ಬೆಂಗಳೂರು: ಕೊರೊನಾ ವೈರಸ್‍ನಿಂದ ಆಗುತ್ತಿರುವ ಆರ್ಥಿಕ ಸಮಸ್ಯೆಯನ್ನು ಸರಿದೂಗಿಸಲು ಸರ್ಕಾರಿ ನೌಕರರ ಸಂಬಳ ಕಡಿತವಾಗುತ್ತಾ ಎನ್ನುವ ಪ್ರಶ್ನೆ ಎದ್ದಿದೆ. ಈ ಪ್ರಶ್ನೆಗೆ ಸಂಬಂಧಿಸಿದಂತೆ ಸಿಎಂ ಸದ್ಯಕ್ಕೆ ಇನ್ನೂ ತೀರ್ಮಾನ ತೆಗೆದುಕೊಂಡಿಲ್ಲ ಎಂದು ಉತ್ತರಿಸಿದ್ದಾರೆ.
ಪಬ್ಲಿಕ್ ಟಿವಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ನಮ್ಮ ಹಣಕಾಸು ಪರಿಸ್ಥಿತಿ ಸರಿ ಇಲ್ಲ. ಆದರೂ ಸರ್ಕಾರಿ ನೌಕರರ ಏಪ್ರಿಲ್ ತಿಂಗಳ ಸಂಬಳ ನಿಲ್ಲಿಸಬೇಡಿ ಎಂದು ಸೂಚಿಸಿದ್ದೇನೆ. ಆದರೆ ಆ ನಂತರದ ತಿಂಗಳ ಬಗ್ಗೆ ಗೊತ್ತಿಲ್ಲ. ಕಟ್ ಮಾಡಬೇಕೇ? ಬೇಡವೇ ಎನ್ನುವ ಬಗ್ಗೆ ಕೊರೊನಾ ಸ್ಥಿತಿ ನೋಡಿಕೊಂಡು ತೀರ್ಮಾನ ಮಾಡುತ್ತೇವೆ ಎಂದು ಪ್ರತಿಕ್ರಿಯಿಸಿದರು.
ಎಷ್ಟು ಕೊಡಬಹುದು, ಎಷ್ಟು ಕಟ್ ಮಾಡಬಹುದು ಎನ್ನುವುದು ಇನ್ನೂ ತೀರ್ಮಾನವಾಗಿಲ್ಲ. ಇಡೀ ದೇಶದಲ್ಲಿ ಆರ್ಥಿಕ ಪರಿಸ್ಥಿತಿ ಸರಿಯಲ್ಲ. ರಾಜ್ಯಕ್ಕೆ ಬರುವ ಆದಾಯ ಕಡಿಮೆಯಾಗಿದೆ. ಅಭಿವೃದ್ಧಿ ಕಾರ್ಯಗಳು ಸ್ಥಗಿತವಾಗಿದೆ. ಮುಂದೇನು ಮಾಡಬೇಕು ಅಂತ ದಿಕ್ಕು ತೋಚದೇ ಕೈ ಕಟ್ಟಿ ಕುಳಿತುಕೊಂಡಿದ್ದೇವೆ ಎಂದು ತಿಳಿಸಿದರು
ಕೊರೊನಾ ನಿಯಂತ್ರಣಕ್ಕೆ ಬಂದರೆ 14ರ ನಂತರ ಆರ್ಥಿಕ ಚಟುವಟಿಕೆಗಳು ಆರಂಭಗೊಳ್ಳುತ್ತದೆ. ಅದಕ್ಕಾಗಿ ನಾನು ಜನರ ಜೊತೆ ಕೈಮುಗಿದು ಲಾಕ್‍ಡೌನ್ ನಿಯಮಗಳನ್ನು ಪಾಲಿಸಿ ಎಂಬುದಾಗಿ ಕೇಳಿಕೊಳ್ಳುತ್ತೇನೆ ಎಂದು ಮನವಿ ಮಾಡಿದರು.