ನ್ಯೂಯಾರ್ಕ್: ಕೊರೊನಾ ವೈರಸ್‍ಗೆ ಅಮೆರಿಕದಲ್ಲಿ ಮತ್ತೊಂದು ಪುಟ್ಟ ಕಂದಮ್ಮ ಬಲಿಯಾಗಿದೆ ಎಂದು ಅಲ್ಲಿನ ರಾಜ್ಯಪಾಲರು ಬುಧವಾರ ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಅತ್ಯಂತ ಕಿರಿಯ ವಯಸ್ಸಿನ ಕಂದಮ್ಮ ಕೊರೊನಾಗೆ ಬಲಿಯಾದ ಎರಡನೇ ಪ್ರಕರಣ ಇದಾಗಿದೆ.

ಈ ಬಗ್ಗೆ ರಾಜ್ಯಪಾಲ ನೆಡ್ ಲ್ಯಾಮಂಟ್ ಟ್ವೀಟ್ ಮಾಡಿದ್ದು, ಕಳೆದ ವಾರ ಮಗುವನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳಲಾಗಿದ್ದು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ. ಅಲ್ಲದೆ ಕಂದಮ್ಮ ಕೊರೊನಾ ವೈರಸ್‍ಗೆ ಬಲಿಯಾಗಿರುವುದು ದೃಢವಾಗಿದೆ ಎಂದು ಅವರು ವಿವರಿಸಿದ್ದಾರೆ.
ಇದೊಂದು ನಿಜಕ್ಕೂ ಹೃದಯವಿದ್ರಾವಕ ಘಟನೆಯಾಗಿದೆ. ಯಾಕಂದ್ರೆ ಕೊರೊನಾ ವೈರಸ್‍ಗೆ ಬಲಿಯಾದ ಅತ್ಯಂತ ಕಿರಿಯ ವಯಸ್ಸಿನ ಪ್ರಕರಣ ಇದಾಗಿದೆ. ಈ ಹಿಂದೆ ಚಿಕ್ಯಾಗೋದಲ್ಲಿ ನಿಧನವಾದ ಮಗು ಒಂದು ವರ್ಷಕ್ಕಿಂತ ಕಡಿಮೆ ವಯಸ್ಸಿನದ್ದಾಗಿದೆ. ಕೊರೊನಾ ಪರೀಕ್ಷೆಯಲ್ಲಿ ಮಗುವಿಗೆ ಸೋಂಕು ತಗುಲಿರುವುದು ದೃಢಪಟ್ಟಿರುವುದಾಗಿ ಇಲಿಯಾನ್ಸ್ ರಾಜ್ಯದ ರಾಜ್ಯಪಾಲ ಜೆಬಿ ಪ್ರಿಟ್ ಜ್ಕೆರ್ ಮಾಹಿತಿ ನೀಡಿದ್ದರು.
ಇದುವರೆಗೆ ಅಮೆರಿಕದಲ್ಲಿ ಕೊರೊನಾ ವೈರಸ್ ಗೆ 4,476 ಮಂದಿ ಬಲಿಯಾಗಿದ್ದಾರೆ ಎಂಬುದಾಗಿ ವರದಿಯಾಗಿದೆ. ಸಾಮಾನ್ಯವಾಗಿ ಕೊರೊನಾ ವೈರಸ್ ವಯಸ್ಕರ ಮೇಲೆ ಹೆಚ್ಚು ಪರಿಣಾಮ ಬೀರುತ್ತೆ ಎಂದು ನಂಬಲಾಗಿತ್ತು. ಆದರೆ ಇದೀಗ ಪುಟ್ಟ ಪುಟ್ಟ ಕಂದಮ್ಮಗಳು ಕೂಡ ಈ ಅಪಾಯಕಾರಿ ವೈರಸ್‍ಗೆ ಬಲಿಯಾಗುತ್ತಿದ್ದು, ಆತಂಕ ಹುಟ್ಟಿಸಿದೆ.
Laxmi News 24×7