ಹೈದರಾಬಾದ್: ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿ ಪತ್ನಿ ಮತ್ತು ಮಕ್ಕಳು, ಅಪ್ರಾಪ್ತ ಅತ್ಯಾಚಾರ ಸಂತ್ರಸ್ತೆ ಸೇರಿದಂತೆ 6 ಜನರನ್ನು ಹತ್ಯೆ ಮಾಡಿದ್ದ ಪೋಕ್ಸೋ ಆರೋಪಿ ವಿಷ ಕುಡಿದು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಜು.10 ರಂದು ಆರೋಪಿ ರಾಜ್‌ಕುಮಾರ್ ತನ್ನ ಹೆಂಡತಿ, ಇಬ್ಬರು ಗಂಡು ಮಕ್ಕಳು, ಆತನ ಮೇಲೆ ಅತ್ಯಾಚಾರ ಕೇಸ್ ದಾಖಲಿಸಿದ್ದ ಅಪ್ರಾಪ್ತೆ ಹಾಗೂ ಆಕೆಯ ಅಜ್ಜಿ ಮತ್ತು ತಾಯಿಯನ್ನು ಕೊಲೆಗೈದಿದ್ದ. ಬಳಿಕ ಅಲ್ಲಿಂದ ಪರಾರಿಯಾಗಿದ್ದ. ಆತನ ಪತ್ತೆಗೆ 12 ತಂಡಗಳನ್ನು ಮಾಡಿ ಪೊಲೀಸರು ಬಲೆ ಬೀಸಿದ್ದರು. ಆತನ ಸುಳಿವು ಕೊಟ್ಟವರಿಗೆ 2 ಲಕ್ಷ ರೂ. ಬಹುಮಾನ ಘೋಷಿಸಿದ್ದರು. ಸೋಮವಾರ (ಜು.13) ಆತನ ಶವ ರಂಗಾರೆಡ್ಡಿ ಜಿಲ್ಲೆಯ ಕೊತ್ತೂರು ಮಂಡಲದ ಪೆಂಜಾರ್ಲಾ ಗ್ರಾಮದ ಹೊರವಲಯದಲ್ಲಿ ಪತ್ತೆಯಾಗಿದೆ.
ಮಧ್ಯಾಹ್ನ 3 ಗಂಟೆ ಸುಮಾರಿಗೆ, ಅಪರಿಚಿತ ವ್ಯಕ್ತಿಯ ಶವ ಬಿದ್ದಿರುವುದನ್ನು ಗಮನಿಸಿದ ಕೆಲವು ನಿವಾಸಿಗಳು ಪೊಲೀಸರಿಗೆ ಮಾಹಿತಿ ರವಾನಿಸಿದ್ದರು. ಮಾಹಿತಿ ತಿಳಿದು ಅಲ್ಲಿಗೆ ತೆರಳಿದ್ದ ಪೊಲೀಸರು ಶವದ ಮೇಲಿದ್ದ ಬಟ್ಟೆ ಹಾಗೂ ಆತನ ದೇಹದ ಗುರುತುಗಳನ್ನು ಆಧರಿಸಿ ರಾಜ್‌ಕುಮಾರ್‌ನದ್ದೇ ಶವ ಎಂದು ಶಂಕಿಸಿದ್ದರು. ಬಳಿಕ ಆತನ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದರು. ಕುಟುಂಬಸ್ಥರು ಶವ ರಾಜ್‌ಕುಮಾರ್‌ನದ್ದೇ ಎಂದು ಗುರುತಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡ ರಾಜ್‌ಕುಮಾರ್ ಧರಿಸಿದ್ದ ಪ್ಯಾಂಟ್‌ನ ಜೇಬಿನಲ್ಲಿ ಫ್ಲೈಟ್ ಮೋಡ್‌ನಲ್ಲಿದ್ದ ಮೊಬೈಲ್, ಬಸ್ ಟಿಕೆಟ್‌ಗಳು, 1,260 ರೂ. ನಗದು ಮತ್ತು ಒಂದು ಬಾಟಲ್ ಕಳೆನಾಶಕ ಪತ್ತೆಯಾಗಿದೆ. ಕಳೆನಾಶಕ ಸೇವಿಸಿ ಆತ ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.
ಆತನ ಮೊಬೈಲ್ ಫೋನ್‌ನಲ್ಲಿ ಎರಡು ನಿಮಿಷ ಮತ್ತು 26 ಸೆಕೆಂಡುಗಳ ವೀಡಿಯೊ ಪತ್ತೆಯಾಗಿದ್ದು, ಅದರಲ್ಲಿ ರಾಜ್‌ಕುಮಾರ್, ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದಾನೆ. ಅಲ್ಲದೇ ಪೋಕ್ಸೋ ಆರೋಪ ಹೋರಿಸಿದ್ದ ಹುಡುಗಿಯ ಕುಟುಂಬವು ತನ್ನಿಂದ ಹಣ ಪಡೆದು ಮೋಸ ಮಾಡಿದೆ ಎಂದು ಆರೋಪಿಸಿದ್ದಾನೆ. ಇದರಿಂದ ಆರ್ಥಿಕ ನಷ್ಟಕ್ಕೊಳಗಾದೆ. ನನ್ನ ಮಕ್ಕಳಿಗೆ ಬರಬೇಕಾದ ಆಸ್ತಿಯನ್ನು ಕಳೆದುಕೊಂಡಿದ್ದೇನೆ. ನನ್ನನ್ನು ಅವರು ಜೈಲಿಗೆ ಕಳಿಸುವ ಪ್ರಯತ್ನ ಮಾಡಿದ್ದರು, ಅವರ ವಿರುದ್ಧ ಕ್ರಮಕೈಗೊಳ್ಳಿ ಎಂದು ಹೇಳಿದ್ದಾನೆ.
ಆರೋಪಿ ಮತ್ತು ಅಪ್ರಾಪ್ತ ಬಾಲಕಿಯ ಕುಟುಂಬವು ಈ ಹಿಂದೆ ಶಾಬಾದ್ ಮಂಡಲದಲ್ಲಿ ನೆರೆಹೊರೆಯವರಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಬೆಟ್ಟಿಂಗ್ ವ್ಯಸನಿಯಾಗಿದ್ದ ಆರೋಪಿ
ರಾಜ್‌ಕುಮಾರ್ ಆನ್‌ಲೈನ್ ಬೆಟ್ಟಿಂಗ್ ಮತ್ತು ಜೂಜಾಟಕ್ಕೆ ವ್ಯಸನಿಯಾಗಿದ್ದ. ಇದಕ್ಕಾಗಿ ಸಾಲ ಮಾಡಿ ತೀವ್ರ ಒತ್ತಡಕ್ಕೆ ಒಳಗಾಗಿದ್ದ. ಆನ್‌ಲೈನ್ ಬೆಟ್ಟಿಂಗ್ ಕಾರಣದಿಂದಾಗಿ, 16 ಸಿಮ್ ಕಾರ್ಡ್‌ಗಳು ಮತ್ತು ಹಲವಾರು ಫೋನ್‌ಗಳನ್ನು ಬಳಸುತ್ತಿದ್ದ. ಬೆಟ್ಟಿಂಗ್‌ನಿಂದಾಗಿ 2 ಕೋಟಿ ರೂ.ಗಳಿಗೂ ಹೆಚ್ಚು ಸಾಲವನ್ನು ಬಾಕಿ ಉಳಿಸಿಕೊಂಡಿದ್ದ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಹೆಚ್ಚುತ್ತಿರುವ ಸಾಲಗಳಿಂದಾಗಿ ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
Laxmi News 24×7