ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನ ಹಿರಿಯಂಬಲ ಹಾಗೂ ಕತ್ತೆಕಾಲು ಪೋಡಿನ 400 ಬುಡಕಟ್ಟು ಸೋಲಿಗರ ಕುಟುಂಬಗಳಿಗೆ ಪಡಿತರ ಧಾನ್ಯ ವಿತರಣೆ ಮಾಡದೆ ಅನ್ಯಾಯ ಮಾಡಲಾಗುತ್ತಿದೆ ಎಂದು ವರದಿ ಮಾಡಲಾಗಿತ್ತು. ಈ ವರದಿಯಿಂದ ಎಚ್ಚೆತ್ತ ಜಿಲ್ಲಾಡಳಿತ ಕೊನೆಗೂ ವಿತರಣೆಯಲ್ಲಿ ವಂಚನೆ ಮಾಡಿದ್ದ ನ್ಯಾಯಬೆಲೆ ಅಂಗಡಿಯ ಲೈಸೆನ್ಸ್ ಅನ್ನು ಅಮಾನತು ಮಾಡಿ ಆದೇಶಿಸಿದೆ.
ಪಬ್ಲಿಕ್ ಟಿವಿ ವರದಿಯಿಂದ ಎಚ್ಚೆತ್ತ ಜಿಲ್ಲಾಡಳಿತ ಸ್ಥಳಕ್ಕೆ ಅಧಿಕಾರಿಗಳನ್ನು ಕಳುಹಿಸಿ ವರದಿ ತರಿಸಿಕೊಂಡು ಹಿರಿಯಂಬಲ ಬ್ರಹ್ಮೇಶ್ವರ ನ್ಯಾಯಬೆಲೆ ಅಂಗಡಿಯ ಲೈಸೆನ್ಸ್ ರದ್ದುಪಡಿಸಿದೆ. ಜಿಲ್ಲಾಧಿಕಾರಿ ಎಂ.ಆರ್.ರವಿ ಅವರ ನಿರ್ದೇಶನದ ಮೇರೆಗೆ ಆಹಾರ ಇಲಾಖೆ ಉಪನಿರ್ದೇಶಕ ರಾಚಪ್ಪ ನ್ಯಾಯಬೆಲೆ ಅಂಗಡಿಯ ಲೈಸೆನ್ಸ್ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಅಲ್ಲದೆ ಸರ್ಕಾರ ನಿಗದಿ ಮಾಡಿರುವ ಪ್ರಮಾಣದಲ್ಲಿ ಪ್ರತಿಯೊಂದು ಸೋಲಿಗ ಕುಟುಂಬಕ್ಕೂ ಪಡಿತರ ವಿತರಿಸಲು ಕ್ರಮಕೈಗೊಂಡಿದೆ.
ಪಡಿತರ ವಿತರಣೆ ಜವಾಬ್ದಾರಿಯನ್ನು ಬೂದಿಪಡಗದಲ್ಲಿರುವ ನ್ಯಾಯಬೆಲೆ ಅಂಗಡಿಗೆ ವಹಿಸಲಾಗಿದ್ದು, ಇಂದಿನಿಂದ ನ್ಯಾಯಯುತವಾಗಿ ಪಡಿತರ ವಿತರಣೆಯಾಗುತ್ತಿದೆ. ಕೂಲಿ ನಂಬಿ ಜೀವನ ಮಾಡುವ ಬುಡಕಟ್ಟು ಸೋಲಿಗರಿಗೆ ಲಾಕ್‍ಡೌನ್ ಹಿನ್ನೆಲೆಯಲ್ಲಿ ಕೂಲಿ, ಆಹಾರ ಧಾನ್ಯವೂ ಇಲ್ಲದೆ ಪರಿತಪಿಸುವಂತಾಗಿತ್ತು. ನ್ಯಾಯಬೆಲೆ ಅಂಗಡಿ ಮಾಲೀಕ ಸರ್ಕಾರದ ಸೂಚನೆಯನ್ನು ದಿಕ್ಕರಿಸಿ ಬಯೋಮೆಟ್ರಿಕ್ ಗುರುತುಪಡೆದು ಪಡಿತರ ವಿತರಣೆ ಮಾಡಿರಲಿಲ್ಲ. ಜೊತೆಗೆ ಪಕ್ಕದ ಹೊಸಪೋಡು ಹಾಗೂ ಗುಂಡಿಮಾಳ ಗ್ರಾಮದಲ್ಲಿ ನಿಗದಿಗಿಂತ ಕಡಿಮೆ ಪ್ರಮಾಣದಲ್ಲಿ ಪಡಿತರ ವಿತರಿಸಿ ಸೋಲಿಗರನ್ನು ವಂಚಿಸುತ್ತಿದ್ದ. ಪ್ರತಿ ಕಾರ್ಡ ದಾರರಿಗೆ ಎರಡು ತಿಂಗಳ ಪಡಿತರ 70 ಕೆ.ಜಿ. ಅಕ್ಕಿ ನೀಡಬೇಕಿತ್ತು. ಆದರೆ ಈತ ಕೇವಲ 50 ಕೆ.ಜಿ. ನೀಡಿ ವಂಚಿಸಲಾಗಿತ್ತು.
ಇಷ್ಟೇ ಅಲ್ಲದೆ ಈ ನ್ಯಾಯಬೆಲೆ ಅಂಗಡಿಯಲ್ಲಿ 80 ರೂಪಾಯಿ ನೀಡಿ ಖಾಸಗಿ ಕಂಪನಿಯೊಂದರ ವಾಷಿಂಗ್ ಸೋಪ್, ವಾಷಿಂಗ್ ಪೌಡರ್ ಖರೀದಿಸಿದವರಿಗೆ ಮಾತ್ರ ಪಡಿತರ ವಿತರಿಸಲಾಗುತ್ತಿತ್ತು. ಈ ಎಲ್ಲಾ ಅಕ್ರಮಗಳ ಬಗ್ಗೆ ಪಬ್ಲಿಕ್ ಟಿವಿ ವರದಿ ಮಾಡಿತ್ತು. ಇದೀಗ ಈ ಅಕ್ರಮಗಳಿಗೆ ಕಡಿವಾಣ ಬಿದ್ದಿದೆ. ಸೋಲಿಗ ಕುಟುಂಬಗಳಿಗೂ ಸರ್ಕಾರ ನಿಗದಿಮಾಡಿರುವ ಪ್ರಮಾಣದಲ್ಲಿ ಉಚಿತವಾಗಿ ಪಡಿತರ ವಿತರಣೆ ಆರಂಭಿಸಲಾಗಿದ್ದು, ಬಡ ಸೋಲಿಗರಿಗೆ ಕೊನೆಗೂ ನ್ಯಾಯದೊರೆತಂತಾಗಿದೆ.