ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ. ಇಷ್ಟು ದಿನ ನಿರಾಳವಾಗಿದ್ದ ದೊಡ್ಡಬಳ್ಳಾಪುರ ತಾಲೂಕಿಗೂ ಕೊರೊನಾ ಕಾಲಿಟ್ಟಿದ್ದು, 39 ವರ್ಷದ ವ್ಯಕ್ತಿ (ರೋಗಿ ನಂಬರ್-246) ಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಕೊರೊನಾ ಸೋಂಕಿತ ರೈಲ್ವೆ ಇಲಾಖೆಯಲ್ಲಿ ಟ್ರಾಕ್ ಮಿಷಿನ್ ಮೈಂಟೈನರ್ ಆಗಿದ್ದು, ಮಾರ್ಚ್ 14 ರಿಂದ 18ರ ನಡುವೆ ದೆಹಲಿಗೆ ಪ್ರಯಾಣ ಬೆಳೆಸಿದ್ದರು. ದೆಹಲಿಯ ನಿಜಾಮುದ್ದೀನ್ ನಿಂದ ವಾಪಸ್ಸಾಗಿದ್ದರು. ಈ ವೇಳೆ ಇವರು ಪ್ರಯಾಣಿಸಿದ ರೈಲಿನಲ್ಲೇ ಕಾಚಿಗುಡವರೆಗೂ ಜಮಾತ್ ನಲ್ಲಿ ಭಾಗಿಯಾಗಿದ್ದ ತಬ್ಲಘಿಯೋರ್ವ ಸಹ ಪ್ರಯಾಣಿಸಿದ್ದ ಎನ್ನಲಾಗಿದೆ. ಹೀಗಾಗಿ ತಬ್ಲಿಘಿಯಿಂದಲೇ ಸೋಂಕು ತಗುಲಿರುವ ಸಾಧ್ಯತೆ ಇದೆ ಎನ್ನಲಾಗಿದೆ.
ಮಾರ್ಚ್ 18ರಂದು ವಾಪಸ್ಸಾದ ಸೋಂಕಿತ ಎಂದಿನಂತೆ ಓಡಾಡಿಕೊಂಡಿದ್ದರು. ಆದರೆ ಮಾರ್ಚ್ 26ರಂದು ಶಂಕಿತ ಕೊರೊನಾ ಲಕ್ಷಣಗಳು ಕಂಡು ಬಂದ ಹಿನ್ನೆಲೆ ಸ್ವತಃ ತಾವೇ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ್ದರು. ಆದರೆ ಕೊರೊನಾ ಲಕ್ಷಣಗಳು ಅಂತ ಭಾವಿಸಿರಲಿಲ್ಲ. ವೈದ್ಯರು ದೆಹಲಿ ಟ್ರಾವೆಲ್ ಹಿಸ್ಟರಿ ಕೇಳಿದಾಗ ಅನುಮಾನಗೊಂಡು ಹೋಮ್ ಕ್ವಾರಂಟೈನ್ ಗೆ ಸೂಚಿಸಿದ್ರು. ಇನ್ನೂ ಕ್ವಾರಂಟೈನ್ ಅವಧಿ ಪೂರ್ಣಗೊಂಡ ನಂತರವೂ ಇವರಲ್ಲಿ ಜ್ವರ ಇತ್ತು. ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ತಾಲೂಕು ಆಸ್ಪತ್ರೆಗೆ ಐಸೋಲೇಷನ್ ಮಾಡಲಾಗಿತ್ತು.
ಏಪ್ರಿಲ್ 11 ಹಾಗೂ 12 ರಂದು ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಾಗಿತ್ತು. ಇಂದು ಬಂದ ವರದಿ ಕೊರೊನಾ ಪಾಸಿಟಿವ್ ಅಂತ ದೃಢಪಟ್ಟಿದೆ. ಸದ್ಯ ಸೋಂಕಿತನ ಪತ್ನಿ ಹಾಗೂ ಮಗುವನ್ನ ಸಹ ಕ್ವಾರಂಟೈನ್ ಮಾಡಲಾಗಿದೆ. 40 ರಿಂದ 50 ಮನೆ ಇರುವ ಇವರ ಗ್ರಾಮಕ್ಕೆ ಆರೋಗ್ಯ ಇಲಾಖಾಧಿಕಾರಿಗಳು ಭೇಟಿ ನೀಡಿ ಪ್ರತಿಯೊಬ್ಬರನ್ನೂ ಸ್ಕ್ರೀನಿಂಗ್ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ರವೀಂದ್ರ ತಿಳಿಸಿದರು.