ಚಿಕ್ಕಬಳ್ಳಾಪುರ: ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಜಂಗಮಕೋಟೆ ಹೋಬಳಿಯ 13 ಹಳ್ಳಿಗಳ 2,800 ಎಕರೆ ಜಮೀನನ್ನ ಕೆಐಎಡಿಬಿ ಭೂಸ್ವಾಧೀನ ಮಾಡಿಕೊಳ್ಳಬಾರದು ಎಂದು ರೈತರು ಚಿಕ್ಕಬಳ್ಳಾಪುರದಿಂದ ಬೆಂಗಳೂರಿನ ವಿಧಾನಸೌಧಕ್ಕೆ ಬೈಕ್ ರ‍್ಯಾಲಿ ನಡೆಸಿದರು.
ಕಳೆದ 81 ದಿನಗಳಿಂದ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದ ಎದುರು ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದ ರೈತರು ಇಂದು ಬೆಂಗಳೂರಿಗೆ ಬೈಕ್ ರಾಲಿ ನಡೆಸಿದ್ದರು. ಸಾವಿರಾರು ಮಂದಿ ರೈತರು ಬೈಕ್ ರ‍್ಯಾಲಿಯಲ್ಲಿ ಪಾಲ್ಗೊಂಡರು. ಈ ಹಿನ್ನೆಲೆ ಚಿಕ್ಕಬಳ್ಳಾಪುರ ಪೊಲೀಸರು 500 ಕ್ಕೂ ಹೆಚ್ಚು ಮಂದಿ ಬಂದೋಬಸ್ತ್ ನಿಯೋಜಿಸಿದ್ದರು.
ವಿಧಾನಸೌಧಕ್ಕೆ ಹೊರಟಿದ್ದ ಬೈಕ್ ರ‍್ಯಾಲಿಯನ್ನ ಅಣಕನೂರು ಬಳಿಯೇ ಪೊಲೀಸರು ತಡೆದರು. ಇದರಿಂದ ಸತತ ಮೂರು ಗಂಟೆಗಳ ಕಾಲ ರಸ್ತೆಯಲ್ಲೇ ಕೂತು ರೈತರು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದರು. ಸ್ಥಳಕ್ಕೆ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಜಿ ಪ್ರಭು ಆಗಮಿಸಿ ರೈತರ ಮನವೊಲಿಸುವಲ್ಲಿ ಯಶಸ್ವಿಯಾದರು.
ಕೊನೆಗೆ ಜಿಲ್ಲಾಧಿಕಾರಿಗಳು ಇನ್ನೆರಡು ವಾರಗಳ ಒಳಗೆ ಕೆಐಎಡಿಬಿ ಅಧಿಕಾರಿಗಳ ಜೊತೆ ಸಭೆ ನಡೆಸಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ ಬಳಿಕವೇ ಪ್ರತಿಭಟನೆ ವಾಪಸ್ ಪಡೆದರು.
Laxmi News 24×7