ನವದೆಹಲಿ: ದೇಶಾದ್ಯಂತ ಕೊರೊನಾ ಅಟ್ಟಹಾಸ ಮುಂದುವರೆಸಿದ್ದು, ಜೂನ್ ಮಧ್ಯಭಾಗದ ವೇಳೆಗೆ ಪ್ರತಿ ನಿತ್ಯ 15,000ಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಲಿದೆ ಎಂಬ ಆತಂಕಕಾರಿ ವರದಿ ಬಂದಿದೆ.
ಇತ್ತೀಚೆಗಷ್ಟೇ ದೆಹಲಿ ಸರ್ಕಾರ ತನ್ನ ಜಿಲ್ಲಾಡಳಿತಗಳಿಗೆ ಕೊರೋನಾ ಚಿಕಿತ್ಸೆಗೆ ಹೆಚ್ಚುವರಿ ಬೆಡ್ ಹುಡುಕಿ ಮತ್ತು ಕೊರೋನಾದಿಂದ ಸತ್ತವರ ಅಂತ್ಯ ಸಂಸ್ಕಾರಕ್ಕಾಗಿ ಸ್ಮಶಾನ ಗುರುತಿಸಿ ಎಂದು ಹೇಳಿತ್ತು. ಈ ನಡುವೆ ಪ್ರತಿನಿತ್ಯವೂ 15 ಸಾವಿರಕ್ಕೂಹೆಚ್ಚು ಪ್ರಕರಣಗಳು ಪತ್ತೆಯಾಗಲಿವೆ ಎಂಬ ಆತಂಕಕಾರಿ ಮಾಹಿತಿ ಹೊರಬಿದ್ದಿದೆ.
ವಾಯುವ್ಯ ಚೀನಾದ ಗನ್ಸು ಪ್ರಾಂತ್ಯದಲ್ಲಿರುವ ಲ್ಯಾಂಜೋ ವಿಶ್ವವಿದ್ಯಾಲಯದ ತಜ್ಞರು ಇಂಥ ಮೈನಡುಗಿಸುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಲ್ಯಾಂಜೋ ವಿಶ್ವವಿದ್ಯಾಲಯವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೊರೋನಾ ಸೋಂಕು ಹರಡುವಿಕೆಯ ಪ್ರಮಾಣದ ಬಗ್ಗೆ ಗ್ಲೋಬಲ್ ಕೋವಿಡ್ -19 ಪ್ರಿಡಿಕ್ಟ್ ಸಿಸ್ಟಮ್ ಎಂಬ ಹೆಸರಿನಲ್ಲಿ ಸಂಶೋಧನೆ ನಡೆಸುತ್ತಿದೆ.
ಲ್ಯಾಂಜೋ ವಿಶ್ವವಿದ್ಯಾಲಯದ ತಜ್ಞರು 180 ದೇಶಗಳಿಗೆ ದೈನಂದಿನ ಮುನ್ಸೂಚನೆಯನ್ನು ನೀಡುತ್ತಿದ್ದಾರೆ. ಆ ಪೈಕಿ ಭಾರತದ ಪರಿಸ್ಥಿತಿಯ ಬಗ್ಗೆಯೂ ಅಂದಾಜು ಮಾಡುತ್ತಿದ್ದಾರೆ. ಈ ಹಿಂದೆ ಭಾರತದಲ್ಲಿ ಜೂನ್ ಆರಂಭದಲ್ಲಿ ಪ್ರತಿನಿತ್ಯ 9 ಸಾವಿರಕ್ಕೂ ಹೊಸ ಪ್ರಕರಣಗಳು ಪತ್ತೆಯಾಗಲಿವೆ ಎಂದು ಭವಿಷ್ಯ ನುಡಿದಿದ್ದರು. ಅದಕ್ಕೆ ತಕ್ಕಂತೆ ಭಾರತದಲ್ಲಿ ಜೂನ್ 3ರಿಂದ ಪ್ರತಿದಿನ 9 ಸಾವಿರಕ್ಕೂ ಹೆಚ್ಚು ಜನರಲ್ಲಿ ಕೊರೋನಾ ಸೋಂಕು ಕಾಣಿಸಿಕೊಳ್ಳುತ್ತಿದೆ.
ಲಾಕ್ಡೌನ್ ನಿಯಮಗಳನ್ನು ಹಂತ-ಹಂತವಾಗಿ ಸಡಿಲಿಸುತ್ತಿರುವುದರಿಂದ ಕ್ರಮೇಣವಾಗಿ ಕೊರೋನಾ ಸೋಂಕು ಮತ್ತಷ್ಟು ಉಲ್ಬಣಗೊಳ್ಳಲಿದೆ. ಲಾಕ್ಡೌನ್ ನಿಯಮಾವಳಿಗಳಿಗೆ ವಿನಾಯಿತಿ ನೀಡುವುದರಿಂದ ಸಾಮಾಜಿಕ ಅಂತರ ಹಾಗೂ ಕೊರೋನಾ ಮುನ್ನೆಚ್ಚರಿಕೆ ಕ್ರಮಗಳು ಪಾಲನೆಯಾಗುವುದು ಅನುಮಾನ ಎಂದು ಸಂಶೋಧನೆಯಲ್ಲಿ ತಿಳಿಸಲಾಗಿದೆ.