ಬೆಂಗಳೂರು: ಮದರಸಾ ಜಾಗದ ವಿಚಾರಕ್ಕೆ ಶಾಲೆಗೆ ನುಗ್ಗಿ ಪುಂಡರು ದಾಂಧಲೆ ನಡೆಸಿರುವ ಘಟನೆ ಬೆಂಗಳೂರಿನ ಥಣಿಸಂದ್ರದ ನಾರಾಯಣಪುರದಲ್ಲಿ ನಡೆದಿದೆ.
ಸಾಮರ್ ಇಂಟರ್‌ನ್ಯಾಷನಲ್ ಸ್ಕೂಲ್‌ಗೆ ನುಗ್ಗಿದ ಕೆಲವರು, ಕಿಟಕಿ ಗಾಜುಗಳನ್ನು ಒಡೆದು ಒಳನುಗ್ಗೋಕೆ ಪ್ರಯತ್ನಿಸಿದ್ದಾರೆ. ಈ ವೇಳೆ ಒಳಗಿದ್ದ ಕೆಲ ವಿದ್ಯಾರ್ಥಿಗಳು, ಸಿಬ್ಬಂದಿ ಖಾರದ ಪುಡಿ ಬೆರಸಿದ ನೀರು ಎರಚಿ ಅವರನ್ನು ಹಿಮ್ಮೆಟ್ಟಿಸೋ ಕೆಲಸ ಮಾಡಿದ್ದಾರೆ. ನೋಡು ನೋಡುತ್ತಿದ್ದಂತೆ ಇಡೀ ಕಾಲೇಜು ರಣರಂಗವಾಗಿ ಮಾರ್ಪಟ್ಟಿದೆ.
ಮಸೀ ಅಹಮದ್ ಎಂಬುವವರು 1988ರಲ್ಲಿ ಮದರಸಾಗೆ ಹತ್ತು ಗುಂಟೆ ಜಮೀನು ದಾನವಾಗಿ ಕೊಟ್ಟಿದ್ದರು. ಆ ಜಾಗದಲ್ಲಿ ಖಲೀದ್ ಮುಶ್ರಫ್ ಎಂಬುವವರು ಮದರಸಾ ಮಾಡಿಕೊಂಡು ಅಕ್ಕಪಕ್ಕದ ಐದು ಎಕರೆ ಜಾಗದಲ್ಲಿ ಶಾಲೆ, ಕಾಲೇಜು ನಿರ್ಮಿಸಿ ಕಳೆದ ನಲವತ್ತು ವರ್ಷದಿಂದ ನಡೆಸಿಕೊಂಡು ಬಂದಿದ್ದಾರೆ.
ಇದೀಗ ಮೂಲ ಮಾಲೀಕ, ಮಸೀ ಅಹಮದ್ ಮಕ್ಕಳು, ಮೊಮ್ಮಕ್ಕಳು ಕೇಸು ದಾಖಲಿಸಿದ್ದು, ಕೇವಲ ಹತ್ತು ಗುಂಟೆ ಜಮೀನು ದಾನವಾಗಿ ಕೊಟ್ಟಿದ್ದೇವೆ. ಆದರೆ ಮದರಸಾದವರು ಅಕ್ರಮವಾಗಿ ಪಕ್ಕದ ಐದು ಎಕರೆ ಜಾಗವನ್ನು ಕಬಳಿಸಿಕೊಂಡಿದ್ದಾರೆ ಅಂತಾ ಆರೋಪಿಸಿದ್ದಾರೆ. ಈ ವಿಚಾರ, ಹೈಕೋರ್ಟ್ನಲ್ಲಿದ್ದು, ಯಥಾಸ್ಥಿತಿ ಕಾಪಾಡುವಂತೆ ಸೂಚಿಸಲಾಗಿದೆ. ಆದರೂ ಇಬ್ಬರ ಕಡೆಯವರಿಂದ ಆಗಾಗ ಗಲಾಟೆಗಳು ನಡೆಯುತ್ತಿವೆ. ಇನ್ನೂ ಈ ಗಲಾಟೆ ಸಂಬಂಧ, ಕೊತ್ತನೂರು ಪೊಲೀಸ್ ಠಾಣೆಯಲ್ಲಿ ದೂರು ಪ್ರತಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಸ್ಕೂಲ್ ಮಾಲೀಕ ಖಲೀದ್ ಮುಶ್ರಫ್ ಕೊತ್ತನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಯಾಸೀನ್, ಅಮೀನ್, ಅಕ್ಬರ್, ಇನಾಯಿತ್, ಸುಲ್ತಾನ್, ಹೀಮದ್ ಪಾಷ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಕಳೆದ ನಲವತ್ತು ವರ್ಷದಿಂದ ಇಲ್ಲಿ ಶಾಲೆ ನಡೆಸಲಾಗುತ್ತಿದೆ. ಜು.14ರ ತಡರಾತ್ರಿ ಏಕಾಏಕಿ ನುಗ್ಗಿ ಕೆಲವರು ಅತಿಕ್ರಮಣ ಪ್ರವೇಶ ಮಾಡಿ ಹಲ್ಲೆ, ಧ್ವಂಸ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
Laxmi News 24×7