ನವದೆಹಲಿ, -ಡೆಡ್ಲಿ ಕೊರೊನಾ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಜಾರಿಗೊಳಿಸಲಿರುವ ನಾಲ್ಕನೇ ಹಂತದ ಲಾಕ್‍ಡೌನ್ ಮೇ 18 ಜಾರಿಗೆ ಬರಲಿದೆ. ಇದೇ ವೇಳೆ ಆಯ್ದ ನಗರಗಳಲ್ಲಿ ಬಸ್ ಮತ್ತು ವಿಮಾನಗಳ ಸಂಚಾರಕ್ಕೆ ಅತಿ ಶೀಘ್ರದಲ್ಲೇ ಅವಕಾಶ ಲಭಿಸುವ ಸಾಧ್ಯತೆ ಇದೆ.
ಶ್ರಮಿಕ್ ಎಕ್ಸ್‍ಪ್ರೆಸ್, ವಿಶೇಷ ರೈಲುಗಳನ್ನು ಹೊರತುಪಡಿಸಿ, ಉಳಿದೆಲ್ಲ ರೈಲುಗಳ ಸಂಚಾರವನ್ನು ಜೂ.30ರವರೆಗೆ ಭಾರತೀಯ ರೈಲ್ವೆ ರದ್ದುಗೊಳಿಸಿದೆ. ಆದರೆ ಕೆಲವು ನಗರಗಳು ಮತ್ತು ಪ್ರದೇಶಗಳಲ್ಲಿ ಬಸ್ ಮತ್ತು ವಿಮಾನಗಳ ಸಂಚಾರಕ್ಕೆ ಅವಕಾಶ ದೊರೆಯುವುದರಿಂದ ಜನರಿಗೆ ಅನುಕೂಲವಾಗಲಿದೆ.
ಕೋವಿಡ್-19 ವೈರಸ್ ಹಾವಳಿ ನಿಯಂತ್ರಿತ ಪ್ರದೇಶಗಳು ಮತ್ತು ನಗರಗಳಲ್ಲಿ ಬಸ್‍ಗಳು, ಖಾಸಗಿ ವಾಹನಗಳು ಮತ್ತು ವಿಮಾನಗಳ ಸಂಚಾರಕ್ಕೆ ಅನುವು ಮಾಡಿಕೊಡಲು ಈಗಾಗಲೇ ನೀಲನಕ್ಷೆಯೊಂದು ಸಿದ್ದವಾಗಿದೆ.
ಮೇ 18ರಿಂದ ಜಾರಿಗೆ ಬರಲಿರುವ ಲಾಕ್‍ಡೌನ್-4ಗೆ ಪೂರ್ವಭಾವಿಯಾಗಿ ಕೇಂದ್ರ ಸರ್ಕಾರದಿಂದ ರಾಜ್ಯಗಳ ವಿವರಗಳು ಮತ್ತು ಅವುಗಳು ಪರಿಸ್ಥಿತಿಯನ್ನು ಹೇಗೆ ನಿಭಾಯಿಸುತ್ತವೆ ಎಂಬಿತ್ಯಾದಿ ಅಂಶಗಳ ಆಧಾರದ ಮೇಲೆ ಆಯಾ ನಗರಗಳು ಮತ್ತು ಪ್ರದೇಶಗಳ ಆಯ್ಕೆ ನಡೆಯಲಿದೆ.
ಈ ಹಿಂದಿನ ಲಾಕ್‍ಡೌನ್‍ಗಳಿಗಿಂತ ವಿಭಿನ್ನ ಸ್ವರೂಪದಲ್ಲಿರುವ ಲಾಕ್-4.0ಗಾಗಿ ಸಡಿಲಿಕೆ ಮತ್ತು ನಿರ್ಬಂಧಗಳ ಹೊಸ ಮಾರ್ಗಸೂಚಿಗಳಿಗೆ ಕೇಂದ್ರ ಗೃಹ ಸಚಿವಾಲಯ ಅಂತಿಮ ರೂಪ ನೀಡುತ್ತಿದೆ.
ಗೃಹ ಸಚಿವಾಲಯದ ಉನ್ನತ ಮೂಲಗಳ ಪ್ರಕಾರ ಹಾಟ್‍ಸ್ಪಾಟ್, ರೆಡ್‍ಝೋನ್ ಸೀಲ್‍ಡೌನ್ ಮತ್ತು ಕಂಟೈನ್ಮೆಂಟ್ ಪ್ರದೇಶಗಳನ್ನು ಹೊರತುಪಡಿಸಿ ಆಯ್ಕೆ ಮಾಡಿದ ನಗರ/ಪ್ರದೇಶಗಳಲ್ಲಿ ಬಸ್‍ಗಳು ಮತ್ತು ವಿಮಾನ ಸಂಚಾರಗಳಿಗೆ ಅನುವು ಮಾಡಿಕೊಡಲಾಗುತ್ತದೆ.