ಬೆಂಗಳೂರು: ರಾಜ್ಯದ ಹಲವೆಡೆ ಸಿಡಿಲು, ಗುಡುಗು ಸಹಿತ ಮಳೆ ಸುರಿದಿದ್ದು, ಸಿಡಿಲಿನ ಹೊಡೆತಕ್ಕೆ ನಿವೃತ್ತ ಯೋಧರೊಬ್ಬರು ಸಾವನ್ನಪ್ಪಿರುವ ಘಟನೆ ಚಿಕ್ಕೋಡಿಯಲ್ಲಿ ನಡೆದಿದೆ.
ಚಿಕ್ಕೋಡಿ ತಾಲೂಕಿನ ಕರೋಶಿ ಗ್ರಾಮದ ನಿವೃತ್ತ ಯೋಧ ಚನ್ನಬಸಪ್ಪ ರುದ್ರಪ್ಪ ಚಾಜಗೌಡ (50) ಮೃತರಾಗಿದ್ದಾರೆ. ಸಂಜೆ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಗುಡುಗು, ಮಿಂಚು ಸಹಿತ ಭಾರೀ ಮಳೆಯಾಗಿದ್ದು, ಈ ವೇಳೆ ಸಿಡಿಲು ಬಡಿದು ಚನ್ನಬಸಪ್ಪ ಸ್ಥಳದಲ್ಲೇ ಸಾವನಪ್ಪಿದ್ದಾರೆ. ಚನ್ನಬಸಪ್ಪ ಅವರು ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಸುತ್ತಿದ್ದರು. ಕೆಲಸದಿಂದ ನಿವೃತ್ತಿ ಹೊಂದಿ ಒಂದು ತಿಂಗಳಾಗಿತ್ತು. ಮೃತರಿಗೆ 4 ಜನ ಹೆಣ್ಣುಮಕ್ಕಳು, ಓರ್ವ ಗಂಡು ಮಗುವಿದೆ. ಚಿಕ್ಕೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮಲೆನಾಡಲ್ಲಿ ಸಹ ಮಳೆ ಅಬ್ಬರ ಜೋರಾಗಿದ್ದು, ಸಿಡಿಲು ಬಡಿದು ಮೂವರು ಮಹಿಳಾ ಕಾರ್ಮಿಕರು ಸಾವನ್ನಪ್ಪಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹಿತ್ಲುಮಕ್ಕಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಜ್ಯೋತಿ (28), ಮಾದಮ್ಮ(65), ಮಾರಿ (27) ಮೃತ ದುರ್ದೈವಿಗಳು. ಮೃತರು ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಪಾಪರೆಟ್ಟಿ ತಾಲೂಕಿನವರು. ಕೂಲಿ ಕೆಲಸಕ್ಕೆಂದು ಮೂಡಿಗೆರೆಗೆ ಆಗಮಿಸಿದ್ದರು. ತರೀಕೆರೆಯಲ್ಲಿ ಸಹ ಮಳೆಯ ಆರ್ಭಟ ಜೋರಾಗಿತ್ತು.
ಭಾರೀ ಗಾಳಿ ಸಹಿತ ಮಳೆಯಾಗಿದ್ದು, ಆಲಿಕಲ್ಲು ಮಳೆಗೆ ಜನ ತತ್ತರಿಸಿದ್ದಾರೆ. ಕಲ್ಲು ಸುರಿದಂತೆ ಆಲಿಕಲ್ಲುಗಳು ಸುರಿದಿದ್ದು, ಜನ ಭಯಭೀತರಾಗಿದ್ದಾರೆ. ಸತತ ಒಂದು ಗಂಟೆಗೂ ಹೆಚ್ಚು ಕಾಲ ಮಳೆ ಸುರಿದಿದೆ. ಗಾಳಿ ಮಳೆಯ ಆರ್ಭಟಕ್ಕೆ ರಸ್ತೆ ಬದಿಯ ಮರಗಳು, ವಿದ್ಯತ್ ಕಂಬಗಳು ಧರೆಗುರುಳಿವೆ.
ಹಾವೇರಿ, ಶಿವಮೊಗ್ಗ, ದಾವಣಗೆರೆ, ಗದಗ, ಯಾದಗಿರಿ ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿದಿದ್ದು, ಶಿವಮೊಗ್ಗ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಒಂದು ಗಂಟೆಗೂ ಹೆಚ್ಚು ಕಾಲ ಗುಡುಗು ಮಿಂಚು ಸಹಿತ ಭಾರೀ ಮಳೆಯಾಗಿದೆ. ಹಾವೇರಿಯಲ್ಲಿ ಬ್ಯಾಡಗಿ, ಹಿರೇಕೆರೂರು ಹಾಗೂ ಸುತ್ತಲಿನ ಭಾಗದಲ್ಲಿ ಮಳೆಯಾಗಿದೆ. ಯಾದಗಿರಿ ಜಿಲ್ಲೆಯ ಶಹಪುರ, ಸುರಪುರದಲ್ಲಿ ಆಲಿಕಲ್ಲು ಮಳೆಯಾಗಿದೆ.