ಬೆಳಗಾವಿ ಮಹಾನಗರಕ್ಕೆ ನಿರಂತರ ಕುಡಿಯುವ ನೀರು ಸರಬರಾಜು ಮಾಡಲು ಗುತ್ತಿಗೆ ಪಡೆದಿರುವ ಎಲ್ ಆ್ಯಂಡ್ ಟಿ ( ಲಾರ್ಸೆನ್ ಅಂಡ್ ಸೂರ್ಬೋ) ಯಾವುದೇ ನಿಯಮಗಳನ್ನು ಪಾಲನೆ ಮಾಡುತ್ತಿಲ್ಲ. ಕುಡಿಯುವ ನೀರಿನ ಮಾರ್ಗಕ್ಕೆ ಅಳವಡಿಸಿರುವ ಪೈಪ್‌ಲೈನ್ ಗುಣಮಟ್ಟ ಪರಿಶೀಲಿಸಬೇಕು ಎಂದು ಪಾಲಿಕೆ ಸದಸ್ಯರು ಆಗ್ರಹಿಸಿದರು.
ನಗರದ ಪಾಲಿಕೆ ಪರಿಷತ್ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕುಡಿಯುವ ನೀರಿನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಸದಸ್ಯರು, ನಗರದಲ್ಲಿ ಕುಡಿಯುವ ನೀರಿನ ಪೈಪಲೈನ್ ಕಾಮಗಾರಿ ಹೆಸರಿನಲ್ಲಿ ಅಗೆದಿರುವ ರಸ್ತೆಗಳ ದುರಸ್ತಿ ಮಾಡಿಲ್ಲ. ರಸ್ತೆಯ ಎರಡು ಬದಿಗಳಲ್ಲಿ ಗುಂಡಿಗಳು ಬಿದ್ದಿದ್ದು ಜನಸಾಮಾನ್ಯರು ನಿತ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಕೂಡಲೇ ಎಲ್ ಆ್ಯಂಡ್ ಟಿ ವಿರುದ್ಧ ಕ್ರಮದ ಜತೆಗೆ ದಂಡ ಹಾಕಬೇಕು ಎಂದು ಒತ್ತಾಯಿಸಿದರು.
ಪಾಲಿಕೆಯ ನಾಮ ನಿರ್ದೇಶಿತ ಸದಸ್ಯ ಡಾ.ದಿನೇಶ ನಾಶಿಪುಡಿ ಮಾತನಾಡಿ, 2019ರಲ್ಲಿ ಪರಿಶೀಲನೆಗೆ ಕಳಪೆ ಪೈಪಲೈನ್ ಅಳವಡಿಸಿದ್ದರು. ಬಳಿಕ ಎಲ್ಲ ಮಾರ್ಗದ ಪೈಪಲೈನ್ ಹೊಸದಾಗಿ ಅಳವಡಿಸಲಾಗಿತ್ತು. ಈಗಲೂ ಕಳಪೆ ಗುಣಮಟ್ಟದ ಪೈಪಲೈನ್ ಅಳವಡಿಕೆ ಮಾಡುತ್ತಿರುವುದು ಅನುಮಾನ ಬಂದಿದ್ದು, ಗುಣಮಟ್ಟ ಪರಿಶೀಲನೆ ನಡೆಸಬೇಕು. ಯಾವುದೇ ನಿಯಮಗಳನ್ನು ಪಾಲನೆ ಮಾಡದೆ ಬೇಕಾಬಿಟ್ಟಿಯಾಗಿ ಪೈಪ್‌ಲೈನ್ ಮಾರ್ಗ ಅಗೆಯುವುದು, ಸಾರ್ವಜನಿಕ ಆಸ್ತಿಗಳಿಗೆ ಹಾನಿ ಮಾಡುತ್ತಿದ್ದಾರೆ ಎಂದು ದೂರಿದರು.
