ಚಾಮರಾಜನಗರ: ಕಾಡಂಚಿನ ಜನರ ನಿದ್ದೆಗೆಡಿಸಿದ್ದ ಹುಲಿ ಕೊನೆಗೂ ಸೆರೆಯಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಹುಲಿಯನ್ನು ಸೆರೆಹಿಡಿದ್ದಾರೆ.
ಗುಂಡ್ಲುಪೇಟೆ ತಾಲೂಕಿನ ಕುಂದಕೆರೆ, ವಡ್ಡಗೆರೆ, ಚಿರಕನಹಳ್ಳಿ ಭಾಗದಲ್ಲಿ ಹೆಚ್ಚಾಗಿದ್ದ ಹುಲಿ ಭೀತಿ ಕಾಡುತ್ತಿತ್ತು. ಹುಲಿ 20ಕ್ಕೂ ಹೆಚ್ಚು ಜಾನುವಾರುಗಳನ್ನು ಕೊಂದಿತ್ತು. ಕಳೆದ ಒಂದು ವಾರದಿಂದ ಹುಲಿ ಸೆರೆಗಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದರು. ಅರಣ್ಯ ಸಚಿವ ಆನಂದ್ ಸಿಂಗ್ ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಜನರಿಗೆ ಕಂಟಕವಾಗಿರುವ ಹುಲಿ ಸೆರೆ ಹಿಡಿಯುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದ್ದರು. ಈ ಹಿನ್ನೆಲೆಯಲ್ಲಿ ಮೊನ್ನೆಯಷ್ಟೆ ಅರಣ್ಯಾಧಿಕಾರಿಗಳಿಗೆ ಹುಲಿ ಸೆರೆಹಿಡಿಯಲು ಹಿರಿಯ ಅಧಿಕಾರಿಗಳಿಂದ ಅನುಮತಿ ಕೂಡ ಸಿಕ್ಕಿತ್ತು.
ಬಂಡೀಪುರದ ಅರಣ್ಯಾಧಿಕಾರಿಗಳು ಆನೆಗಳನ್ನು ಬಳಸಿ ಕೂಂಬಿಂಗ್ ನಡೆಸುವ ವೇಳೆ ಕಣ್ಣಿಗೆ ಬಿದ್ದ ಹುಲಿಗೆ ಅರವಳಿಕೆ ಇಂಜೆಕ್ಟ್ ಮಾಡಿ ಹುಲಿಯ ಪ್ರಜ್ಞೆ ತಪ್ಪಿಸಿ ಸೆರೆ ಹಿಡಿದಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ಹುಲಿ ಸೆರೆ ಹಿಡಿದಿರುವುದರಿಂದ ಕಾಡಂಚಿನ ಗ್ರಾಮಗಳ ಜನ ನಿಟ್ಟುಸಿರು ಬಿಟ್ಟಿದ್ದಾರೆ.
ಹುಲಿ ಸೆರೆಯಿಂದ ಈ ಭಾಗದ ಜನರು ನಿರಾಳರಾಗಿದ್ದಾರೆ. ಹುಲಿಯನ್ನು ಮೈಸೂರಿಗೆ ಸ್ಥಳಾಂತರಿಸುವ ಕುರಿತು ಅಧಿಕಾರಿಗಳು ತೀರ್ಮಾನ ಕೈಗೊಂಡಿದ್ದಾರೆ. ಕೆಲವು ತಿಂಗಳ ಹಿಂದೆ ಚೌಡಹಳ್ಳಿ ಗ್ರಾಮದಲ್ಲಿ ಇಬ್ಬರನ್ನು ಕೊಂದಿದ್ದ ಹುಲಿಯನ್ನೂ ಸೆರೆ ಹಿಡಿದಿದ್ದ ಅರಣ್ಯ ಇಲಾಖೆ, ಮೈಸೂರಿನ ಕೂರ್ಗಳ್ಳಿಯ ಪುನರ್ವಸತಿ ಕೇಂದ್ರದಲ್ಲಿ ಬಿಡಲಾಗಿತ್ತು.