದಲ್ಲಿ ಅತಿ ಹೆಚ್ಚು ವಲಸೆ ಕಾರ್ಮಿಕರು ಅಂದರೆ 32.49 ಲಕ್ಷ ಊರಿಗೆ ಮರಳಿದ್ದಾರೆ. ಬಿಹಾರದಲ್ಲಿ 15 ಲಕ್ಷಕ್ಕೂ ಹೆಚ್ಚು ಮಂದಿ ಊರಿಗೆ ವಾಪಸ್ ಹೋಗಿದ್ದಾರೆ.

ರೈಲ್ವೆ ಇಲಾಖೆಯು ಕನಿಷ್ಠ 4,611 ಶ್ರಮಿಕ್ ವಿಶೇಷ (ಕಾರ್ಮಿಕರ ವಿಶೇಷ) ರೈಲುಗಳ ಸಂಚಾರ ನಡೆಸಿದ್ದು ಸುಮಾರು ಸುಮಾರು 63.07 ಲಕ್ಷ ವಲಸೆ ಕಾರ್ಮಿಕರನ್ನು ವಿವಿಧ ಸ್ಥಳಗಳಿಗೆ ಕರೆದೊಯ್ದಿದೆ. ಪ್ರಯಾಣದ ವೇಳೆ ಅವರಿಗೆ ಉಚಿತ ನೀರು ಮತ್ತು ಆಹಾರ ನೀಡಲಾಗಿದೆ.

ಉದ್ಯೋಗ ಕಳೆದುಕೊಂಡ ವಲಸೆ ಕಾರ್ಮಿಕರ ಸಂಖ್ಯೆ ಎಷ್ಟು? ಲಾಕ್‌ಡೌನ್ ವೇಳೆ ಊರಿಗೆ ಮರಳುವಾಗ ಸಾವಿಗೀಡಾದವರು ಎಷ್ಟು? ಅವರಿಗೆ ಪಡಿತರ ನೀಡಲಾಗಿದೆಯೇ ಎಂದು ಕೇಳಿರುವ ಪ್ರಶ್ನೆಗೆ ಪ್ರತ್ಯೇಕ ಉತ್ತರ ನೀಡಿದ ಸಚಿವರು ಆ ರೀತಿಯ ಯಾವುದೇ ಲೆಕ್ಕ ಇಟ್ಟುಕೊಂಡಿಲ್ಲ ಎಂದಿದ್ದಾರೆ.

ಉಚಿತ ಪಡಿತರ ಬಗ್ಗೆ ರಾಜ್ಯವಾರು ವಿವರಗಳು ಲಭ್ಯವಿಲ್ಲದೇ ಇದ್ದರೂ, 80 ಕೋಟಿ ಜನರಿಗೆ ಹೆಚ್ಚುವರಿ ಐದು ಕೆಜಿ ಗೋಧಿ ಅಥವಾ ಅಕ್ಕಿ ಮತ್ತು ಒಂದು ಕೆಜಿ ಧಾನ್ಯಗಳನ್ನು ನೀಡಲಾಗಿದೆ. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿಯಲ್ಲಿ ಎಲ್ಲಾ ಫಲಾನುಭವಿಗಳಿಗೆ ನವೆಂಬರ್‌ವರೆಗೆ ಪ್ರತಿ ತಿಂಗಳು ಉಚಿತ ಪಡಿತರ ನೀಡಲಾಗುತ್ತದೆ ಎಂದು ಸಚಿವರು ಹೇಳಿದ್ದಾರೆ.

