ಶಿವಮೊಗ್ಗ: ಪ್ರೇರಣಾ ಎಜುಕೇಶನಲ್ ಮತ್ತು ಸೋಷಿಯಲ್ ಟ್ರಸ್ಟ್ ಹಾಗೂ ಬಿ.ಎಸ್ ಯಡಿಯೂರಪ್ಪನವರ ಅಭಿಮಾನಿ ಬಳಗದವರ ವತಿಯಿಂದ ಬಿಎಸ್‍ವೈ ಅವರ 78ನೇ ಹುಟ್ಟು ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ. ಈ ಹಿನ್ನೆಲೆ ಫೆ. 27ರಂದು ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ ಎಂದು ಸಂಸದ ಬಿ.ವೈ ರಾಘವೇಂದ್ರ ಹೇಳಿದ್ದಾರೆ.
ನಗರದ ತಮ್ಮ ನಿವಾಸದಲ್ಲಿ ಇಂದು ಸುದ್ದಿಗೊಷ್ಠಿ ನಡೆಸಿ ಈ ಬಗ್ಗೆ ಮಾಹಿತಿ ನೀಡಿದ ಅವರು, ನಗರದ ವೀರಶೈವ ಕಲ್ಯಾಣ ಮಂದಿರದಲ್ಲಿ ಈ ಶಿಬಿರ ಆಯೋಜಿಸಲಾಗುತ್ತಿದೆ. ಈ ಶಿಬಿರದಲ್ಲಿ ಹೃದಯ ವಿಭಾಗ, ಜನರಲ್ ಮೆಡಿಸನ್, ಶ್ವಾಸಕೋಶ ವಿಭಾಗ, ಕೀಲು ಮೂಳೆ ಮತ್ತು ಕೀಲು ಮರು ಜೋಡಣೆ ವಿಭಾಗ, ಸ್ತ್ರೀರೋಗ ವಿಭಾಗ, ಬಿಪಿ, ಇಸಿಜಿ, ಸಕ್ಕರೆ ಪ್ರಮಾಣ ಪರೀಕ್ಷೆ ಮತ್ತು ತಜ್ಞ ವೈದ್ಯರೊಂದಿಗೆ ಸಮಾಲೋಚನೆ ಇರುತ್ತದೆ ಎಂದು ತಿಳಿಸಿದರು.
ಹಾಗೆಯೇ ಶಿಬಿರದಲ್ಲಿ ತಪಾಸಣೆಗೆ ಒಳಗಾಗುವವರಿಗೆ ಸಾಮಾನ್ಯ ಔಷಧಿಗಳನ್ನು ವೈದ್ಯರ ಸಲಹೆ ಮೇರೆಗೆ ಉಚಿತವಾಗಿ ನೀಡಲಾಗುವುದು. ಶಿವಮೊಗ್ಗ ನಗರ, ಗ್ರಾಮಾಂತರ ಮತ್ತು ಜಿಲ್ಲೆಯ ಎಲ್ಲರೂ ಈ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕೆಂದು ರಾಘವೇಂದ್ರ ಅವರು ಕೋರಿದರು.
ಅಲ್ಲದೇ ಬಿಎಸ್‍ವೈ ಅವರ ಜನ್ಮದಿನದ ಅಂಗವಾಗಿ ಜಿಲ್ಲೆಯಲ್ಲಿ 1 ಲಕ್ಷ ಆಯುಷ್ಮಾನ್ ಭಾರತ ಆರೋಗ್ಯ ಕಾರ್ಡ್ ವಿತರಣೆ ಮಾಡುವ ಗುರಿ ಕೂಡ ಹೊಂದಲಾಗಿದ್ದು, ಪ್ರೇರಣಾ ಎಜುಕೇಶನ್ ಟ್ರಸ್ಟ್ ಹಾಗೂ ಇತರೆ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಫೆಬ್ರವರಿ 27ರಿಂದ 29ರವರೆಗೆ ಜಿಲ್ಲೆಯ 271 ಹಾಗೂ ಬೈಂದೂರು ವಿಧಾನಸಭಾ ಕ್ಷೇತ್ರ ಸೇರಿಕೊಂಡು 300ಕ್ಕೂ ಹೆಚ್ಚು ಬಾಪೂಜಿ ಸೇವಾ ಕೇಂದ್ರದಲ್ಲಿ ಸಾರ್ವಜನಿಕರಿಗೆ ಆರೋಗ್ಯ ಕಾರ್ಡ್ ಉಚಿತವಾಗಿ ವಿತರಣೆ ಮಾಡಲು ಯೋಜಿಸಲಾಗಿದೆ ಎಂದರು.