ನಿಮ್ಹಾನ್ಸ್ ಬಾಗಿಲು ತಟ್ಟಿದ ಕೊರೊನಾ- ಆಸ್ಪತ್ರೆಯ ಐಸಿಯು ಕಂಪ್ಲೀಟ್ ಕ್ಲೋಸ್
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕಿಲ್ಲರ್ ಕೊರೊನಾ ಅಟ್ಟಾಡಿಸ್ತಿದೆ. ಪರಿಸ್ಥಿತಿ ಬಿಗಡಾಯಿಸ್ತಿದ್ದು, ಗಲ್ಲಿ ಗಲ್ಲಿಗೂ ಈ ಹೆಮ್ಮಾರಿ ಸದ್ದಿಲ್ಲದೇ ಎಂಟ್ರಿಯಾಗ್ತಿದೆ. ನಿಮ್ಹಾನ್ಸ್ ಆಸ್ಪತ್ರೆಗೂ ಈ ಹೆಮ್ಮಾರಿ ಲಗ್ಗೆ ಇಟ್ಟಿದ್ದು, ಈ ವೈರಸ್ ನ ಆರ್ಭಟಕ್ಕೆ ಆಸ್ಪತ್ರೆಯ ಐಸಿಯು ವಾರ್ಡ್ ಕಂಪ್ಲೀಟ್ ಕ್ಲೋಸ್ ಆಗಿದೆ.
ರಾಜ್ಯದಲ್ಲಿ ಕೊರೊನಾ ಆರ್ಭಟ ಹೆಚ್ಚಾಗಿದೆ. ಕ್ಷಣ ಕ್ಷಣಕ್ಕೂ ಪರಿಸ್ಥಿತಿ ಕೈ ಮೀರಿ ಹೋಗ್ತಿದೆ. ತಜ್ಞರು ಹೇಳಿದಂತೆ ಮುಂದಿನ ಎರಡು ತಿಂಗಳಲ್ಲಿ ಯಾರು ಊಹಿಸಲಾಗದಷ್ಟು ಸೋಂಕಿನ ಪ್ರಮಾಣ ಸ್ಫೋಟವಾಗುತ್ತಾ ಅನ್ನೋ ನಡುಕ ಶುರುವಾಗಿದೆ. ಈ ಬೆನ್ನಲ್ಲೇ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೂ ಕೊರೊನಾ ಎಂಟ್ರಿ ಕೊಟ್ಟಿದ್ದು, ಹಲವು ಅವಾಂತರಗಳನ್ನ ಸೃಷ್ಟಿ ಮಾಡಿದೆ.
ಡೆಡ್ಲಿ ಕೊರೊನಾ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯ ಕದ ತಟ್ಟಿದೆ. ಆಸ್ಪತ್ರೆಯಲ್ಲಿಯೇ ಒಟ್ಟು 8 ಜನರಿಗೆ ಸೋಂಕು ತಗುಲಿದೆ. ಸೋಂಕಿತರ ಸಂಪರ್ಕದಲ್ಲಿದ್ದವರನ್ನು ಕ್ವಾರಂಟೈನ್ ಮಾಡಲಾಗಿದ್ದು, ವೈದ್ಯರಲ್ಲಿ ಆತಂಕ ಹೆಚ್ಚಿದೆ. ಮಾನಸಿಕ ಅಸ್ವಸ್ಥರಿಗಿರುವ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಓರ್ವ ರೋಗಿಯ ದೇಹಕ್ಕೂ ವೈರಸ್ ವಕ್ಕರಿಸಿದೆ. ಈ ರೋಗಿಯ ಸಂಪರ್ಕದಲ್ಲಿದ್ದ ನಾಲ್ವರನ್ನು ಕೂಡಲೇ ಕ್ವಾರಂಟೈನ್ ಮಾಡಿದ್ದು, ಆಸ್ಪತ್ರೆಯ ಐಸಿಯು ವಾರ್ಡನ್ನು ಕಂಪ್ಲೀಟ್ ಕ್ಲೋಸ್ ಮಾಡಲಾಗಿದೆ. ಇದಕ್ಕೆ ಪರ್ಯಾಯವಾಗಿ ಐಸಿಯು ವಾರ್ಡ್ ನಲ್ಲಿದ್ದ 20 ರೋಗಿಗಳನ್ನ ಪಕ್ಕದ ಬಿಲ್ಡಿಂಗ್‍ಗೆ ಶಿಫ್ಟ್ ಮಾಡಿದ್ದು, ಎಂದಿನಂತೆ ಚಿಕಿತ್ಸೆ ನೀಡಲಾಗುತ್ತಿದೆ. ನ್ಯೂರೋ ಸರ್ಜರಿ ಹಾಗೂ ಸೈಕ್ಯಾಟ್ರಿಯ ತಲಾ ಒಬ್ಬ ರೋಗಿ ಹಾಗೂ ಆಸ್ಪತ್ರೆಯ 6 ಸ್ವಚ್ಛತಾ ಸಿಬ್ಬಂದಿ ಸೇರಿದಂತೆ ಒಟ್ಟು ನಿಮಾನ್ಸ್ ಆಸ್ಪತ್ರೆಯಲ್ಲಿ 8 ಮಂದಿಗೆ ಸೋಂಕು ಹರಡಿದೆ.
ಆಸ್ಪತ್ರೆಗೆ ಬರುವ ಪ್ರತಿಯೊಬ್ಬ ರೋಗಿಗಳಿಗೆ ಸ್ವಾಬ್ ಟೆಸ್ಟ್ ನಡೆಸಲಾಗುತ್ತಿದ್ದು, ಸೋಂಕಿನ ಚೈನ್ ಮುರಿಯಲು ನಿಮ್ಹಾನ್ಸ್ ಆಸ್ಪತ್ರೆಯ ಆಡಳಿತ ಮಂಡಳಿ ಇನ್ನಿಲ್ಲದ ಕಸರತ್ತನ್ನ ನಡೆಸುತ್ತಿದೆ. ಆಸ್ಪತ್ರೆಗೆ ಬರುವ ರೋಗಿಗಳ ಕಂಪ್ಲೀಟ್ ಮಾಹಿತಿಯನ್ನ ಟ್ರೇಸ್ ಮಾಡಿ ಚಿಕಿತ್ಸೆ ನೀಡಲು ನಿರ್ಧರಿಸಿದ್ದಾರೆ. ಐಸಿಯು ಶಿಫ್ಟ್ ಆದರೂ ರೋಗಿಗಳಿಗೆ ಯಾವುದೇ ತೊಂದರೆಯಾಗದಂತೆ ಚಿಕಿತ್ಸೆ ನೀಡಲು ತಜ್ಞ ವೈದ್ಯರೇ ಫುಲ್ ಅಲರ್ಟ್ ಆಗಿದ್ದಾರೆ.
ಹೆಚ್ಚಿನ ಸುದ್ದಿಗಾಗಿ ಲಕ್ಷ್ಮಿ ನ್ಯೂಸ್ ಚಾನಲ್ ಅನ್ನ subscribe ಹಾಗೂ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಲಕ್ಷ್ಮಿ ನ್ಯೂಸ್ ವೆಬ್ ಸೈಟ್ ಫಾಲೋ ಮಾಡಿ*??