ಮಾರ್ಚ್ 25 ರಿಂದ ಆಗಸ್ಟ್ 31 ರವರೆಗೆ ಕೋವಿಡ್ ಸಾಂಕ್ರಾಮಿಕ ರೋಗದ ಹೊತ್ತಲ್ಲಿ ನೌಕರರ ಭವಿಷ್ಯ ನಿಧಿ ಖಾತೆಯಿಂದ ಹಿಂಪಡೆಯಲಾದ ಒಟ್ಟು ಮೊತ್ತ ಎಷ್ಟು ಎಂಬ ಪ್ರಶ್ನೆಗೆ ₹39,402.94 ಕೋಟಿ ಎಂದು ಸಚಿವರು ಉತ್ತರಿಸಿದ್ದಾರೆ. ಈ ಪೈಕಿ ಮಹಾರಾಷ್ಟ್ರದಲ್ಲಿ ಅತೀ ಹೆಚ್ಚು ಅಂದರೆ ₹7,837.85 ಕೋಟಿ ಮತ್ತು ಕರ್ನಾಟಕದಲ್ಲಿ ₹5,743.96 ಕೋಟಿ ಹಣ ನೌಕರರ ಭವಿಷ್ಯ ನಿಧಿ ಖಾತೆಯಿಂದ ಹಿಂಪಡೆಯಲಾಗಿದೆ.

ಕೋವಿಡ್ ವ್ಯಾಪಕ ಹರಡುವಿಕೆ ಮತ್ತು ಲಾಕ್‌ಡೌನ್‌ಗಳು ಭಾರತ ಸೇರಿದಂತೆ ಜಾಗತಿಕ ಆರ್ಥಿಕತೆಗಳ ಮೇಲೆ ಪರಿಣಾಮ ಬೀರಿದೆ. ಕೋವಿಡ್ -19ನಿಂದಾಗಿ ಹೆಚ್ಚಿನ ಸಂಖ್ಯೆಯ ವಲಸೆ ಕಾರ್ಮಿಕರು ತಮ್ಮ ಊರಿಗೆ ಹಿಂತಿರುಗಲು ಕಾರಣವಾಗಿದೆ ಮತ್ತು ಈ ಅವಧಿಯಲ್ಲಿ ಭಾರತದಲ್ಲಿ ಉದ್ಯೋಗ ನಷ್ಟವೂ ಕಂಡುಬಂದಿದೆ.

ಸ್ಥಳೀಯ ಮಟ್ಟದಲ್ಲಿ ಉದ್ಯೋಗ ಸೃಷ್ಟಿಸಲು ಮತ್ತು ವಲಸೆ ಕಾರ್ಮಿಕರಿಗೆ ಸಹಾಯ ಮಾಡುವುದಕ್ಕಾಗಿ ಪ್ರಧಾನ್ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆ, ಆತ್ಮನಿರ್ಭರ್ ಭಾರತ್ ಮತ್ತು ಪ್ರಧಾನ್ ಮಂತ್ರಿ ಗರೀಬ್ ಕಲ್ಯಾಣ್ ರೋಜ್‌ಗಾರ್ ಅಭಿಯಾನ್ ಮೊದಲಾದ ಯೋಜನೆಗಳನ್ನು ಸರ್ಕಾರ ಕೈಗೊಂಡಿದೆ. ಅದೇ ವೇಳೆ ಕೋವಿಡ್ -19ನಿಂದಾಗುವ ಅಪಾಯ ಮತ್ತು ಎದುರಿಸಬೇಕಾಗಿರುವ ಸವಾಲುಗಳಿಗೆ ದೇಶವನ್ನು ಸಿದ್ಧಪಡಿಸಲು ಸರ್ಕಾರ ಅನೇಕ ಕ್ರಮಗಳನ್ನು ಕೈಗೊಂಡಿದೆ ಎಂದು ಎಂದು ಗಂಗ್ವಾರ್ ಹೇಳಿದ್ದಾರೆ.


Spread the love

About Laxminews 24x7

Check Also

ನೇಹಾ ಕೊಲೆ ಪ್ರಕರಣದ ಆರೋಪಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಮುಸ್ಲಿಂ ಸಮುದಾಯದಿಂದ ಪ್ರತಿಭಟನೆ

Spread the loveಹುಬ್ಬಳ್ಳಿ : ಕಾಂಗ್ರೆಸ್ ಕಾರ್ಪೊರೇಟರ್ ಪುತ್ರಿ ನೇಹಾ ಹಿರೇಮಠ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾಗಿರುವ ಆರೋಪಿ ಫಯಾಝ್‌ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