ಅಥಣಿ ಗ್ರಾಮೀಣ: ಯಲ್ಲಮ್ಮವಾಡಿ ಕೆರೆಯಲ್ಲಿ ಅಕ್ರಮವಾಗಿ ಅಳವಡಿಸಲಾಗಿರುವ ಪಂಪಸೆಟ್ ತಕ್ಷಣ ತೆರವುಗೊಳಿಸಿ, ಸಮರ್ಪಕವಾಗಿ ಕೆರೆಗಳಿಗೆ ನೀರು ಹರಿಸುವಂತೆ ಆಗ್ರಹಿಸಿ ರೈತ ಸಂಘ ಹಾಗೂ ಹಸಿರುಸೇನೆ ಕಾರ್ಯಕರ್ತರು ಅಥಣಿ ತಾಲೂಕಿನ ಯಲ್ಲಮ್ಮವಾಡಿ ಕೆರೆಯಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.
ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಗೌರವಾಧ್ಯಕ್ಷ ಪ್ರಕಾಶ ಪೂಜಾರಿ ಮಾತನಾಡಿ, ಐಗಳಿ, ಅರಟಾಳ, ಕೋಹಳ್ಳಿ, ಅಡಹಳ್ಳಿ, ಅಡಹಳ್ಳಟ್ಟಿ ಹಾಗೂ ರಾಮತೀರ್ಥ ಗ್ರಾಮಗಳಲ್ಲಿ ಕುಡಿಯುವ ನೀರಿಗಾಗಿ ಜನರು ಟ್ಯಾಂಕರ್ ಅವಲಂಬಿಸಿದ್ದಾರೆ. ರೈತರು ಅಕ್ರಮ ಪಂಪಸೆಟ್ ಅಳವಡಿಸಿ ಬೆಳೆಗಳಿಗೆ ನೀರುಣಿಸುತ್ತಿದ್ದಾರೆ. ಸರ್ಕಾರ ಆದೇಶ ಮಾಡಿದ್ದರೂ, ಸಂಬಂಧಪಟ್ಟ ನೀರಾವರಿ ಅಧಿಕಾರಿಗಳ ಬೇಜವಾಬ್ದಾರಿಯಿಂದ ಕೆರೆಯಲ್ಲಿ ನೀರು ಸಂಗ್ರಹವಾಗುತ್ತಿಲ್ಲ. ಕೆರೆಗಳಿಗೆ ಸಮರ್ಪಕವಾಗಿ ನೀರು ಹರಿಸದಿದ್ದರೆ ಸೋಮವಾರ ನೀರಾವರಿ ಇಲಾಖೆ ಕಚೇರಿ ಎದುರು ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಮಾಹಿತಿ ತಿಳಿದು ತಕ್ಷಣ ಸ್ಥಳಕ್ಕೆ ದೌಡಾಯಿಸಿದ ನೀರಾವರಿ ಇಲಾಖೆ ಸಹಾಯಕ ಅಭಿಯಂತ ಡಿ.ಎಂ.ಚನ್ನನಗೌಡ, ಪಿಎಸ್‌ಐ ಚಂದ್ರಶೇಖರ ಸಾಗನೂರ, ಹೆಸ್ಕಾಂ ಶಾಖಾಧಿಕಾರಿ ಮಹಾಂತೇಶ ನವಣಿ ಹಾಗೂ ಸಿಬ್ಬಂದಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು.
ರೈತ ಸಂಘದ ಪದಾಧಿಕಾರಿಗಳಾದ ವಿಠ್ಠಲ ಶಿರಗಿರಿ, ಶಿವಾನಂದ ಅಜೆಟರಾವ್, ವಿಠ್ಠಲ ಬಾಡಗಿ, ದೋಂಡಿಬಾ ಹಕ್ಕಿ, ಶಿವಾನಂದ ಶಿಂಧೆ, ಅಪ್ಪಾಸಾಬ ಬಡಚಿ, ಮಹಾದೇವ ಕುಂಬಾರ, ಸುನೀಲ ಹಿರೇಕುರಬರ, ಸದಾಶಿವ ಬಾಡಗಿ, ಪರಶುರಾಮ ಯಳಮಲಿ, ಕಾಶಿಲಿಂಗ ಬಾಡಗಿ, ವಿಠ್ಠಲ ಯಳಮಲಿ ಸೇರಿದಂತೆ ಇತರರು ಇದ್ದರು.
Laxmi News 24×7