ಬೆಂಗಳೂರು: ಕೊರೊನಾದಿಂದ ಲಾಕ್‍ಡೌನ್ ಆಗಿರುವ ಹಸಿರು ವಲಯದಲ್ಲಿರುವ ಜಿಲ್ಲೆಗಳಿಗೆ ಬಂಪರ್ ಸಿಕ್ಕಿದ್ದು, ಈಗ ಲಾಕ್‍ಡೌನ್ ನಿಂದ ವಿನಾಯಿತಿ ಸಿಕ್ಕಿದೆ.
ಗ್ರೀನ್ ಝೋನ್ ನಲ್ಲಿರುವ 14 ಜಿಲ್ಲೆಗಳಿಗೆ ಲಾಕ್ ಡೌನ್ ಸಡಿಲಿಕೆ ಆಗಿದ್ದು, ರೆಡ್ ಝೋನ್ ನಲ್ಲಿ ಈಗ ಇರುವಂತೆ ಲಾಕ್‍ಡೌನ್ ಮುಂದುವರಿಯಲಿದೆ. ಇಂದಿನಿಂದ ಮೇ 3ರವರೆಗೆ ಷರತ್ತುಗಳನ್ನು ವಿಧಿಸಿ ರಾಜ್ಯ ಸರ್ಕಾರ ವಿನಾಯಿತಿ ಪ್ರಕಟಿಸಿದೆ.
ಎಲ್ಲಿ ವಿನಾಯಿತಿ?
ಚಾಮರಾಜನಗರ, ಕೊಪ್ಪಳ, ಚಿಕ್ಕಮಗಳೂರು, ರಾಯಚೂರು, ಚಿತ್ರದುರ್ಗ, ರಾಮನಗರ, ಹಾಸನ, ಶಿವಮೊಗ್ಗ, ಹಾವೇರಿ, ಯಾದಗಿರಿ, ಕೋಲಾರ, ದಾವಣಗೆರೆ, ಉಡುಪಿ, ಕೊಡಗು ಜಿಲ್ಲೆಗೆ ವಿನಾಯಿತಿ ಸಿಕ್ಕಿದೆ. ರಾಮನಗರದಲ್ಲಿ ಕೈಗಾರಿಕೆ ಹೊರತು ಪಡಿಸಿ ಉಳಿದ ಅಂಗಡಿ ಮುಂಗಟ್ಟು ತೆರೆಯಲು ಅವಕಾಶ ಸಿಕ್ಕಿದೆ. ಮಾಲ್ ಮತ್ತು ಮಲ್ಟಿ ಬ್ರಾಂಡ್ ಶಾಪ್ ಗಳಿಗೆ ಅವಕಾಶ ನೀಡಿಲ್ಲ.
ಈ ಜಿಲ್ಲೆಗಳಲ್ಲಿ ಪೂರ್ಣ ಪ್ರಮಾಣದ ಸಿಬ್ಬಂದಿ ಬಳಸಿಕೊಂಡು ಕೈಗಾರಿಕೆಗಳು ಕಾರ್ಯನಿರ್ವಹಿಸುವಂತಿಲ್ಲ. ಶೇ.50 ರಷ್ಟು ಉದ್ಯೋಗಿಗಳನ್ನು ಬಳಸಿಕೊಂಡು ಕಾರ್ಯನಿರ್ವಹಿಸಬೇಕಾಗುತ್ತದೆ. ಕರ್ತವ್ಯದ ವೇಳೆ ಸಾಮಾಜಿಕ ಅಂತರ ಮತ್ತು ಉದ್ಯೋಗಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕೆಂದು ಷರತ್ತು ವಿಧಿಸಲಾಗಿದೆ. ಹಸಿರು ಜಿಲ್ಲೆಗಳಲ್ಲಿ ಮೇ 3ರ ವರೆಗೆ ಮದ್ಯ ಮಾರಾಟ ನಿಷೇಧ ಹಾಗೆಯೇ ಮುಂದುವರಿಯಲಿದೆ.
ಮಂಡ್ಯ, ಬೆಂಗಳೂರು ಗ್ರಾಮಾಂತರ, ತುಮಕೂರು, ಚಿಕ್ಕಬಳ್ಳಾಪುರ, ಉತ್ತರ ಕನ್ನಡ, ಧಾರವಾಡದಲ್ಲಿ ಅಂಗಡಿ ಮತ್ತು ಕೈಗಾರಿಕೆಗೆ ಅನುಮತಿಯನ್ನು ಜಿಲ್ಲಾ ಉಸ್ತುವಾರಿ ಸಚಿವರ ನಿರ್ಧಾರಕ್ಕೆ ಬಿಡಲಾಗಿದೆ.
ವಿನಾಯಿತಿ ಇಲ್ಲ:
ಬೆಂಗಳೂರು ನಗರ, ಬೆಳಗಾವಿ, ಮೈಸೂರು, ವಿಜಯಪುರ, ಬಾಗಲಕೋಟೆ, ಕಲಬರುಗಿ, ಬೀದರ್, ದಕ್ಷಿಣ ಕನ್ನಡದಲ್ಲಿ ಈಗ ಇರುವಂತೆ ಲಾಕ್‍ಡೌನ್ ಮುಂದುವರಿಯಲಿದ್ದು, ಯಾವುದೇ ವಿನಾಯಿತಿಗಳು ಸಿಗುವುದಿಲ್ಲ.