ಪಾಲಿಕೆ ಸದಸ್ಯೆ ರವಿ ದೋತ್ರೆ ಮಾತನಾಡಿ, ಎಲ್ ಆ್ಯಂಡ್ ಟಿಯವರು ನಗರದಲ್ಲಿ ಹಲವು ವರ್ಷಗಳಿಂದ ನಿರಂತರ ಕುಡಿಯುವ ನೀರಿನ ಸರಬರಾಜು ಯೋಜನೆ ಕಾಮಗಾರಿ ನಡೆಸುತ್ತಿದ್ದಾರೆ. ಇಲ್ಲಿಯವರೆಗೆ ಪಾಲಿಕೆಯ ಇಂಜಿನಿಯರ್‌ಗಳು ಕಾಮಗಾರಿ ಗುಣಮಟ್ಟ ಪರಿಶೀಲನೆ ನಡೆಸಿಲ್ಲ. ಕೋಟ್ಯಂತರ ರೂ. ಅನುದಾನ ಪೋಲಾಗುತ್ತಿದ್ದರು ಯಾವುದೇ ಕ್ರಮ ವಹಿಸಿಲ್ಲ. ಹೀಗಾಗಿ ಪಾಲಿಕೆ ಇಂಜಿನಿಯರ್‌ಗಳ ವಿರುದ್ಧ ಕ್ರಮ ಆಗಬೇಕು. ಬಳಿಕ ಎಲ್ ಆ್ಯಂಡ್ ಟಿ ವಿರುದ್ಧ ಕಾನೂನು ಕ್ರಮ ಆಗಬೇಕು ಎಂದು ಒತ್ತಾಯಿಸಿದರು.
ಉಪಮೇಯರ್ ಹನಮಂತ ಕೊಂಗಾಲಿ ಮಾತನಾಡಿ, ನಗರದಲ್ಲಿ ಕುಡಿಯುವ ನೀರಿನ ಪೈಪ್‌ಲೈನ್ ಕಾಮಗಾರಿಗಾಗಿ ಎಲ್ಲೆಡೆ ರಸ್ತೆ ಅಗೆದು ಬಿಡಲಾಗಿದೆ. ಇಲ್ಲಿಯವರೆಗೆ ದುರಸ್ತಿ ಮಾಡಿಲ್ಲ. ಒಪ್ಪಂದ ಪ್ರಕಾರ ಯಾವುದೇ ನಿಯಮಗಳನ್ನು ಪಾಲನೆ ಮಾಡದಿರುವುದಕ್ಕೆ ಎರಡು ಬಾರಿ ದಂಡ ಹಾಕಿ ಎಚ್ಚರಿಕೆ ನೀಡಲಾಗಿತ್ತು. ಆದರೆ, ಕಾರ್ಯವೈಖರಿ ಬದಲಾವಣೆ ಆಗಿಲ್ಲ ಪದೇ ಪದೇ ಸಮಸ್ಯೆ ಸೃಷ್ಟಿಸುತ್ತಿರುವ ಎಲ್ ಆ್ಯಂಡ್ ಟಿ ಗುತ್ತಿಗೆಯನ್ನು ಸಂಪೂರ್ಣ ತೆಗೆದು ಹಾಕಲು ಪ್ರಸ್ತಾವನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಬಾರಿಗೆ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಪರ್ಯಾಯ ವ್ಯವಸ್ಥೆ ಕೈಗೊಳ್ಳಬೇಕು. ಜಲಾಶಯಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ಲಭ್ಯವಿದ್ದರು ಸಾಮಾಜಿಕ ಜಾಲತಾಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಎಂಬ ಸುಳ್ಳು ಸುದ್ದಿಗಳು ಬರುತ್ತಿದೆ. ಕೂಡಲೇ ಎಚ್ಚೆತ್ತುಕೊಂಡು ಕ್ರಮ ವಹಿಸಬೇಕು ಎಂದು ಸೂಚಿಸಿದರು.
ಪಾಲಿಕೆ ಆಯುಕ್ತ ಕಾರ್ತಿಕ್.ಎಂ., ಲಕ್ಷ್ಮೀ ನಿಪ್ಪಾಣಿಕರ್ ಇತರರಿದ್ದರು.
Laxmi News 24×7